ADVERTISEMENT

ಭರದಿಂದ ಸಾಗಿದ ಹೂಳೆತ್ತುವ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2017, 8:57 IST
Last Updated 29 ಏಪ್ರಿಲ್ 2017, 8:57 IST

ಕಂಪ್ಲಿ: ಪ್ರಸಕ್ತ ಸಾಲಿನ ಕೆರೆ ಸಂಜೀವಿನಿ- ಹಂತ ಎರಡರ ಯೋಜನೆಯಡಿ ₹ 18 ಲಕ್ಷ ವೆಚ್ಚದಲ್ಲಿ ಇಲ್ಲಿಗೆ ಸಮೀಪದ ಮೆಟ್ರಿ ಗ್ರಾಮದ ಕೆರೆ ಹೂಳು ತೆಗೆಯುವ ಕಾಮಗಾರಿ ಭರದಿಂದ ಸಾಗಿದೆ.ಅನೇಕ ದಶಕಗಳಿಂದ ದುರಸ್ತಿ ಭಾಗ್ಯ ಕಾಣದ ಪ್ರಸ್ತುತ ಕೆರೆ ಇದೀಗ ಅಭಿವೃದ್ಧಿ ಕಾಣುತ್ತಿದ್ದು, ಗ್ರಾಮಸ್ಥರಲ್ಲಿ ಸಂತಸ ತಂದಿದೆ. ಹೆಚ್ಚಿನ ಪ್ರಮಾಣದಲ್ಲಿ ಹೂಳು ತುಂಬಿರುವುದು ಒಂದೆಡೆಯಾದರೆ ಗುಡ್ಡಕ್ಕೆ ಕೆರೆ ಹೊಂದಿಕೊಂಡಿರುವುದರಿಂದ ಮಳೆಗಾಲದಲ್ಲಿ ಬೇಗನೆ ಕೆರೆ ಭರ್ತಿಯಾಗುತ್ತದೆ. ಈ ರೀತಿ ಭರ್ತಿಯಾದ ಕೆರೆ ನೀರು ಗ್ರಾಮದ ಮುಖ್ಯರಸ್ತೆ ಮೇಲೆ ತಿಂಗಳುಗಟ್ಟಲೆ ಹರಿದು ಸಂಚಾರ ಅಸ್ತವ್ಯಸ್ತವಾಗುವುದು ಸಾಮಾನ್ಯವಾಗಿತ್ತು.

ಇದೀಗ ಕೆರೆ ಹೂಳು ತೆಗೆಯುತ್ತಿರುವುದರಿಂದ ಭವಿಷ್ಯದಲ್ಲಿ ಈ ಭಾಗದ ಕೊಳವೆಬಾವಿ, ಗ್ರಾಮದ ತೆರೆದಬಾವಿಗಳ ಅಂತರ್ಜಲ ಮಟ್ಟ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಅನಿಸಿಕೆ ವ್ಯಕ್ತಪಡಿಸುತ್ತಾರೆ.ಶಾಸಕ ಟಿ.ಎಚ್‌. ಸುರೇಶ್‌ಬಾಬು ಆಸಕ್ತಿಯೇ ಕೆರೆ ಕಾಯಕಲ್ಪಕ್ಕೆ ಕಾರಣ ಎಂದು ಹೊಸಪೇಟೆ ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ. ಮಹಾದೇವ ತಿಳಿಸಿದರು.

ಮೆಟ್ರಿ ಗ್ರಾಮದ ಗುಂಡೆಹನುಮಪ್ಪ, ಹೊಸಕೆರೆ, ಕೆಂಪುವಡ್ಲು, ಕಾಸಿಹಳ್ಳ ವ್ಯಾಪ್ತಿಯಲ್ಲಿ 903 ಎಕರೆ ಖುಷ್ಕಿ ಭೂಮಿ ಇದ್ದು, ತುಂಗಭದ್ರಾ ಎಚ್‌ಎಲ್‌ಸಿ 1ಆರ್ ನಂ.2 ವಿತರಣಾ ಕಾಲುವೆ ಮೂಲಕ ಕೆರೆಗೆ ನೀರು ಒದಗಿಸಿದಲ್ಲಿ   ರೈತರಿಗೆ ತುಂಬಾ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಶಾಸಕರು ಗಮನಹರಿಸುವಂತೆ ಗ್ರಾಮದ ನೀರಾವರಿ ಯೋಜನಾ ಸಮಿತಿ ಸದಸ್ಯರಾದ ಜಿ. ಜಡೇಗೌಡ, ಬಿ. ಚಿದಾನಂದಪ್ಪ ಇತರೆ ರೈತರು ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.