ADVERTISEMENT

ರಾಜಕೀಯ ಜೀವನದಲ್ಲಿ ತಪ್ಪು ಮಾಡಿಲ್ಲ: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2016, 8:13 IST
Last Updated 23 ಡಿಸೆಂಬರ್ 2016, 8:13 IST

ಮರಿಯಮ್ಮನಹಳ್ಳಿ: ಕಳೆದ 30ವರ್ಷದ ರಾಜಕೀಯ ಜೀವನದಲ್ಲಿ ಯಾವುದೇ ರೀತಿಯ ತಪ್ಪು ಮಾಡಿಲ್ಲ, ಆರೋಪಗಳು ಕೇಳಿ ಬರುವುದು ಸಹಜ ಆದರೆ, ನನ್ನ ರಾಜಕೀಯ ಜೀವನದಲ್ಲಿ ಮಾತ್ರ ಒಂದು ಕಪ್ಪು ಚುಕ್ಕಿಯೂ ಇಲ್ಲ, ಬಿಳಿಹಾಳೆ ಇದ್ದ ಹಾಗೇ ಇದ್ದೀನಿ ಎಂದು ಸಂಸದ ಬಿ.ಶ್ರೀರಾಮುಲು ಹೇಳಿದರು.

ಪಟ್ಟಣಕ್ಕೆ ಗುರುವಾರ ಮಧ್ಯಾಹ್ನ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಜಿ.ಜನಾರ್ಧನ ರೆಡ್ಡಿ ಅವರ ಮಗಳ ಮದುವೆಗೆ ಕಪ್ಪು ಹಣ ಬಿಳಿ ಮಾಡಿಸಿಕೊಟ್ಟ ಆರೋಪಕ್ಕೆ ಸಂಬಂಧಿಸಿದಂತೆ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಚಾಲಕ ರಮೇಶ್‌ ಯಾರೋ ನನಗೆ ಗೊತ್ತಿಲ್ಲ. ಆತನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಸತ್ಯಾಂಶ ಹೊರಬೀಳಲಿದ್ದು, ಆಗ ಏನೆಂಬುದು ಎಲ್ಲರಿಗೂ ತಿಳಿಯುತ್ತದೆ ಎಂದರು.

ಮಾಧ್ಯಮದವರನ್ನು ಮೆಚ್ಚಿಸುವ ಸಲುವಾಗಿ ನಾನು ಇಲ್ಲಸಲ್ಲದ ಬೂಟಾಟಿಕೆಯ ಹೇಳಿಕೆ ನೀಡುವುದಿಲ್ಲ, ಅಲ್ಲದೆ ರಾಜಕೀಯ ಜೀವನದಲ್ಲಿ ಆಪಾದನೆ, ಆರೋಪಗಳು ಸಹಜ, ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಗನ್‌ಮ್ಯಾನ್‌ ಅವರನ್ನು ಕರೆದು ಸಹ ತನಿಖೆ ಮಾಡಿದ್ದಾರೆ. ಅಲ್ಲದೆ ಸದ್ಯ ನಡೆಯುತ್ತಿರುವ ತನಿಖೆಯಲ್ಲಿ ಸತ್ಯಾಂಶ ಹೊರಬೀಳಲಿದೆ, ನಾನು ಪ್ರಮಾಣಿಕವಾಗಿದ್ದೇನೆ, ತಪ್ಪು ಮಾಡಿಲ್ಲ, ಆದರೆ ತಪ್ಪು ಮಾಡಿದ್ದೇನೆಂದು ಗೊತ್ತಾದ ಕ್ಷಣ ರಾಜಕೀಯದಲ್ಲಿ ಇರುವುದಿಲ್ಲ. ಆದ ಕಾರಣ ಕಾದು ನೋಡುತ್ತೇನೆ ಎಂದರು.

ಅಲ್ಲದೆ ಇದೇ ತಿಂಗಳ 27ರಂದು ನಡೆಯಲಿರುವ ಪಟ್ಟಣ ಪಂಚಾಯ್ತಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಎರಡೂ ಪಕ್ಷಗಳಿಗೆ ಸಮನಾದ ಅವಕಾಶ ಇದ್ದು, ಲಾಟರಿಯ ಮೂಲಕ ಆಯ್ಕೆ ನಡೆದರು ಸಹ ಪಟ್ಟಣ ಪಂಚಾಯ್ತಿಯಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂಬ ವಿಶ್ವಾಸ ಇದೆ ಎಂದರು.

ಈ ಸಂದರ್ಭದಲ್ಲಿ ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರ ಬಿಜೆಪಿ ಘಟಕದ ಅಧ್ಯಕ್ಷ ನರೇಗಲ್‌ ಕೊಟ್ರೇಶ್‌, ಮುಖಂಡರಾದ ಮುಟುಗನಹಳ್ಳಿ ಕೊಟ್ರೇಶ್‌, ಡಿ.ರಾಘವೇಂದ್ರ ಶೆಟ್ಟಿ, ಪಂತರ ಜಯಂತ್‌, ಬಂಗಾರಿ ಹನುಮಂತ, ಬದ್ರಿನಾಥ ಶೆಟ್ಟಿ, ಪಿ.ಸೋಮಣ್ಣ, ಪ.ಪಂ ಸದಸ್ಯರಾದ ಬಂಗಾರಿ ಮಂಜುನಾಥ, ಎಸ್‌.ನವೀನ್‌, ಡಿ.ನರಸಿಂಹಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.