ADVERTISEMENT

ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ನಕ್ಷೆಯಂತೆ ನಡೆಯದ ತುಂಗಾ ಮೇಲ್ದಂಡೆ ಕಾಲುವೆ ಕಾಮಗಾರಿ: ಆರೋಪ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 11:51 IST
Last Updated 9 ಮಾರ್ಚ್ 2017, 11:51 IST
ಹಾವೇರಿ: ‘ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆ ಕಾಮಗಾರಿ ಯನ್ನು ಮೂಲ ನಕ್ಷೆಯ ಪ್ರಕಾರ ನಡೆಸು ತ್ತಿಲ್ಲ’ ಎಂದು ಆರೋಪಿಸಿ ತಾಲ್ಲೂಕಿನ ಕಳ್ಳಿಹಾಳದ ರೈತ ಅಜ್ಜಪ್ಪ ಗೊಣೆಪ್ಪನವರ ಬುಧವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಅಪಾಯದಿಂದ ಪಾರಾಗಿದ್ದಾನೆ. 
 
ತಾಲ್ಲೂಕಿನ ಕಳ್ಳಿಹಾಳದಲ್ಲಿ ಕಾಲುವೆ ಕಾಮಗಾರಿ ನಡೆಸಲು ಬುಧವಾರ ಬೆಳಿಗ್ಗೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದರು. ಆದರೆ, ‘ಕಾಮಗಾರಿಯು ಮೂಲ ನಕ್ಷೆಯ ಪ್ರಕಾರ ನಡೆಯುತ್ತಿಲ್ಲ’ ಎಂದು ಆರೋಪಿಸಿ ರೈತರು ಪ್ರತಿಭಟನೆಗೆ ಮುಂದಾದರು. ಈ ಸಂದರ್ಭದಲ್ಲಿ ರೈತ ಅಜ್ಜಪ್ಪ ಗೋಣೆಪ್ಪನವರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
 
ಸ್ಥಳದಲ್ಲಿದ್ದ ಪೊಲೀಸರು ತಕ್ಷಣವೇ ವಿಷದ ಬಾಟಲಿ ಯನ್ನು ಕಸಿದುಕೊಂಡು, ಆತನನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆಯಲ್ಲಿ ರೈತ ಪುಟ್ಟಪ್ಪ ಗೋಣೆಪ್ಪನ ವರ ಎಂಬವರು ವಿಷದ ಬಾಟಲಿ ತಂದಿ ದ್ದರೂ, ಪೊಲೀಸರು ತಡೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಸ್ಥಳದಲ್ಲಿದ್ದ ರೈತರು ಅಧಿಕಾರಿಗಳ ಜೊತೆ ವಾಗ್ವಾದಕ್ಕೆ ಇಳಿದರು.ಡಿವೈಎಸ್ಪಿ ಡಾ.ಗೋಪಾಲ ಬ್ಯಾಕೋಡ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್ ಲಕ್ಷ್ಮಣ ನಾಯ್ಕ ನೇತೃತ್ವದಲ್ಲಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. 
 
ಬಳಿಕ ಇಲ್ಲಿನ ಜಿಲ್ಲಾ ಸರ್ಕಾರಿ ಆಸ್ಪತ್ರೆ ಬಳಿ ಜಮಾಯಿಸಿದ ರೈತರನ್ನು ಉಪವಿಭಾಗಾಧಿಕಾರಿ ಸಿದ್ಧು ಹುಲ್ಲೋಳಿ ಹಾಗೂ ತಹಶೀಲ್ದಾರ್ ಜಿ.ಬಿ. ಮಜ್ಜಗಿ ಸಮಾಧಾನ ಪಡಿಸಲು ಯತ್ನಿಸಿದರು. ಅಲ್ಲದೇ, ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಸಿ. ವಂಶಿಕೃಷ್ಣ ಸ್ಥಳಕ್ಕೆ ಭೇಟಿ ನೀಡಿ, ಮನವೊಲಿಕೆಗೆ ಮುಂದಾದರು. ವಿಷ ಸೇವಿಸಿದ ಅಜ್ಜಪ್ಪ ಗೋಣೆಪ್ಪನವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತು. ಬಳಿಕ ರೈತರು ಆಸ್ಪತ್ರೆಯಿಂದ ವಾಪಸಾದರು.
 
‘ಕಳೆದೆರಡು ವರ್ಷಗಳಿಂದ ಭೂ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು, ವಿವಿಧ ಹಂತಗಳಲ್ಲಿ ಆಕ್ಷೇಪಣೆ ಸಲ್ಲಿಸಲು   ರೈತರಿಗೆ ಅವಕಾಶಗಳು ಇದ್ದವು. ಅಲ್ಲದೇ, ನಕ್ಷೆಯ ಬಗ್ಗೆಯೂ ಪ್ರಶ್ನಿಸಬಹು ದಿತ್ತು. ಪ್ರಸ್ತುತ ಭೂ ಸ್ವಾಧೀನ  ಪ್ರಕ್ರಿಯೆ ಮುಗಿದಿದ್ದು, ಕೋರ್ಟ್‌ ಸೂಚನೆ ಅನ್ವಯವೇ ಪರಿಹಾರ ಸ್ವೀಕರಿಸುವಂತೆ ರೈತರಿಗೆ ನೋಟಿಸ್ ನೀಡಲಾಗಿದೆ.

ಬಹುತೇಕ ರೈತರೆಲ್ಲ ನೋಟಿಸ್ ಹಾಗೂ ಪರಿಹಾರ ಸ್ವೀಕರಿಸಿದ್ದಾರೆ. ಆದರೆ, ಅಜ್ಜಪ್ಪನವರ ತಂದೆಯ ಹೆಸರಿನಲ್ಲಿ ಸುಮಾರು 2 ಎಕರೆ 20 ಗುಂಟೆ ಹೊಲ ವಿದ್ದು, ಇನ್ನೂ ನೋಟಿಸ್ ಸ್ವೀಕರಿಸಿಲ್ಲ.  ಈ ಹಿಂದೆ ಯಾವುದೇ ಆಕ್ಷೇಪಣೆಗಳನ್ನೂ ಸಲ್ಲಿಸಿರಲಿಲ್ಲ. ಹೀಗಾಗಿ ಕಾಮಗಾರಿ ಆರಂಭಿಸಲು ಅಧಿಕಾರಿಗಳು ಮುಂದಾಗಿ ದ್ದಾರೆ’ ಎಂದು ಉಪ ವಿಭಾಗಾಧಿಕಾರಿ ಸಿದ್ಧು ಹುಲ್ಲೋಳಿ ತಿಳಿಸಿದರು.

* ಯಾವುದೇ ಆಕ್ಷೇಪಣೆಗಳನ್ನೂ ಸಲ್ಲಿಸಿರಲಿಲ್ಲ. ಹೀಗಾಗಿ ಕಾಮಗಾರಿ ಆರಂಭಿಸಲು ಅಧಿಕಾರಿಗಳು ಮುಂದಾಗಿದ್ದಾರೆ
ಸಿದ್ದು ಹುಲ್ಲೋಳಿ, ಉಪ ವಿಭಾಗಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.