ADVERTISEMENT

‘ಸಸ್ಯ ಸಂತೆ’ಯಲ್ಲಿ ಸಸಿ ಖರೀದಿಗೆ ಮುಗಿಬಿದ್ದ ರೈತರು!

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 10:05 IST
Last Updated 15 ಜುಲೈ 2017, 10:05 IST

ಕೂಡ್ಲಿಗಿ: ‘ಸಸ್ಯ ಸಂತೆ’ಯಲ್ಲಿ ವಿವಿಧ ಬಗೆಯ ಸಸಿಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಮೂಲಕ ತೋಟಗಾರಿಕೆ ಇಲಾಖೆಯು ರೈತರು ಹಾಗೂ ಸಾರ್ವಜನಿಕರಲ್ಲಿ ಕೈತೋಟ ಹಾಗೂ ತಾರಸಿ ತೋಟ ಉತ್ತೇಜಿಸುವ ಕಾರ್ಯ ಆರಂಭಿಸಿದೆ. ಜಿಲ್ಲೆಯಲ್ಲಿ ಈಗಾಗಲೇ ಕೆಲವೆಡೆ ಮುಂಗಾರು ಆರಂಭವಾಗಿದೆ.

ತೋಟಗಾರಿಕೆ ಮಾಡುವ ರೈತರು ಹಾಗೂ ಮನೆ ಮುಂದೆ ಕೈತೋಟ ಮಾಡಿಕೊಂಡವರನ್ನು ಸೆಳೆಯುವ ಉದ್ದೇಶದಿಂದ ಪಟ್ಟಣದ ತೋಟಗಾರಿಕೆ ಇಲಾಖೆಯ ಕಚೇರಿ ಮುಂದೆ ಶುಕ್ರವಾರ ಸಸ್ಯ ಸಂತೆ ನಡೆಸಲಾಯಿತು. ನರ್ಸರಿ ಯಲ್ಲಿ ಪೋಷಿಸಿದ ವಿವಿಧ ಬಗೆಯ ಗುಣಮಟ್ಟದ ಸಸಿಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡಿ, ರೈತರನ್ನು ಪ್ರೋತ್ಸಹಿಸುವುದೇ ಇದರ ಪ್ರಮುಖ ಉದ್ದೇಶ.

ನಿತ್ಯ ಉಪಯೋಗಿಸುವ ತರಕಾರಿ, ವಿವಿಧ ಬಗೆಯ ಹೂವಿನ ಗಿಡಗಳು, ತೆಂಗು, ಮಾವು, ಸಪೋಟ, ನಿಂಬೆ, ಕರಿಬೇವು ಹಾಗೂ ಅಲಂಕಾರಿಕ ಸಸಿಗಳನ್ನು ಮಾರಾಟ ಮಾಡಲಾಯಿತು. ಇದೇ ಮೊದಲ ಬಾರಿಗೆ ಇಲಾಖೆಯಿಂದ ಸಸ್ಯ ಸಂತೆ ಆರಂಭಿಸಲಾಗಿದೆ. ವಾತಾವರಣಕ್ಕೆ ಹೊಂದಿಕೊಳ್ಳುವಂತಹ ತೋಟಗಾರಿಕೆ ಸಸಿಗಳನ್ನು ರೈತರಿಗೆ ನೀಡಲಾಗುತ್ತಿದೆ.

ADVERTISEMENT

ಮಾವು (ವಿವಿಧ ತಳಿಗಳು ₹28), ಸಪೋಟ (32), ತೆಂಗು (ತಿಪಟೂರು 50 ಮತ್ತು ಹೈಬ್ರಿಡ್ 150), ನುಗ್ಗೆ(10), ಕರಿಬೇವು (10), ನಿಂಬೆ(12) ಸೇರಿ ದಂತೆ ವಿವಿಧ ಜಾತಿಯ ಅಲಂಕಾರಿಕ ಗಿಡಗಳು(₹20–₹25) ನೀಡಲಾಗುತ್ತಿದೆ. ₹ಜಿಲ್ಲೆಯ ಲ್ಲಿರುವ 8 ತೋಟಗಾರಿಕೆ ಕ್ಷೇತ್ರ ಹಾಗೂ ಮೂರು ನರ್ಸರಿಗಳಿದ್ದು, ದೇಶನೂರು,  (ಸಿರುಗುಪ್ಪ ತಾಲ್ಲೂಕು) ಧರ್ಮಾಪುರ, ತೋರಣಗಲ್ಲು, ರಾಘಪುರ (ಸಂಡೂರು),  ಬುಕ್ಕಸಾಗರ (ಹೊಸಪೇಟೆ), ಮಾಲವಿ, ಆನಂದದೇವ ಕನಹಳ್ಳಿ (ಹಗರಿಬೊಮ್ಮನ ಹಳ್ಳಿ), ಬಿ. ಗೋನಳ್( ಬಳ್ಳಾರಿ) ತೋಟಗಾರಿಕೆ ಕ್ಷೇತ್ರಗಳು ಹಾಗೂ ಸಂಡೂರು ತಾಲ್ಲೂಕು ತೋಟಗಾರಿಕೆ ಇಲಾಖೆಯ ಕಚೇರಿ ನರ್ಸರಿ, ಹೊಸಪೇಟೆಯ ಕಚೇರಿ ನರ್ಸರಿ ಮತ್ತು ಬಳ್ಳಾರಿ ತಾಲ್ಲೂಕಿನ ತೋಟ ಗಾರಿಕೆ ಕಚೇರಿ ನರ್ಸರಿಗಳಲ್ಲಿ ತೆಂಗು, ಮಾವು, ಸಪೋಟ, ನಿಂಬೆ, ನುಗ್ಗೆ ಬೆಳೆಸಲಾಗುತ್ತಿದೆ ಎಂದು ಸಂಡೂರು ಮತ್ತು ಕೂಡ್ಲಿಗಿ ತಾಲ್ಲೂಕು ಸಸ್ಯ ಸಂತೆ ಉಸ್ತುವಾರಿ ಹೊತ್ತಿರುವ ತೋಟಗಾರಿಕೆ ಸಹಾಯಕ ನಿರ್ದೇಶಕ ಬಿ.ಸಿ. ಕುಬೇರಾಚಾರಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.