ADVERTISEMENT

ಶೌಚಾಲಯ ಅನುದಾನದಲ್ಲೂ ಅವ್ಯವಹಾರ

ಫಲಾನುಭವಿ ಅಲ್ಲದವರ ಹೆಸರಿನಲ್ಲಿ ₹ 3.90 ಲಕ್ಷ ವರ್ಗಾವಣೆ, ಗ್ರಾ.ಪಂ. ಪಿ.ಡಿ.ಓ. ಅಧ್ಯಕ್ಷರು ಭಾಗಿಯಾದ ಆರೋಪ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 11:27 IST
Last Updated 18 ಫೆಬ್ರುವರಿ 2017, 11:27 IST
ಜುಮ್ಮೋಬನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ವೈಯಕ್ತಿಕ ಶೌಚಗೃಹ ಕುರಿತು ತಾಲ್ಲೂಕು ಪಂಚಾಯ್ತಿ ಇ.ಓ. ಕೃಷ್ಣನಾಯ್ಕ್‌  ದಾಖಲೆ ಪರಿಶೀಲಿಸಿದರು
ಜುಮ್ಮೋಬನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ವೈಯಕ್ತಿಕ ಶೌಚಗೃಹ ಕುರಿತು ತಾಲ್ಲೂಕು ಪಂಚಾಯ್ತಿ ಇ.ಓ. ಕೃಷ್ಣನಾಯ್ಕ್‌ ದಾಖಲೆ ಪರಿಶೀಲಿಸಿದರು   
ಕೊಟ್ಟೂರು: ಸರ್ಕಾರ ಬಯಲು ಶೌಚ ಮುಕ್ತಗೊಳಿಸಲು ವೈಯಕ್ತಿಕ ಶೌಚಾಲಯ ನಿಮಾರ್ಣ ಮಾಡಿಕೊಳ್ಳಲು ಅನುದಾನ ಬಿಡುಗಡೆಗೊಳಿಸಿದೆ. ಆದರೆ ಯೋಜನೆ­ಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಹಣ ತಲುಪದೆ ನಕಲು ದಾಖಲೆ ಸೃಷ್ಟಿಸಿ ಹಣ ಗುಳಂ ಮಾಡಿರುವ ಘಟನೆ ಪಟ್ಟಣಕ್ಕೆ ಸಮೀಪದ ಜುಮ್ಮೋಬನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ನಡೆದಿದೆ.
 
ಗ್ರಾಮ ಪಂಚಾಯ್ತಿ ವತಿಯಿಂದ 2016–17 ಸಾಲಿನಲ್ಲಿ ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳಲು 64 ಮಹಿಳಾ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. 
 
ಬಹುತೇಕ ಫಲಾನುಭ­ವಿಗಳು ಶೌಚಾಲಯ ಕಟ್ಟಿಸಿಕೊಂಡಿದ್ದಾರೆ. ಇದರಲ್ಲಿ 26 ಫಲಾನುಭವಿಗಳ ಹೆಸ­ರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬೇರೆ ಹೆಸರಿನ ಖಾತೆಗೆ ಹಣ ಜಮೆ ಮಾಡ­ಲಾಗಿದೆ. ಇದರಲ್ಲಿ ಕೆಲವರು ಶೌಚಾಲ­ಯವನ್ನೇ ಕಟ್ಟಿಸಿಕೊಂಡಿಲ್ಲ. ಅವ್ಯವ­ಹಾರದಲ್ಲಿ ಗ್ರಾಮ ಪಂಚಾಯ್ತಿ ಪಿಡಿಓ, ಅಧ್ಯಕ್ಷರು ಹಾಗೂ ಕಂಪ್ಯೂಟರ್ ಅಪರೇಟರ್ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.
 
ಸಾಮಾನ್ಯ ವರ್ಗಕ್ಕೆ ₹ 12 ಸಾವಿರ ಹಾಗೂ ಎಸ್‌.ಸಿ , ಎಸ್‌ಟಿ ಗೆ ₹ 15 ಸಾವಿರ ಸಹಾಯ ಧನ ನೀಡಲಾಗುತ್ತದೆ. ಇದರಂತೆ ಗ್ರಾಂಮ ಪಂಚಾಯ್ತಿ ವ್ಯಾಪ್ತಿಯ ಕುಮತಿಯಲ್ಲಿ 11, ಜುಮ್ಮೋ­ಬನಹಳ್ಳಿಯಲ್ಲಿ 8, ಲೋಕಿಕೆರೆಯಲ್ಲಿ 7 ಫಲಾನುಭವಿಗಳ ಪೈಕಿ ಕೆಲವರು ಮಾತ್ರ ವೈಯಕ್ತಿವಾಗಿ ಶೌಚಾಲಯ ಕಟ್ಟಿಕೊಂಡಿದ್ದರೂ ನಿಜವಾದ ಫಲಾನುಭವಿಗಳ ಖಾತೆಗೆ ಹಣ ಪಾವತಿಯಾಗದೆ, ಬೇರೆಯವರ ಖಾತೆಗೆ ಹಣ ಪಾವತಿ ಮಾಡಲಾಗಿದೆ. ಇದರಿಂದ ಯೋಜನೆಯ ಒಟ್ಟು ₹ 3.90 ಲಕ್ಷ ಹಣ ಫಲಾನುಭವಿಗಳ ಖಾತೆಯಲ್ಲದ ಬೇರೆ ಖಾತೆಗೆ ಹಣ ಪಾವತಿ ಮಾಡಲಾಗಿದೆ ಎಂಬುದು ಸ್ಥಳೀಯರ ದೂರಿದ್ದಾರೆ.
 
ಬಳ್ಳಾರಿ ಎಸ್.ಬಿ.ಎಂ. ಹಾಗೂ ಪ್ರಗತಿ, ಸಿಂಡಿಕೇಟ್ ಸೇರಿ ಇತರೆ ಬ್ಯಾಂಕ್ ಖಾತೆ ಸಂಖ್ಯೆಗೆ 18 ಫಲಾನುಭವಿಗಳು, ಸಂಡೂರಿನ ಮೂರು ಬ್ಯಾಂಕ್ ಗಳ ಖಾತೆಗೆ 3 ಫಲಾನುಭವಿಗಳು, ಕುಡುತಿನಿ ಎಸ್.ಬಿ.ಐ ಬ್ಯಾಂಕ್ ನಲ್ಲಿ 2 ಖಾತೆಗೆ, ಚಿಕ್ಕಜೋಗಿಹಳ್ಳಿ ಎಸ್.ಬಿ.ಎಂ ಬ್ಯಾಂಕ್ ನಲ್ಲಿ  ಮೂವರಿಗೆ, ತೋರಣಗಲ್ಲು ವಿಜಯ ಬ್ಯಾಂಕ್ 1, ಬೆಂಗಳೂರಿನ ಐಸಿಐಸಿಐ ಬ್ಯಾಂಕ್ ನಲ್ಲಿ ಇಬ್ಬರ ಖಾತೆಗಳ ಹೆಸರಿಗೆ ಒಟ್ಟು 26 ಫಲಾ­ನುಭವಿಗಳ ₹ 3.90 ಲಕ್ಷ  ಯೋಜನೆ ಹಣವನ್ನು ಜಮೆ ಮಾಡಲಾಗಿದೆ.
 
‘ಶೌಚಗೃಹ ಕಟ್ಟಿಸಿಕೊಂಡ ನಿಜವಾದ ಫಲಾನುಭವಿಗಳ ಖಾತೆ ಬದಲಿಗೆ ಜಿಲ್ಲೆಯ ವಿವಿಧ ಬ್ಯಾಂಕ್‌ಗಳ ಖಾತೆ ಸಂಖ್ಯೆಗೆ ಶೌಚಗೃಹ ಹಣ ಜಮೆ ಮಾಡಿರುವುದು ದಾಖಲೆಗಳ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಹೀಗಾಗಿ ಗ್ರಾಮ ಪಂಚಾಯ್ತಿ ಪಿಡಿಓ ಮತ್ತು  ಅಧ್ಯಕ್ಷರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯ್ತಿಗೆ ವರದಿ ಸಲ್ಲಿಸಲಾಗುವುದು’ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣನಾಯ್ಕ ತಿಳಿಸಿದರು.
 
‘ನಾನು ಒಂದು ತಿಂಗಳ ಹಿಂದೆ ಬಂದಿದ್ದೇನೆ. ನನ್ನ ಹಿಂದೆ ಕಾರ್ಯನಿರ್ವಹಿಸಿದ ಪಿಡಿಓ ಅವಧಿಯಲ್ಲಿ ಈ ಘಟನೆ ನಡೆದಿದೆ, ನಾನು ಯಾವ ತಪ್ಪು ಮಾಡಿಲ್ಲ’ ಎಂದು ಗ್ರಾಮ ಪಂಚಾಯ್ತಿ ಪಿಡಿಓ ನಾರಾಯಣಪ್ಪ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.