ADVERTISEMENT

ಸೌಕರ್ಯ ವಂಚಿತ ಗೊಗ್ಗಾ ಬಡಾವಣೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2017, 8:42 IST
Last Updated 16 ಡಿಸೆಂಬರ್ 2017, 8:42 IST
ಸಂಡೂರಿನ ಒಂದನೇ ವಾರ್ಡಿನ ಗೊಗ್ಗಾ ಬಡಾವಣೆಯಲ್ಲಿ ರಸ್ತೆಯ ಅವ್ಯವಸ್ಥೆ.
ಸಂಡೂರಿನ ಒಂದನೇ ವಾರ್ಡಿನ ಗೊಗ್ಗಾ ಬಡಾವಣೆಯಲ್ಲಿ ರಸ್ತೆಯ ಅವ್ಯವಸ್ಥೆ.   

ಸಂಡೂರು: ಪಟ್ಟಣದ ಒಂದನೇ ವಾರ್ಡಿನ ದೌಲತ್‌ಪುರ ರಸ್ತೆಯ ಗೊಗ್ಗಾ ಬಡಾವಣೆ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಪುರಸಭೆಗೆ ಸಲ್ಲಿಸಿದ ಅರ್ಜಿಗೆ ಇದುವರೆಗೆ ಸ್ಪಂದನೆ ದೊರೆತಿಲ್ಲ ಎಂಬುದು ಬಡಾವಣೆಯ ನಿವಾಸಿಗಳ ದೂರು.

ಹದಗೆಟ್ಟ ರಸ್ತೆ: ಬಡಾವಣೆಗೆಯ ಬಹಳಷ್ಟು ರಸ್ತೆಗಳು ಮಣ್ಣಿನವು. ಮಳೆಗಾಲದಲ್ಲಿ ಸಂಚರಿಸುವುದು ಬಹಳ ಕಷ್ಟ. ದ್ವಿಚಕ್ರ ವಾಹನ ಸಂಚಾರ ಅತಿಕಷ್ಟ. ಕೆಲವೆಡೆ ರಸ್ತೆ ಪಕ್ಕ ಚರಂಡಿ ನಿರ್ಮಿಸಿಲ್ಲ. ಹೀಗಾಗಿ ತ್ಯಾಜ್ಯ ನೀರು ಮನೆ ಮುಂದಿನ ರಸ್ತೆಯಲ್ಲೇ ನಿಲ್ಲುತ್ತದೆ.

‘ರಸ್ತೆ ದುರಸ್ತಿ ಮತ್ತು ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂಬುದು ಬಡಾವಣೆಯ ನಿವಾಸಿ ಎನ್. ಪ್ರಭಾಕರರಾವ್ ಅವರ ದೂರು.

ADVERTISEMENT

ಬಡಾವಣೆಯ ಉದ್ಯಾನವನ ಮುಳ್ಳುಕಂಟಿಗಳಿಂದ ತುಂಬಿದ್ದು ನಿರುಪಯುಕ್ತವಾಗಿದೆ. ಇಲ್ಲಿನ ಮುಖ್ಯ ರಸ್ತೆಯ ಬಹುಭಾಗವನ್ನು ವಿದ್ಯುತ್ ಪರಿವರ್ತಕ ಆವರಿಸಿದೆ. ಕಂಬಗಳು ವಾಲಿಕೊಂಡು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.

‘ರಸ್ತೆಯ ಮಧ್ಯದಲ್ಲಿರುವ ವಿದ್ಯುತ್ ಪರಿವರ್ತಕ ಮತ್ತು ಕೆಲ ಕಂಬಗಳನ್ನು ಸ್ಥಳಾಂತರಿಸದೆ ರಸ್ತೆ ನಿರ್ಮಾಣ ಕಷ್ಟಸಾಧ್ಯ. ನಮ್ಮ ಮನೆಯ ಮೇಲೆ ನಿಂತರೆ ವಿದ್ಯುತ್ ತಂತಿಗಳು ಕೈಗೆ ಬಡಿಯುತ್ತವೆ. ಹೀಗಾಗಿ ಮನೆಯ ಮೇಲೆ ನಿಲ್ಲದಂತಹ ಪರಿಸ್ಥಿತಿ ಉಂಟಾಗಿದೆ’ ಎಂದು ನಿವಾಸಿ ಹುಚ್ಚಪ್ಪ ಅಸಹಾಯಕತೆ ವ್ಯಕ್ತಪಡಿಸಿದರು.

‘ಬಡಾವಣೆಯಲ್ಲಿ ಎರಡು ರಸ್ತೆ ನಿರ್ಮಾಣ ಕಾರ್ಯ ನಡೆದಿದೆ. ಇತರೆ ರಸ್ತೆಗಳ ಅಭಿವೃದ್ಧಿಗೆ ₹58 ಲಕ್ಷ ಅನುದಾನ ಬಿಡುಗಡೆಯಾಗಿದೆ’ ಎಂದು ಪುರಸಭೆ ಸದಸ್ಯ ನರೇಂದ್ರಪಾಟೀಲ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.