ADVERTISEMENT

ವೃದ್ಧಾಶ್ರಮಕ್ಕೆ ನೆರವಾದ ಯುವಕರು

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2017, 5:58 IST
Last Updated 28 ಆಗಸ್ಟ್ 2017, 5:58 IST
ಕೂಡ್ಲಿಗಿ ಪಟ್ಟಣದ 3ನೇ ವಾರ್ಡ್‌ನ ವಿನಾಯಕ ಗೆಳೆಯರ ಬಳಗದ ವತಿಯಿಂದ ಗಣೇಶ ಹಬ್ಬದ ಅಂಗವಾಗಿ ಪುನಶ್ಚೇತನ ವೃದ್ಧಾಶ್ರಮದಲ್ಲಿನ ವೃದ್ಧರಿಗೆ ಸ್ವೇಟರ್ ಹಾಗೂ ಸೊಳ್ಳೆ ಪರದೆಗಳನ್ನು ವಿತರಿಸಲಾಯಿತು
ಕೂಡ್ಲಿಗಿ ಪಟ್ಟಣದ 3ನೇ ವಾರ್ಡ್‌ನ ವಿನಾಯಕ ಗೆಳೆಯರ ಬಳಗದ ವತಿಯಿಂದ ಗಣೇಶ ಹಬ್ಬದ ಅಂಗವಾಗಿ ಪುನಶ್ಚೇತನ ವೃದ್ಧಾಶ್ರಮದಲ್ಲಿನ ವೃದ್ಧರಿಗೆ ಸ್ವೇಟರ್ ಹಾಗೂ ಸೊಳ್ಳೆ ಪರದೆಗಳನ್ನು ವಿತರಿಸಲಾಯಿತು   

ಕೂಡ್ಲಿಗಿ: ಹಬ್ಬ ಹರಿದಿನಗಳಲ್ಲಿ ಮೋಜು ಮಸ್ತಿಗಾಗಿ ದುಂದುವೆಚ್ಚ ಮಾಡುವವರೇ ಹೆಚ್ಚು. ಆದರೆ ಪಟ್ಟಣದ 3ನೇ ವಾರ್ಡ್‌ ವಿದ್ಯಾನಗರದ ಯುವಕರು ಮಾತ್ರ ಇದಕ್ಕೆ ವಿಭಿನ್ನವಾಗಿದ್ದಾರೆ. ಗಣೇಶ ವಿಸರ್ಜನೆ ವೇಳೆ ಡಿಜೆಗೆಂದು (ಭಾರಿ ಶಬ್ದದ ಧ್ವನಿವರ್ಧಕ)ಖರ್ಚು ಮಾಡಲು ತೆಗೆದಿರಿಸಿದ್ದ ಹಣವನ್ನು ವೃದ್ಧಾಶ್ರಮದಲ್ಲಿರುವ ವೃದ್ಧರಿಗೆ ಸ್ವೇಟರ್ ಮಾತ್ತು ಸೊಳ್ಳೆ ಪರದೆ ನೀಡುವ ಮೂಲಕ ಸದ್ವಿನಿಯೋಗಿಸಿದ್ದಾರೆ.

ಈ ಹಿಂದೆ ಎರಡು ಮೂರು ಕಡೆ ಯುವಕರ ಗುಂಪು ಗಣೇಶನನ್ನು ಪ್ರತಿಷ್ಠಾಪನೆ ಮಾಡುತ್ತಿದ್ದರು. ಆದರೆ ಪಟ್ಟಣ ಪಂಚಾಯ್ತಿ ಸದಸ್ಯ ಸಣ್ಣ ಕೊತ್ಲಪ್ಪ ನೇತೃತ್ವದಲ್ಲಿ ಎಲ್ಲರನ್ನು ಒಗ್ಗೂಡಿ ಶ್ರೀವಿನಾಯಕ ಗೆಳೆಯರ ಬಳಗದ ಹೆಸರಿನಲ್ಲಿ ಪಂಚಾಚಾರ್ಯ ಮಂಗಲ ಮಂದಿರದ ಒಂದೇ ಗಣೇಶನನ್ನು ಪ್ರತಿಷ್ಠಾಪನೆ ಮಾಡಿದ್ದರು.

ಭಾನುವಾರ ಸಂಜೆ ಡಿಜೆಯೊಂದಿಗೆ ಮೆರವಣಿಗೆ ಮೂಲಕ ಗಣೇಶ ವಿಸರ್ಜನೆ ಮಾಡುವ ಕಾರ್ಯಕ್ರಮ ಇತ್ತು. ಕುಣಿದು ಕುಪ್ಪಳಿಸಲು ಸಾವಿರಾರು ರೂಪಾಯಿ ಮಾಡುವ ಬದಲಾಗಿ ಅದೇ ಹಣದಿಂದ ಏನಾದರೂ ಸಾರ್ಥಕ ಕಾರ್ಯ ಮಾಡುವ ಚಿಂತನೆ ಯುವಕರಲ್ಲಿ ಮೂಡಿತು. ಆಗ ನೆನಪಾಗಿದ್ದೇ ಪುನಶ್ಚೇತನ ವೃದ್ಧಾಶ್ರಮ.

ADVERTISEMENT

ತಕ್ಷಣ ಯುವಕರು ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಲ್ಲಿರುವ ವೃದ್ಧರಿಗೆ ಯಾವುದು ಅವಶ್ಯಕತೆ ಇದೆ ಎಂದು ತಿಳಿದುಕೊಳ್ಳಲು ಮುಂದಾದರು. ಅಲ್ಲಿದ್ದ ವೃದ್ಧರೊಬ್ಬರು ಸೊಳ್ಳೆ ಹೆಚ್ಚಿರುವ ಬಗ್ಗೆ ಹೇಳಿಕೊಂಡರು.

ವೃದ್ಧಾಶ್ರಮದಲ್ಲಿದ್ದ 11 ಪುರುಷರು, ಮೂವರು ಮಹಿಳೆಯರಿಗೆ ತಲಾ ಒಂದೊಂದು ಉಲ್ಲನ್ ಜರ್ಕಿನ್ ಮತ್ತು ಸೊಳ್ಳೆ ಪರದೆ ವಿತರಣೆ ಮಾಡಿ, ಹೋಳಿಗೆ ಊಟ ಉಣಬಡಿಸಿದರು. ಪಟ್ಟಣ ಪಂಚಾಯ್ತಿ ಸದಸ್ಯ ಸಣ್ಣ ಕೊತ್ಲಪ್ಪ ಮಾತನಾಡಿ,‘ಮೋಜು ಮಸ್ತಿ ಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡುವ ಬದಲು ಪ್ರತಿಯೊಬ್ಬ ಯುವಕರು ತಮ್ಮ ಕೈಲಾದ ಮಟ್ಟಿಗೆ ಬಡವರು, ವೃದ್ಧರು, ಅಶಕ್ತರಿಗೆ ದಾನ ಮಾಡಿದರೆ ಹಬ್ಬದ ಆಚರಣೆಗೆ ಆರ್ಥ ಬರುತ್ತದೆ’ ಎಂದು ಹೇಳಿದರು.

ವಿನಾಯಕ ಗೆಳೆಯರ ಬಳಗದ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಇದ್ದರು. ನಂತರ ಸಂಜೆ ಸರಳವಾಗಿ ಅಲಂಕಾರ ಮಾಡಿದ್ದ ಟ್ರ್ಯಾಕ್ಟರಿನಲ್ಲಿ ಗಣೇಶನನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ವಿಸರ್ಜನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.