ADVERTISEMENT

‘ಸಾಮೂಹಿಕ ವಿವಾಹ ಪ್ರೋತ್ಸಾಹಿಸಿ’

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 8:43 IST
Last Updated 6 ಫೆಬ್ರುವರಿ 2017, 8:43 IST

ಸಂಡೂರು: ಸಾಮೂಹಿಕ ವಿವಾಹಗಳು ಆರ್ಥಿಕ ಮಿತವ್ಯಯಕ್ಕೆ ಸಹಕಾರಿಯಾಗಿವೆ. ಸರಳ ವಿವಾಹದಿಂದ ಉಳಿತಾಯವಾಗುವ ಹಣವನ್ನು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಉಪಯೋಗಿಸಬಹುದಾಗಿದೆ. ಆದ್ದರಿಂದ ಸಾಮೂಹಿಕ ಮತ್ತು ಸರಳ ವಿವಾಹಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅಭಿಪ್ರಾಯ ಪಟ್ಟರು.

ಭಾನುವಾರ ಪಟ್ಟಣದ ಆದರ್ಶ ಕಲ್ಯಾಣ ಮಂಟಪದಲ್ಲಿ ಸ್ಥಳೀಯ ಅಂಜುಮನ್ ಎ ಖಿದ್ಮತುಲ್ ಮುಸ್ಲಿಮೀನ್ ಕಮಿಟಿ ವತಿಯಿಂದ ಹಮ್ಮಿಕೊಂಡಿದ್ದ ಮುಸ್ಲಿಂ ಸಮುದಾಯದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ, ನೂತನ ವಧು–ವರರಿಗೆ ಶುಭಕೋರಿ ಮಾತನಾಡಿದರು.

ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ–ಮುಸ್ಲಿಂ ಸಮಾಜದಲ್ಲಿ ಶಿಕ್ಷಣ ಕಡ್ಡಾಯವಾದಾಗ ಮಾತ್ರ ಮುಸ್ಲಿಂ ಸಮಾಜದ ಅಭಿವೃದ್ಧಿ ಸಾಧ್ಯ. ಆದ್ದರಿಂದ ಎಲ್ಲಾ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕೃತಿಯ ಅರಿವನ್ನೂ ಮೂಡಿಸಬೇಕಿದೆ ಎಂದರು.

ಸಂಡೂರಿನ ಎಸ್‌.ಆರ್.ಎಸ್ ಶಾಲೆಯಲ್ಲಿ ಪಡೆದ ತಮ್ಮ ಪ್ರೌಢ ಮತ್ತು ಕಾಲೇಜು ಶಿಕ್ಷಣ ಕುರಿತು  ಮೆಲುಕು ಹಾಕಿದ್ದಲ್ಲದೆ, ಅದು ತಮಗೆ ಒಂದು ಹೊಸ ರೂಪವನ್ನು ನೀಡಿತೆಂದು ವಿವರಿಸಿದರು.

ಒಟ್ಟು 14 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಳ್ಳಾರಿಯ ಸರ್‌ಖಾಜಿ ಗುಲಾಂ ಗೌಸ್ ಸಿದ್ಧೀಖಿ, ಸರ್ ಖಾಜಿ ವಲಿವುಲ್ಲಾ, , ವಿಧಾನ ಪರಿಷತ್ ಸದಸ್ಯ ಕೆ. ಅಬ್ದುಲ್ ಜಬ್ಬಾರ್, ಶಾಸಕ ಈ. ತುಕಾರಾಂ ಹಾಗೂ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಸಿರಾಜ್ ಶೇಖ್ ಅವರು ಮಾತನಾಡಿದರು.

ಜಿಲ್ಲಾ ವಕ್ಫ್‌ ಅಧ್ಯಕ್ಷ ಕೆ.ಎಂ.ರಿಜ್ವಾನ್‌ ಉಮರ್, ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಎಸ್.ಎಲ್.ಸ್ವಾಮಿ,  ಸ್ಥಳೀಯ ಅಂಜುಮನ್ ಕಮಿಟಿ ಅಧ್ಯಕ್ಷ ಸಿ. ಹಸೇನ್, ಮುಖಂಡರಾದ ರೋಷನ್ ಜಮೀರ್, ಕೆ. ಇಲಿಯಾಜ್, ಎಂ. ನಬಿಸಾಬ್, ಜಾಕೀರ್ ಹುಸೇನ್, ಎನ್. ಜಿಲಾನ್‌ಸಾಬ್, ಕೆ.ಇ. ಜಮೀರ್‌ಸಾಬ್, ಫಕ್ರುದ್ದೀನ್‌, ಡಾ.ಹುಚ್ಚೂಸಾಬ್, ವಧು–ವರರ ಸಂಬಂಧಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.