ADVERTISEMENT

ವರದಿ ಸಲ್ಲಿಕೆ; ಒಂದೇ ದಿನ ಬಾಕಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 6:43 IST
Last Updated 23 ಏಪ್ರಿಲ್ 2017, 6:43 IST

ಬಳ್ಳಾರಿ: ‘ಗುತ್ತಿಗೆ ಪ್ರದೇಶದಿಂದ ಅದಿರು ಸಾಗಾಣಿಕೆ ಮಾಡುವುದಕ್ಕೆ ಸುಪ್ರೀಂಕೋರ್ಟ್ ನೀಡಿರುವ ಶಿಫಾರಸುಗಳನ್ನು ಅನುಷ್ಠಾನಗೊಳಿಸಿರುವ ಸಂಬಂಧ ಭಾನುವಾರ ಸಂಜೆಯೊಳಗೆ ಗುತ್ತಿಗೆದಾರ ಸಂಸ್ಥೆಗಳು ವರದಿ ಸಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ರಾಮಪ್ರಸಾದ್‌ ಮನೋಹರ್‌ ಸೂಚಿಸಿದರು,ಗಣಿಬಾಧಿತ ಪ್ರದೇಶಗಳ ಪುನಶ್ಚೇತನ ಮತ್ತು ಪುನರ್ವಸತಿ ಕಾರ್ಯದ ಕುರಿತು ನಗರದಲ್ಲಿ ಶನಿವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ‘ಜಿಲ್ಲಾಡಳಿತ ನೀಡುವ ನಮೂನೆಯಲ್ಲಿ ಸಂಸ್ಥೆಗಳು ವರದಿ ಸಲ್ಲಿಸಬೇಕು. ಸಲ್ಲಿಸದಿದ್ದರೆ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರುವ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಭಾವಿಸಿ ಸೋಮವಾರವೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಪರಿಸರ ಸ್ನೇಹಿ ಅದಿರು ಸಾಗಾಣಿಕೆಗೆ ಅನುಕೂಲ ಕಲ್ಪಿಸುವ ಸಲುವಾಗಿ ಕನ್ವೇಯರ್ ಬೆಲ್ಟ್ (ಗಣಿಗಾರಿಕೆ ಪ್ರದೇಶದಿಂದ ದಾಸ್ತಾನು ಸ್ಥಳದವರೆಗೆ ಅದಿರು ಸಾಗಣೆಯ ಸುರಕ್ಷತಾ ವಲಯ ಸ್ಥಾಪನೆ), ರೈಲ್ವೆ ಲೈನ್ ಮತ್ತು ರೈಲ್ವೆ ಸೈಡಿಂಗ್‌ಗಳ ಅಳವಡಿಕೆ (ರೈಲಿನಿಂದ ಸಾಗಿಸಿದ ಅದಿರು ದಾಸ್ತಾನು ಮಾಡುವ ಸ್ಥಳ) ಕುರಿತಂತೆ ಗುತ್ತಿಗೆ ಸಂಸ್ಥೆಗಳ ಪ್ರಮುಖರೊಂದಿಗೆ ಸುದೀರ್ಘ ಚರ್ಚೆ ನಡೆಸಿದ ಜಿಲ್ಲಾಧಿಕಾರಿ, ಜಿಲ್ಲಾಡಳಿತದ ವತಿಯಿಂದ ರೈಲ್ವೆ ಲೈನ್ ನಿರ್ಮಿಸಿಕೊಡಲಾಗುವುದು. ರೈಲ್ವೆ ಸೈಡಿಂಗ್‌ಗಳಿಗಾಗಿ ಸ್ಥಳ ಗುರುತಿಸಿಕೊಡಲಾಗುವುದು ಎಂದರು.

ಕನ್ವೆಯರ್‌ ಬೆಲ್ಟ್‌ ಕಡ್ಡಾಯ:  ಅದಿರು ಸಾಗಾಟ ನಡೆಯುವ ಪ್ರದೇಶದ ಸುತ್ತಮುತ್ತಲಿನ ಜನಜೀವನ, ಪರಿಸರವನ್ನು ರಕ್ಷಿಸುವ ಮತ್ತು ಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಕನ್ವೆಯರ್ ಬೆಲ್ಟ್ ಅಳವಡಿಸುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಹೀಗಾಗಿ ಯಾರೂ ನಿರ್ಲಕ್ಷ್ಯ ಮಾಡುವಂತಿಲ್ಲ ಎಂದರು.ಅವರ ಮಾತಿಗೆ ಪ್ರತಿಕ್ರಿಯಿಸಿದ ಕೆಲವು ಸಂಸ್ಥೆಗಳ ಮುಖ್ಯಸ್ಥರು, ಕನ್ವೇಯರ್ ಬೆಲ್ಟ್ ಅಳವಡಿಸುವುದರಿಂದ ಲಾಭಾಂಶ ಅತಿ ಕಡಿಮೆಯಾಗುತ್ತದೆ ಎಂಬ ಆತಂಕವನ್ನು ವ್ಯಕ್ತಪಡಿಸಿದರು.  ಅವರ ಮಾತುಗಳನ್ನು ಪರಿಗಣಿಸದ ಜಿಲ್ಲಾಧಿಕಾರಿ, ‘ಸುಪ್ರೀಂ ಕೋರ್ಟಿನ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವುದಷ್ಟೇ ನಮ್ಮ ಕೆಲಸ’ ಎಂದು ನಿಷ್ಠುರವಾಗಿ ನುಡಿದರು.

ADVERTISEMENT

ಗಣಿಗಾರಿಕೆಗೆ ಅಗತ್ಯವಿರುವ ಅರಣ್ಯ ಭೂಮಿ ಮತ್ತು ಖಾಸಗಿ ಭೂಮಿಯನ್ನು ಜಿಲ್ಲಾಡಳಿತವೇ ಸ್ವಾಧೀನಪಡಿಸಿಕೊಂಡು ನೀಡಬೇಕು ಎಂದು ಗಣಿ ಸಂಸ್ಥೆಯೊಂದರ ಪ್ರತಿನಿಧಿ ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಹೊಸ ಕಾಯ್ದೆಯ ಪ್ರಕಾರ ಭೂಸ್ವಾಧೀನಪಡಿಸಿಕೊಳ್ಳುವುದು ಕಷ್ಟ. ಆದರೂ ಭೂಸ್ವಾಧೀನಕ್ಕೆ ಇರುವ ಅಡ್ಡಿಯನ್ನು ತೆರವು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.ಇದೇ ಸಂದರ್ಭದಲ್ಲಿ ಸಂಡೂರಿನ ರಾಮಘಡ ಪ್ರದೇಶದಲ್ಲಿ ಅದಿರು ಲಭ್ಯವಿರುವ ಸ್ಥಳಗಳ ಕುರಿತು ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.