ADVERTISEMENT

ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಿಗಿಲ್ಲ ಪಟ್ಟ

ಹೊಸಪೇಟೆ ಸ್ಥಳೀಯ ಸಂಸ್ಥೆಗಳಿಗಿಲ್ಲ ನಾಮನಿರ್ದೇಶನ; ಮುಖಂಡರ ಕಚ್ಚಾಟದಿಂದ ಅಧಿಕಾರವಿದ್ದರೂ ಸಿಗದ ಅವಕಾಶ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 24 ಡಿಸೆಂಬರ್ 2016, 5:32 IST
Last Updated 24 ಡಿಸೆಂಬರ್ 2016, 5:32 IST
ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಿಗಿಲ್ಲ ಪಟ್ಟ
ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಿಗಿಲ್ಲ ಪಟ್ಟ   
ಹೊಸಪೇಟೆ: ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಮೂರುವರೆ ವರ್ಷ ಕಳೆದಿದೆ. ಆದರೆ, ಇಲ್ಲಿಯವರೆಗೆ ತಾಲ್ಲೂಕಿನ ಯಾವುದೇ ಸ್ಥಳೀಯ ಸಂಸ್ಥೆಗೆ ಪಕ್ಷದ ಕಾರ್ಯಕರ್ತ ರನ್ನು ನಾಮನಿರ್ದೇಶನ ಮಾಡಿಲ್ಲ. ಇದ ರಿಂದ ಸಹಜವಾಗಿಯೇ ಪಕ್ಷದ ಕಾರ್ಯ ಕರ್ತರಲ್ಲಿ ಬೇಸರ ಮೂಡಿದೆ.
 
ಬಳ್ಳಾರಿ ಜಿಲ್ಲೆಯ ಕಂಪ್ಲಿ, ಹೂವಿನ ಹಡಗಲಿ, ಕೊಟ್ಟೂರು, ಬಳ್ಳಾರಿ ನಗರ ಸ್ಥಳೀಯ ಸಂಸ್ಥೆಗಳಿಗೆ ಪಕ್ಷದ ಕಾರ್ಯ ಕರ್ತರನ್ನು ವಿವಿಧ ಸ್ಥಾನಗಳಿಗೆ ಎರಡನೇ ಅವಧಿಗೆ ನಾಮನಿರ್ದೇಶನ ಮಾಡಲಾ ಗಿದೆ. ಆದರೆ, ಹೊಸಪೇಟೆಯಲ್ಲಿ ಮಾತ್ರ ಇದುವರೆಗೆ ಯಾವುದೇ ಸಂಸ್ಥೆಗೆ ಒಬ್ಬ ರನ್ನೂ ನಾಮನಿರ್ದೇಶನ ಮಾಡಿಲ್ಲ. ಪಕ್ಷದ ಮುಖಂಡರೇ ಹೇಳಿಕೊಳ್ಳುವಂತೆ, ಸಮನ್ವಯದ ಕೊರತೆ, ಒಣ ಪ್ರತಿಷ್ಠೆ ಯಿಂದ ಯಾವ ಸಂಸ್ಥೆಗೂ ನಾಮನಿರ್ದೇ ಶನ ಮಾಡಲು ಸಾಧ್ಯವಾಗಿಲ್ಲ. 
 
ಈ ಹಿಂದೆ ಪಿ.ಟಿ. ಪರಮೇಶ್ವರ ನಾಯ್ಕ ಅವರು ಸಚಿವರಾಗಿದ್ದಾಗಲೂ ಇದು ಸಾಧ್ಯವಾಗಿರಲಿಲ್ಲ. ಸಂತೋಷ ಲಾಡ್‌ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪಕ್ಷದ ಕಾರ್ಯಕರ್ತರಲ್ಲಿ ಆಸೆ ಚಿಗುರೊಡೆದಿತ್ತು. ಈಗಲಾದರೂ ಅವ ಕಾಶ ಸಿಗಬಹುದು ಅಂದುಕೊಂಡಿದ್ದರು. ಆದರೆ, ಇಲ್ಲಿಯವರೆಗೆ ಕಾರ್ಯಕರ್ತರ ಆಸೆ ಈಡೇರಿಲ್ಲ. 
 
ಈ ಕುರಿತು ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಬಿ.ಬಿ. ಶಿವಯೋಗಿ ಅವರನ್ನು ಪ್ರಶ್ನಿಸಿದರೆ, ‘ಪಕ್ಷದ ಮುಖಂಡರಲ್ಲಿ ಸಮನ್ವಯದ ಕೊರತೆ ಇದೆ. ಪಕ್ಷದ ಮುಖಂಡರಾದ ಅಬ್ದುಲ್‌ ವಹಾಬ್‌ ಮತ್ತು ಎಚ್‌.ಆರ್‌. ಗವಿಯಪ್ಪ ಅವರು ತಲಾ ಒಂದೊಂದು ಪಟ್ಟಿ ಕೊಟ್ಟಿದ್ದಾರೆ. ಇದರಿಂದ ಇಲ್ಲಿಯ ವರೆಗೆ ಹೊಸಪೇಟೆಯ ಯಾವ ಸ್ಥಳೀಯ ಸಂಸ್ಥೆಗೂ ಕಾರ್ಯಕರ್ತರನ್ನು ನಾಮ ನಿರ್ದೇಶನ ಮಾಡಲು ಸಾಧ್ಯವಾಗಿಲ್ಲ’ ಎಂದು ಪ್ರತಿಕ್ರಿಯಿಸಿದರು.
 
ಈ ವಿಷಯವನ್ನು ಹೈಕಮಾಂಡ್‌ ಗಮನಕ್ಕೆ ತರಲಾಗಿದೆ. ಅದು ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದರು.
 
ಯಾವ ಸಂಸ್ಥೆಗೂ ಪಕ್ಷದ ಕಾರ್ಯ ಕರ್ತರನ್ನು ನೇಮಕ ಮಾಡದೇ ಇರುವು ದಕ್ಕೆ ಕೆಲ ಮುಖಂಡರು ಬಹಿರಂಗ ವಾಗಿಯೇ ಅಸಮಾಧಾನ ತೋರಿದ್ದಾರೆ. 
ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಮ ಕೃಷ್ಣ ನಿಂಬಗಲ್‌ ಪ್ರತಿಕ್ರಿಯಿಸಿ, ‘ಮೂರು ವರ್ಷಗಳಿಂದ ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದರೂ ಯಾವುದೇ ಪ್ರಯೋ ಜನ ಇಲ್ಲದಂತಾಗಿದೆ. ಪಕ್ಷಕ್ಕಾಗಿ ಹಗಲಿ ರುಳು ದುಡಿದ ಒಬ್ಬ ಕಾರ್ಯಕರ್ತರಿಗೂ ಇಲ್ಲಿವರೆಗೆ ನಾಮನಿರ್ದೇಶನ ಮಾಡಿಲ್ಲ. ಈ ವಿಷಯವಾಗಿ ಕಾರ್ಯಕರ್ತರಲ್ಲಿ ಬಹಳ ಅಸಮಾಧಾನವಿದೆ. ಇದು ಮುಂಬರುವ ಚುನಾವಣೆಯಲ್ಲಿ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದರೂ ಆಶ್ಚರ್ಯವಿಲ್ಲ’ ಎಂದು ತಿಳಿಸಿದರು.
 
ಯಾವುದೇ ಪಕ್ಷ, ಮುಖಂಡರು ಬೆಳೆಯಬೇಕಾದರೆ ಕಾರ್ಯಕರ್ತರ ಶ್ರಮ ಕಾರಣ. ಹೀಗಿದ್ದರೂ ಕಾರ್ಯಕರ್ತರನ್ನು ಕಡೆಗಣಿಸಿರುವುದು ಸರಿಯಲ್ಲ. ಮುಂಬ ರುವ ಚುನಾವಣೆಯಲ್ಲಿ ತಟಸ್ಥವಾಗಿ ಉಳಿದುಕೊಂಡು, ಕಾರ್ಯಕರ್ತರನ್ನು ನಿರ್ಲಕ್ಷಿಸಿರುವ ಮುಖಂಡರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಹೇಳಿದರು.
 
‘ಮುಖಂಡರಾದ ಗವಿಯಪ್ಪ, ವಹಾಬ್‌ ಮತ್ತು ದೀಪಕ್‌ ಸಿಂಗ್‌ ಅವರು ದೊಡ್ಡವರು. ನಮ್ಮನ್ನು ಯಾರೂ ಕೇಳು ವುದಿಲ್ಲ. ನಮ್ಮ ಲೆಟರ್‌ ಪ್ಯಾಡ್‌ಗೂ ಯಾವುದೇ ಬೆಲೆಯಿಲ್ಲ. ಈ ಮೂವರ ಹೊಡೆತಕ್ಕೆ ಪಕ್ಷದ ಕಾರ್ಯಕರ್ತರು ಕಂಗಾಲಾಗಿದ್ದಾರೆ’ ಎಂದು ಹೊಸಪೇಟೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶಿವಮೂರ್ತಿ ತಿಳಿಸಿದರು.
 
‘ನಾನು ಸೂಚಿಸಿದ ಅಭ್ಯರ್ಥಿಗಳೇ ಅಂತಿಮ ಆಗಬೇಕು ಎಂದು ಮೂವರೂ ಮುಖಂಡರು ಜಿದ್ದಿಗೆ ಬಿದ್ದಿದ್ದಾರೆ. ಇವರ ಪ್ರತಿಷ್ಠೆಯಿಂದ ಕಾರ್ಯಕರ್ತರಿಗೆ ಯಾವ ಅವಕಾಶ ಸಿಗುತ್ತಿಲ್ಲ. ಹೀಗೆ ಮಾಡಿದರೆ ಪಕ್ಷ ಹೇಗೆ ಬೆಳೆಯುತ್ತದೆ’ ಎಂದು ಪ್ರಶ್ನಿಸಿದರು.
 
ಜಿಲ್ಲಾ ಪಂಚಾಯಿತಿ ಸದಸ್ಯ ಪ್ರವೀಣ್‌ ಸಿಂಗ್‌ ಪ್ರತಿಕ್ರಿಯಿಸಿ, ಪಕ್ಷದಲ್ಲಿ ಏನೆಲ್ಲ ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಶೀಘ್ರದಲ್ಲೇ ವಿವಿಧ ಸ್ಥಳೀಯ ಸಂಸ್ಥೆಗಳಿಗೆ ಪಕ್ಷದ ಕಾರ್ಯ ಕರ್ತರ ನೇಮಕ ಮಾಡಲಾಗುವುದು ಎಂದು ಹೇಳಿದರು.
 
ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಅವರನ್ನು ಸಂಪರ್ಕಿಸಿದರೆ ಅವರು ಮಾಹಿತಿಗೆ ಲಭ್ಯರಾಗಲಿಲ್ಲ. 
 
**
ಹೊರಗಿನವರಿಗೆ  ಮಣೆ, ಸ್ಥಳೀಯರಿಗೆ ಅನ್ಯಾಯ:  ಅಸಮಾಧಾನ
ಹೊಸಪೇಟೆ ತಾಲ್ಲೂಕು ಪಂಚಾಯಿತಿಯ ಪ್ರಗತಿ ಪರಿಶೀಲನಾ ಸಭೆಗೆ (ಕೆಡಿಪಿ) ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಪ್ರಕಾಶ್‌ ಜೈನ್‌ ಅವರನ್ನು ನಾಮನಿರ್ದೇಶನ ಮಾಡಿರುವುದು ಪಕ್ಷದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
 
ಪಕ್ಷಕ್ಕಾಗಿ ಹಲವು ವರ್ಷಗಳಿಂದ ತಾಲ್ಲೂಕಿನಲ್ಲಿ ಅನೇಕ ಕಾರ್ಯಕರ್ತರು ದುಡಿಯುತ್ತಿದ್ದಾರೆ. ಯಾರಾದರೂ ಒಬ್ಬರನ್ನು ನೇಮಿಸಬಹುದಿತ್ತು. ಆದರೆ, ಹೊರಗಿನವರನ್ನು ನೇಮಕ ಮಾಡಿರುವುದು ಸರಿಯಲ್ಲ ಎಂದು ಕಾಂಗ್ರೆಸ್‌ ಜಿಲ್ಲಾ ಕಾರ್ಯದರ್ಶಿ ರಾಮಕೃಷ್ಣ ನಿಂಬಗಲ್‌ ಹೇಳಿದರು.
 
**
ಹೊಸಪೇಟೆಯಲ್ಲಿ ಪಕ್ಷದ ಮುಖಂಡರಲ್ಲಿ ಸಮನ್ವಯದ ಕೊರತೆ ಇದೆ. ಇದರಿಂದ ಯಾವುದೇ ಸ್ಥಳೀಯ ಸಂಸ್ಥೆಗೆ ಕಾರ್ಯಕರ್ತರನ್ನು ನೇಮಕ ಮಾಡಲು ಆಗಿಲ್ಲ
-ಬಿ.ಬಿ. ಶಿವಯೋಗಿ
ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ
 
**
ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಪಟ್ಟಿ ಕಳುಹಿಸಿಕೊಟ್ಟಿದ್ದೇವೆ. ಆದರೆ, ಇನ್ನೂ ಅದು ಅಂತಿಮಗೊಂಡಿಲ್ಲ. ಈ ಕುರಿತು ಸ್ಥಳೀಯ ಕಾರ್ಯಕರ್ತರಿಗೆ ಅಸಮಾಧಾನ ಇದೆ
-ದೀಪಕ್‌ ಕುಮಾರ್‌ ಸಿಂಗ್‌
ಕಾಂಗ್ರೆಸ್‌ ಮುಖಂಡ
 
**
ಪಕ್ಷದ ಮುಖಂಡರು ಕಾರ್ಯಕರ್ತರನ್ನು ಕಡೆಗಣಿಸಿರುವುದು ಸರಿಯಲ್ಲ. ಮುಂಬರುವ ಚುನಾವಣೆಯಲ್ಲಿ ಪಕ್ಷವು ಇದರ ದುಷ್ಪರಿಣಾಮವನ್ನು ಎದುರಿಸಬೇಕಾಗುತ್ತದೆ
-ರಾಮಕೃಷ್ಣ ನಿಂಬಗಲ್‌
ಕಾಂಗ್ರೆಸ್‌  ಜಿಲ್ಲಾ  ಘಟಕದ ಕಾರ್ಯದರ್ಶಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.