ADVERTISEMENT

ಭತ್ತ ಬಿತ್ತನೆಗೆ ರೈತರ ಒಲವು

ಕೆ.ನರಸಿಂಹ ಮೂರ್ತಿ
Published 4 ಆಗಸ್ಟ್ 2015, 9:21 IST
Last Updated 4 ಆಗಸ್ಟ್ 2015, 9:21 IST

ಬಳ್ಳಾರಿ: ಹೆಚ್ಚು ನೀರು ಮತ್ತು ಹಣವನ್ನು ಬೇಡುವ ಭತ್ತದ ಸಸಿ ನಾಟಿ ಪದ್ಧತಿಯನ್ನು ಕೈಬಿಟ್ಟ ಜಿಲ್ಲೆಯ ಹಲವು ರೈತರು ಕಡಿಮೆ ನೀರು ಮತ್ತು ಹಣ ಬಯಸುವ ಭತ್ತದ ಬಿತ್ತನೆ ಪದ್ಧತಿ ಅನುಸರಿಸಲು ಮುಂದಾಗಿ­ದ್ದಾರೆ. ಈ ಮೂಲಕ, ಹೆಚ್ಚಿನ ನೀರು ಮತ್ತು ಸಾಲದ ಅವಲಂಬನೆಯಿಂದಲೂ ದೂರ ಉಳಿಯಲು ನಿರ್ಧರಿಸಿದ್ದಾರೆ.

ಈ ಬಾರಿ ಜಿಲ್ಲೆಯಲ್ಲಿ ಸಕಾಲಕ್ಕೆ ಮಳೆಯಾಗಿಲ್ಲ. ತುಂಗಭದ್ರಾ ಬಲದಂಡೆ ಕಾಲುವೆಯಲ್ಲೂ ಇತ್ತೀಚೆಗಷ್ಟೇ ನೀರು ಬಂದಿದೆ. ಇಂಥ ಸನ್ನಿವೇಶದಲ್ಲಿ ಜಿಲ್ಲೆಯ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಬೆಳೆಯುವ ರೈತರು ಕಡಿಮೆ ನೀರು ಬಯಸುವ ನೇರ ಬಿತ್ತನೆ ಪದ್ಧತಿಗೆ ಮೊರೆ ಹೋಗಿದ್ದಾರೆ.

ನಾಟಿ ಪದ್ಧತಿಯಲ್ಲಿ ಭತ್ತ ಬೆಳೆಯಬೇಕಾದರೆ ಜಮೀನಿನಲ್ಲಿ ಅತಿಯಾಗಿ ನೀರು ನಿಲ್ಲಿಸಬೇಕು. ಬಿತ್ತನೆಗೆ ಮುಂಚೆಯೇ ಸಸಿಮಡಿಯನ್ನು ಸಿದ್ಧಪಡಿ­ಸಬೇಕು. ಬಳಿಕ ಸಸಿಗಳನ್ನು ನಾಟಿ ಮಾಡಲು ಕೂಲಿಯಾಳುಗಳನ್ನು ಆಶ್ರಯಿ­ಸ­ಲೇ­ಬೇಕು. ಆದರೆ ನೇರ ಬಿತ್ತನೆಯಲ್ಲಿ ಈ ಸಮಸ್ಯೆಗಳೇ ಇಲ್ಲ ಎನ್ನುತ್ತಾರೆ ರೈತರು.

ಜಿಲ್ಲೆಯ ಬಳ್ಳಾರಿ, ಹೊಸಪೇಟೆ ಮತ್ತು ಸಿರುಗುಪ್ಪ ತಾಲ್ಲೂಕಿನ ರೈತರು, ಸಾವಿರಾರು ಎಕರೆಯಲ್ಲಿ ಬಿತ್ತನೆ ಮೂಲಕ ಭತ್ತ ಬೆಳೆದಿದ್ದು, ಅವರನ್ನು ಅನುಸರಿಸಿ ಇನ್ನೂ ಹಲವು ರೈತರು ಈ ಬಾರಿ ನೇರ ಬಿತ್ತನೆ ಮಾಡಿರುವುದು ವಿಶೇಷ.

ಬಳ್ಳಾರಿ ತಾಲ್ಲೂಕಿನ ಶ್ರೀಧರಗಡ್ಡೆ, ರಾರಾವಿ, ಸಿರುಗುಪ್ಪ ತಾಲ್ಲೂಕಿನ  ಕರೂರು, ಹಚ್ಚೊಳ್ಳಿ, ದರೂರು, ಕೆಂಚ­ನಗಡ್ಡ ಗ್ರಾಮಗಳಲ್ಲಿ ರೈತರು ಕಳೆದ ವರ್ಷ ನೇರ ಬಿತ್ತನೆ ಮೂಲಕ ಭತ್ತ ಬೆಳೆದಿದ್ದಾರೆ.

ಶ್ರೀಧರಗಡ್ಡೆ ಗ್ರಾಮ: ‘ತಾಲ್ಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ಕಳೆದ ವರ್ಷ ರೈತ ಬಸವರಾಜು ಮೊದಲ ಬಾರಿಗೆ ನೇರ ಬಿತ್ತನೆ ಮೂಲಕ ಭತ್ತ ಬೆಳೆದಿದ್ದನ್ನು ನೋಡಿದ ಇತರೆ ರೈತರು ಅದೇ ಪದ್ಧತಿ­ಯನ್ನು ಅನುಸರಿಸಲಾ­ರಂಭಿಸಿ, ಲಾಭ ಪಡೆಯಲು ಮುಂದಾಗಿದ್ದಾರೆ.

‘ಬಿತ್ತನೆ ಮಾಡುವುದರಿಂದ, ನಾಟಿ ಪದ್ಧತಿಯಲ್ಲಿ ಭೂಮಿಯನ್ನು ಸಿದ್ಧಪಡಿಸಲು ಮಾಡುವ ಖರ್ಚನ್ನು ಉಳಿಸಬಹುದು ಅಲ್ಲದೇ ನಾಟಿ ಪದ್ಧತಿಗೆ ಬಳಸುವ ಬಿತ್ತನೆ ಬೀಜದ ಅರ್ಧದಷ್ಟು ಬೀಜ ಸಾಕು ಎಂಬುದು ರೈತರ ಅನಿಸಿಕೆ.

ನೀರನ್ನು ಉಳಿಸಿ ಹೆಚ್ಚು ಪ್ರದೇಶಕ್ಕೆ ನೀರಾವರಿ ಒದಗಿಸಬಹುದು. ರಸಗೊಬ್ಬರ ಬಳಕೆ ಪ್ರಮಾಣವೂ ಕಡಿಮೆಯಾಗುತ್ತದೆ’ ಎಂಬುದು ಮೊದಲ ಬಾರಿಗೆ ನೇರ ಬಿತ್ತನೆ ಮಾಡುತ್ತಿರುವ ಅದೇ ಗ್ರಾಮದ ರೈತ ಹುಳೇನೂರು ಸಿದ್ಧಪ್ಪ ಅವರ ನುಡಿ. ಅವರು ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಈಗಾಗಲೇ ನೇರ ಬಿತ್ತನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.