ADVERTISEMENT

‘ಮರೆಯಲಾಗದ ರಷ್ಯಾ ಕ್ರಾಂತಿ’

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 6:54 IST
Last Updated 19 ಜನವರಿ 2017, 6:54 IST
‘ಮರೆಯಲಾಗದ ರಷ್ಯಾ ಕ್ರಾಂತಿ’
‘ಮರೆಯಲಾಗದ ರಷ್ಯಾ ಕ್ರಾಂತಿ’   

ಹೊಸಪೇಟೆ: ಅಲ್ಲೆಲ್ಲ ಬರೀ ಸಮಾಜ ವಾದಿಗಳ ಛಾಯಾಚಿತ್ರಗಳು, ಅವರ ಘೋಷವಾಕ್ಯಗಳು ಇದ್ದವು. ಅವುಗಳನ್ನು ನೋಡುತ್ತಿದ್ದರೆ ಸಮಾಜವಾದಿಗಳ ಪ್ರತಿ ಮಾತುಗಳು ಸ್ಮೃತಿಪಟಲದ ಮೇಲೆ ಮೂಡಿಬರುತ್ತಿದ್ದವು.

ಸೋಶಿಯಾಲಿಸ್ಟ್‌ ಯುನಿಟಿ ಸೆಂಟರ್‌ ಆಫ್‌ ಇಂಡಿಯಾ (ಎಸ್‌ಯುಸಿಐ) ರಷ್ಯಾದ ನವೆಂಬರ್‌ ಮಹಾಕ್ರಾಂತಿಯ ಶತಮಾನೋತ್ಸವದ ಅಂಗವಾಗಿ ನಗರದ ತಾಲ್ಲೂಕು ಕಚೇರಿ ಎದುರು ಛಾಯಾಚಿತ್ರ ಹಾಗೂ ಪುಸ್ತಕ ಪ್ರದರ್ಶನದಲ್ಲಿ ಕಂಡು ಬಂದ ದೃಶ್ಯಗಳಿವು.

ವಿದ್ಯಾರ್ಥಿಗಳು, ಯುವಕರು ಹಾಗೂ ಸಾರ್ವಜನಿಕರು ಸಮಾಜವಾದಿಗಳ ಪ್ರತಿಯೊಂದು ಹೇಳಿಕೆಯನ್ನು ತದೇಕ ಚಿತ್ತದಿಂದ ಓದುತ್ತಿದ್ದರು. ಕೆಲವರು ತಮ್ಮ ನೆಚ್ಚಿನ ನಾಯಕರ ಪುಸ್ತಕಗಳನ್ನು ಕೊಂಡೊಯ್ದರು.

ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅರುಣ್‌ ಜೋಳದಕೂಡ್ಲಿಗಿ, ಸಮಾಜದಲ್ಲಿ ಉಳ್ಳ ವರು ಇಲ್ಲದವರ ಮೇಲೆ ನಡೆಸುವ ದಬ್ಬಾಳಿಕೆ ಅರ್ಥಮಾಡಿಕೊಳ್ಳಬೇಕಾದರೆ ಶಿಕ್ಷಣದ ಪಾತ್ರ ಮಹತ್ವದ್ದು. ಶಿಕ್ಷಣವೆಂಬ ಅಸ್ತ್ರದ ಮೂಲಕ ಶೋಷಿತರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕು ಎಂದು ಹೇಳಿದರು.

ಸಂಕುಚಿತ ಮನೋಭಾವ ಬಿಟ್ಟು ಶೋಷಿತರೆಲ್ಲ ಒಂದಾಗಿ, ಹೋರಾಟ ನಡೆಸಬೇಕು. ಸಮಾಜದಲ್ಲಿ ಶತಮಾನ ಗಳಿಂದ ಮನೆ ಮಾಡಿರುವ ಅನ್ಯಾಯ, ಶೋಷಣೆ ತೊಲಗಿಸಬೇಕು ಎಂದು ತಿಳಿಸಿದರು.

ಶಿಕ್ಷಣದ ವ್ಯಾಪಾರೀಕರಣಕ್ಕೆ ಕಾರಣ ವಾಗಿರುವ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿರ್ಮೂಲನೆ ಮಾಡಿ, ಸರ್ಕಾರವೇ ಎಲ್ಲರಿಗೂ ಶಿಕ್ಷಣ ನೀಡಬೇಕು. ಅಷ್ಟೇ ಅಲ್ಲ, ಸಮಾಜದಲ್ಲಿ ಶೇಕಡಾ ನೂರಕ್ಕೆ ನೂರರಷ್ಟು ಸಾಕ್ಷರತೆ ಸಾಧಿಸಲು ಶ್ರಮಿಸಬೇಕಿದೆ ಎಂದರು.

ಎಸ್‌ಯುಸಿಐ ಜಿಲ್ಲಾ ಸಮಿತಿ ಸದಸ್ಯ ರಾಧಾಕೃಷ್ಣ ಉಪಾಧ್ಯ ಮಾತನಾಡಿ, 1917ರಲ್ಲಿ ಕಾರ್ಮಿಕ ವರ್ಗದ ಮಹಾನ್‌ ನಾಯಕರಾಗಿದ್ದ ಲೆನಿನ್‌ ಅವರ ನೇತೃತ್ವ ದಲ್ಲಿ ರಷ್ಯಾದಲ್ಲಿ ನಡೆದ ಕ್ರಾಂತಿ ಪ್ರಪಂಚದ ಇತಿಹಾಸದಲ್ಲಿ ಹೊಸ ಯುಗದ ಆರಂಭ ಎಂದು ವ್ಯಾಖ್ಯಾನ ಮಾಡಲಾಗುತ್ತದೆ ಎಂದರು.

ರಷ್ಯಾದಲ್ಲಿ 1917ರಲ್ಲಿ ನಡೆದ ಕ್ರಾಂತಿ ಬಳಿಕ ಶೋಷಿತ ವರ್ಗದ ಪಕ್ಷ ಮೊಟ್ಟ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಿತು. ಸಮಾಜವಾದಿ ರಾಷ್ಟ್ರ ಸ್ಥಾಪನೆಯ ಮೊದಲ ಹೆಜ್ಜೆ ಅದಾಗಿತ್ತು ಎಂದು ನೆನಪಿಸಿದರು. ಎಸ್‌ಯುಸಿಐ ಸಂಘಟಕ ಸುರೇಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.