ADVERTISEMENT

ಹನಿ ನೀರಾವರಿಯಿಂದ ಸಮೃದ್ಧ ನುಗ್ಗೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 6:23 IST
Last Updated 19 ಏಪ್ರಿಲ್ 2017, 6:23 IST

ಸಂಡೂರು: ಈ ಬಾರಿಯ ಬಿರು ಬಿಸಿಲಿ ನಿಂದ ಎಲ್ಲೆಡೆ ನೀರಿಗಾಗಿ ತತ್ವಾರ ಎದ್ದಿದೆ. ನೀರಿನ ಕೊರತೆಯಿಂದ ಬಹುತೇಕ ರೈತರು ಹಿಂಗಾರು ಹಂಗಾಮಿನ ಬೆಳೆ ಬೆಳೆಯದೆ ತಮ್ಮ ಜಮೀನುಗಳನ್ನು ಖಾಲಿ ಬಿಟ್ಟಿದ್ದಾರೆ. ಬಿರುಬಿಸಿಲಿನ ಈ ಹೊತ್ತಿನಲ್ಲಿ ಬೆಳೆಗೆ ಹಾಕುವ ನೀರು ಆವಿಯಾಗು ವುದೇ ಹೆಚ್ಚು. ಆದರೆ, ಹೀಗೆ ಆವಿಯಾಗ ದಂತೆ ತಡೆಯುವ  ಮಲ್ಚಿಂಗ್‌ ವಿಧಾನ ವನ್ನು ಅಳವಡಿಸಿಕೊಂಡು ತಾಲ್ಲೂಕಿನ ರೈತರೊಬ್ಬರು ಯಶಸ್ವಿಯಾಗಿದ್ದಾರೆ.

ಕೃಷ್ಣಾನಗರದ ಪ್ರಗತಿಪರ ರೈತ ಬಡ ಗುಳಿ ಹುಚ್ಚಪ್ಪ, ತಮ್ಮ ನಾಲ್ಕೂವರೆ ಎಕರೆ ಜಮೀನಿನಲ್ಲಿ ತಮ್ಮ ಕೊಳವೆಬಾಯಿಯಲ್ಲಿ ಲಭ್ಯವಿರುವ ಕಡಿಮೆ ನೀರು ಬಳಸಿ ಸಮೃದ್ಧ ಬೆಳೆ ತೆಗೆಯುವಲ್ಲಿ ಯಶಸ್ವಿ ಆಗಿ ದ್ದಾರೆ. ಭೂಮಿಯ ತೇವಾಂಶವನ್ನು ಹೆಚ್ಚು ಸಮಯ ಉಳಿಸುವುದು ಮಲ್ಚಿಂಗ್‌ ಕಾರ್ಯತಂತ್ರದ ಹೆಗ್ಗಳಿಕೆ.
ಹವಾಮಾನ, ಮಾರುಕಟ್ಟೆ ಸ್ಥಿತಿಗತಿ ಆಧರಿಸಿ ಬೇರೆ ಬೇರೆ ಬಗೆಯ ಬೆಳೆಯನ್ನು ಬೆಳೆಯುವ ಹುಚ್ಚಪ್ಪ ಅವರು, ಒಂದು ಬೆಳೆ ಕೈಕೊಟ್ಟರೆ ಇನ್ನೊಂದು ಕೈಹಿಡಿಯು ತ್ತದೆ ಎನ್ನುವ ವಿಶ್ವಾಸ ಹೊಂದಿದ್ದಾರೆ. ಎರಡೂವರೆ ಎಕರೆಯಲ್ಲಿ ನುಗ್ಗೆ, ನಿಂಬೆ ಬೆಳೆದರೆ ಇನ್ನುಳಿದ ಜಮೀನಿನಲ್ಲಿ ದಾಳಿಂಬೆ ಗಿಡ ಬೆಳೆದಿದ್ದಾರೆ.  ಇದೆಲ್ಲಕ್ಕೂ ಅವರು ಅಳವಡಿಸಿದ್ದು ಹನಿ ನೀರಾವರಿ ಪದ್ಧತಿ. ಪ್ರತಿ ಹನಿ  ಅಮೂಲ್ಯವಾದುದು ಎಂಬ ನಂಬಿಕೆಯಿಂದ ಲಭ್ಯವಿರುವ ನೀರನ್ನು ಜತನ ದಿಂದ ಬಳಸುತ್ತಾರೆ.

‘ನುಗ್ಗೆಗೆ ಹೆಚ್ಚು ನೀರು ಬೇಕಿಲ್ಲ. ವಾರಕ್ಕೊಮ್ಮೆ ಹನಿ ನೀರಾವರಿ ಮೂಲಕ ನೀರು ಪೂರೈಸುತ್ತೇನೆ. ಹೊಲದಲ್ಲಿನ ಕಳೆ, ಹುಲ್ಲನ್ನು ಆಗಾಗ ಕಿತ್ತು ಗಿಡ ಹಾಗೂ ಬದುಗಳ ಬಳಿಗೆ ಹಾಕುತ್ತೇನೆ. ಅದು ಗೊಬ್ಬರವಾಗಿ ಮಾರ್ಪಡುತ್ತದಲ್ಲದೇ ನೀರು ಆವಿಯಾಗಿ ಹೋಗದಂತೆಯೂ ತಡೆಯುತ್ತದೆ. ಮಣ್ಣಿನ ತೇವಾಂಶ ಹೆಚ್ಚು ಹೊತ್ತು ಉಳಿಯುತ್ತದೆ. ಇದೇ ಮಲ್ಚಿಂಗ್‌ ವಿಧಾನ’ ಎನ್ನುತ್ತಾರೆ ಅವರು.

ADVERTISEMENT

ಆಸರೆಯಾದ ಉದ್ಯೋಗ ಖಾತ್ರಿ: 3 ವರ್ಷದ ಹಿಂದೆ ನುಗ್ಗೆ ಬೆಳೆದು ಉತ್ತಮ ಲಾಭಗಳಿಸಿ, ನಂತರದಲ್ಲಿ ನುಗ್ಗೆ ಬೆಳೆ ತೆಗೆದು ಪಪ್ಪಾಯ ಬೆಳೆದಿದ್ದರು.  ತೋಟ ಗಾರಿಕೆ ಇಲಾಖೆಯಿಂದ ರೈತ ಸಿರಿ ಯೋಜನೆ ಅಡಿ 2016–17ನೇ ಸಾಲಿನಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ₹ 69 ಸಾವಿರ ಧನ ಸಹಾಯ ಪಡೆದು, ನುಗ್ಗೆ ಬೆಳೆದಿದ್ದಾರೆ.

10–15 ವರ್ಷ ಉತ್ತಮ ಬೆಳೆ: ಚೆನ್ನಾಗಿ ಆರೈಕೆ ಮಾಡಿದರೆ, ನುಗ್ಗೆ ಗಿಡಗಳು 10–15 ವರ್ಷ ಚೆನ್ನಾಗಿ ಕಾಯಿ ಕೊಡುತ್ತವೆ. ಕುರಿ ಗೊಬ್ಬರ, ಬೇವಿನ ಹಿಂಡಿ ಹೊಲಕ್ಕೆ ಹಾಕಿದ್ದೇನೆ. ಗಿಡಗಳಿಗೆ ಜೀಡು ಹಿಡಿಯ ದಂತೆ ನೋಡಿಕೊಳ್ಳಬೇಕು. ನುಗ್ಗೆ ಗಿಡ ಗಳ ಮಧ್ಯ ನಿಂಬೆ ಗಿಡಗಳನ್ನು ಹಾಗೂ ಉಳಿದ ಎರಡು ಎಕರೆ ಪ್ರದೇಶದಲ್ಲಿ ದಾಳಿಂಬೆ ಸಸಿಗಳನ್ನು ಹಾಕಿದ್ದೇನೆ. ಅವು ಗಳನ್ನು ಚಿಕ್ಕವಿವೆ. ನುಗ್ಗೆ ಹೂಗಳ ಸುತ್ತ ಜೇನು ಹುಳು ಬರುವುದರಿಂದ, ಜೇನು ಸಾಕಣೆ ಮಾಡಲು ಯೋಜಿಸಿದ್ದೇನೆ. ಇದರಿಂದ ಕೃಷಿ ಮತ್ತಷ್ಟು ಲಾಭದಾಯಕ ಆಗಲಿದೆ ಎನ್ನುತ್ತಾರೆ ಬಡಗುಳಿ ಹುಚ್ಚಪ್ಪ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.