ADVERTISEMENT

ಬ್ಯಾಂಕ್‌ಗಳಲ್ಲಿ ಹಣದ ಕೊರತೆ

ಕೆ.ನರಸಿಂಹ ಮೂರ್ತಿ
Published 15 ಮಾರ್ಚ್ 2017, 6:40 IST
Last Updated 15 ಮಾರ್ಚ್ 2017, 6:40 IST
ಬ್ಯಾಂಕ್‌ಗಳಲ್ಲಿ ಹಣದ ಕೊರತೆ
ಬ್ಯಾಂಕ್‌ಗಳಲ್ಲಿ ಹಣದ ಕೊರತೆ   

ಬಳ್ಳಾರಿ: ನೋಟು ರದ್ದತಿ ಬಳಿಕ ಹೊಸ ನೋಟುಗಳ ಕೊರತೆಯನ್ನು ಎದುರಿಸಿದ್ದ ಬ್ಯಾಂಕ್‌ಗಳು, ಸೋಮವಾರದಿಂದ ಹಣ ಹಿಂತೆಗೆತದ ಮಿತಿಯನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ರದ್ದುಗೊಳಿಸಿದ ಬಳಿಕ, ಮತ್ತೆ ನಗದು ಕೊರತೆಯನ್ನು ಎದುರಿಸುತ್ತಿವೆ.

ವಿವಿಧ ಸೇವಾ ಶುಲ್ಕ ವಸೂಲಿ ಸಾಧ್ಯತೆಯಿಂದ ನಿರಾಶೆಗೊಂಡಿರುವ ಗ್ರಾಹಕರು, ಎರಡು ದಿನದಲ್ಲಿ ಹೆಚ್ಚಿನ ಹಣವನ್ನು ಬ್ಯಾಂಕ್‌ಗಳಿಂದ ವಾಪಸು ಪಡೆದಿದ್ದಾರೆ. ಹೀಗಾಗಿ ಬ್ಯಾಂಕ್‌ಗಳು ಗ್ರಾಹಕರು ಕೇಳುವಷ್ಟು ಹಣವನ್ನು ಪೂರೈಸುವ ಸ್ಥಿತಿಯಲ್ಲಿ ಇಲ್ಲ. ‘ಬ್ಯಾಂಕಿನಲ್ಲಿ ಏಕೆ ಹಣ ಇಲ್ಲ’ ಎಂದು ಕೇಳುವ ಗ್ರಾಹಕರಿಗೆ ಸಮರ್ಪಕ ಉತ್ತರವೂ ದೊರಕುತ್ತಿಲ್ಲ.

ಪರದಾಟ: ಹಣಕ್ಕೆ ಗ್ರಾಹಕರಂತೆಯೇ ಈಗ ಬ್ಯಾಂಕ್‌ಗಳು ಕೂಡ ಪರದಾಡು ತ್ತಿವೆ. ಮಂಗಳವಾರ ಇಲ್ಲಿನ ಕೆನರಾ ಬ್ಯಾಂಕ್‌ ಶಾಖೆಗೆ ‘ಪ್ರಜಾವಾಣಿ’ ಪ್ರತಿನಿಧಿ ಭೇಟಿ ನೀಡಿದ ಸಮಯದಲ್ಲಿ ಅಲ್ಲಿನ ಅಧಿಕಾರಿಯೊಬ್ಬರ ಜತೆ ಗ್ರಾಹಕರೊ ಬ್ಬರು, ತಮ್ಮ ಹಣಕ್ಕಾಗಿ ಮನವಿ ಸಲ್ಲಿಸುತ್ತಿದ್ದರು. ಕೆಲವು ಲಕ್ಷ ರೂಪಾಯಿ ಹಣ ತುರ್ತಾಗಿ ಬೇಕಾಗಿದೆ ಎಂಬ ಅವರ ಮನವಿಪೂರ್ವಕ ಆಗ್ರಹವನ್ನು ಮನ್ನಿ ಸುವ ಸ್ಥಿತಿಯಲ್ಲಿ ಅಧಿಕಾರಿ ಇರಲಿಲ್ಲ.

ADVERTISEMENT

‘ಕಳೆದ ಜನವರಿಯಲ್ಲೇ ಆರ್‌ಬಿಐಗೆ ಸಲ್ಲಿಸಿದ್ದ ಹಣದ ಬೇಡಿಕೆ ಇನ್ನೂ ಪೂರೈಕೆಯಾಗಿಲ್ಲ. ಕರೆನ್ಸಿ ಚೆಸ್ಟ್‌ಗೆ ನಗದು ಬಂದಿಲ್ಲದಿರುವದರಿಂದ, ಬ್ಯಾಂಕ್‌ಗಳ ಶಾಖೆಗಳಿಗೂ ವಿತರಣೆಯಾಗಿಲ್ಲ. ಹೀಗಾಗಿ ಕಾಯಬೇಕಿದೆ’ ಎಂದು ಅವರು ತಿಳಿವ ಳಿಕೆ ನೀಡಿದರು.

ಬೆಂಗಳೂರಿನಿಂದ ಹಣ ತರಬೇಕು: ಹಣದ ಕೊರತೆ ಕುರಿತು ಪ್ರತಿಕ್ರಿಯಿಸಿದ ಲೀಡ್ ಬ್ಯಾಂಕ್‌ ವ್ಯವಸ್ಥಾಪಕ ವೈ.ಎ.ವಾಜಂತ್ರಿ, ‘ಬೇಡಿಕೆಗೆ ತಕ್ಕಷ್ಟು ಹಣ ಕರೆನ್ಸಿ ಚೆಸ್ಟ್‌ಗಳಿಗೆ ನಿರಂತರವಾಗಿ ಪೂರೈಕೆ ಆಗುವುದಿಲ್ಲ. ಆಗ ಬೆಂಗಳೂರಿನ ಆರ್‌ಬಿಐ ಶಾಖೆಗೆ ತೆರಳಿ ಅಲ್ಲಿಂದಲೇ ಹಣ ತರ ಲಾಗುತ್ತಿದೆ’ ಎಂದು ಹೇಳಿದರು.

‘ಫೆಬ್ರುವರಿಯಲ್ಲಿ ಒಮ್ಮೆ, ಮಾರ್ಚ್‌ ನಲ್ಲಿ ಮತ್ತೊಮ್ಮೆ ಬೆಂಗಳೂರಿಗೆ ತೆರಳಿ ಹಣ ತರಲಾಗಿತ್ತು. ಪ್ರತಿ ಬಾರಿ ಸುಮಾರು ₹ 40 ಕೋಟಿ ತಂದು ಶಾಖೆಗಳಿಗೆ ವಿತರಿಸಿದ್ದೆವು’ ಎಂದು ತಿಳಿಸಿದರು.

***

ಬ್ಯಾಂಕಿಂಗ್  ಮೇಲೆ  ಕುಂದಿದ  ವಿಶ್ವಾಸ

ಕೇಂದ್ರ ಸರ್ಕಾರದ ಹೊಸ ನಿರ್ಧಾರಗಳಿಂದಾಗಿ ಬ್ಯಾಂಕ್‌ಗಳ ಮೇಲಿನ ಗ್ರಾಹಕರ ವಿಶ್ವಾಸ ಕುಸಿಯುತ್ತಿದೆ. ಹೀಗಾಗಿ ಒಮ್ಮೆ ಖಾತೆಯಿಂದ ಹಣವನ್ನು ತೆಗೆದ ಗ್ರಾಹಕರು ಮತ್ತೆ ಖಾತೆಗೆ ಮರುಪಾವತಿ ಮಾಡುವ ಸಾಧ್ಯತೆ ಕಡಿಮೆ ಎಂದು ಬ್ಯಾಂಕಿನ ಅಧಿಕಾರಿಯೊಬ್ಬರು ಹೇಳಿದರು.

ಠೇವಣಿ ಇಟ್ಟ ಹಣಕ್ಕೆ ವಿವಿಧ ಸೇವಾ ಶುಲ್ಕ ಪಾವತಿಸಬೇಕು ಎನ್ನುವುದಾದರೆ ಬ್ಯಾಂಕುಗಳಲ್ಲಿ ಹಣ ಇಡುವ ಅಗತ್ಯ ಇಲ್ಲ ಎಂಬ ಅಭಿಪ್ರಾಯ ಕೂಡ ಗ್ರಾಹಕರಿಂದ ಗ್ರಾಹಕರಿಗೆ ಹಬ್ಬುತ್ತಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.