ADVERTISEMENT

ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಆಗ್ರಹ

ಅಖಿಲ ಭಾರತ ಕಿಸಾನ್ ಸಭಾ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರಿಂದ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 11:21 IST
Last Updated 18 ಫೆಬ್ರುವರಿ 2017, 11:21 IST
ಕೂಡ್ಲಿಗಿ: ಭದ್ರಾ ಮೇಲ್ದಂಡೆ ಯೋಜನೆ ಜಾರಿ ಮಾಡಿ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವುದು ಸೇರಿ ತಮ್ಮ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಹಾಗೂ ರೈತರು ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. 
 
ಈ ಸಂದರ್ಭದಲ್ಲಿ ಮಾತನಾಡಿದ ಕಿಸಾನ್ ಸಭಾದ ರಾಜ್ಯ ಉಪಾಧ್ಯಕ್ಷ ಹೊಸಹಳ್ಳಿ ಮಲ್ಲೇಶ್  ತಾಲ್ಲೂಕಿನಲ್ಲಿ ಭೀಕರ ಬರಗಾಲ ತಲೆದೋರಿದೆ. ಆದರೆ ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ನಿರ್ಲಕ್ಷ್ಯ ವಹಿಸಿದ್ದು, ರೈತರ ಸಾಲ ಮನ್ನಾ ಮಾಡುವಲ್ಲಿಯೂ ರಾಜಕೀಯ ಮಾಡುತ್ತಿದ್ದಾರೆ. ತಾಲ್ಲೂಕಿ­ನಲ್ಲಿ ಜನರು ನೀರಿಗಾಗಿ ಪರದಾಡು­ತ್ತಿದ್ದು, ಕುಡಿಯಲು ಶುದ್ಧ ನೀರು ಒದಗಿಸಲು ಇಲ್ಲಿನ ಜನಪ್ರತಿನಿಧಿಗಳಿಗೆ ಪುರುಸೊತ್ತಿಲ್ಲ. ಮಣ್ಣು ಮಾರಿ, ಜನರಿಂದ ಆರಿಸಿ ಹೋದವರು ಜನರಿಗೆ ದೂಳು ನೀಡಿ, ಅವರನ್ನು ಮರೆತಿದ್ದಾರೆ ಎಂದು ದೂರಿದರು. 
 
ಅಕ್ರಮವಾಗಿ ಕೆರೆಗಳಲ್ಲಿ ಕೊರೆಸಿರುವ ಕೊಳವೆ ಬಾವಿಗಳನ್ನು ವಶಪಡಿಸಿ­ಕೊಂಡು ಕುಡಿಯುವ ನೀರಿಗಾಗಿ ಉಪಯೋಗಿಸಬೇಕು. ತಾಲ್ಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿಮಾಡಬೇಕು. ಸಕಾಲದಲ್ಲಿ ಜನರಿಗೆ ಉದ್ಯೋಗ ನೀಡಲು ಸಾಧ್ಯವಾಗದೆ ಹೋದರೆ ನಿರುದ್ಯೋಗ ಭತ್ಯೆ ನೀಡಬೇಕು. ರೈತರ ಹೊಲಗಳಿಗೆ ನಿರಂತರ ನೀರು ಹರಿಸಲು ಭದ್ರಾ ಮೇಲ್ದಂಡೆ ಯೋಜನೆಯನ್ನು ತಾಲ್ಲೂಕಿಗೂ ವಿಸ್ತರಿಸಬೇಕು ಎಂದು ಸರ್ಕಾರವನ್ನು ಅವರು ಒತ್ತಾಯಿಸಿದರು.
 
ಅಖಿಲ ಭಾರತ ಕಿಸಾನ್ ಸಭಾದ ಗೌರವಧ್ಯಕ್ಷ ಎಚ್. ವೀರಣ್ಣ, ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷೆ ಜ್ಯೋತಿ, ತಾಲ್ಲೂಕು ಘಟಕದ ಅಧ್ಯಕ್ಷೆ ರೇಣುಕಮ್ಮ, ಕಿಸಾನ್ ಸಭಾ ತಾಲ್ಲೂಕು ಅಧ್ಯಕ್ಷ ರಾಜುಗೌಡ, ವಿದ್ಯಾರ್ಥಿ ಫೆಡರೇಷನ್ ಅಧ್ಯಕ್ಷ ಕಟ್ಟೆ ಬಸಪ್ಪ, ವಿದ್ಯಾರ್ಥಿ ಮುಖಂಡರಾದ ಪಂಪಾಪತಿ, ಹಮೀರ್, ವಿನಯ್ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
 
ತಹಶೀಲ್ದಾರ್ ಎಲ್. ಕೃಷ್ಣಮೂರ್ತಿ ಮನವಿ ಪತ್ರ ಸ್ವೀಕರಿಸಿದರು. ಇದಕ್ಕೂ ಮುನ್ನ ಗಾಂಧಿ ಚಿತಾ ಭಸ್ಮವಿರುವ ಹುತಾತ್ಮರ ಸ್ಮಾರಕದಿಂದ ಹೊರಟ ಪ್ರತಿಭಟನಾ ಮರೆವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲು ಸರ್ಕಾರದ ವಿರುದ್ದ ಘೋಷಣೆ ಕೂಗುತ್ತ ತಹಶೀಲ್ದಾರ್ ಕಚೇರಿ ಅವರಣಕ್ಕೆ ಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.