ADVERTISEMENT

ಹಬ್ಬಕ್ಕೆ ಸಿದ್ಧವಾಗುತ್ತಿವೆ ಮಣ್ಣಿನ ಗಣಪ

ಕೋಲ್ಕತ್ತದ ತಂಡದಿಂದ ಬಗೆ ಬಗೆಯ ಮೂರ್ತಿ ತಯಾರಿ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 12 ಜುಲೈ 2017, 6:36 IST
Last Updated 12 ಜುಲೈ 2017, 6:36 IST

ಹೊಸಪೇಟೆ: ಗಣೇಶ ಚತುರ್ಥಿಗೆ ಒಂದೂವರೆ ತಿಂಗಳಷ್ಟೇ ಸಮಯ ಉಳಿದಿದೆ. ಅಷ್ಟಾರಲ್ಲಾಗಲೇ ನಗರದಲ್ಲಿ ಗಣೇಶನ ಮೂರ್ತಿಗಳ ನಿರ್ಮಾಣ ಕೆಲಸ ಭರದಿಂದ ನಡೆದಿದೆ.

ನೀರು ಮಲಿನವಾಗುವಂತಹ ವಿಷ ಕಾರಕ ರಾಸಾಯನಿಕ ಒಳಗೊಂಡ ಬಣ್ಣಗಳನ್ನು ಪ್ರತಿಮೆಗಳಿಗೆ ಉಪಯೋಗಿ ಸದಂತೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ತಾಕೀತು ಮಾಡಿರುವುದ ರಿಂದ ಈ ಬಾರಿ ಮಣ್ಣಿನ ಪ್ರತಿಮೆಗಳ ನಿರ್ಮಾಣಕ್ಕೆ  ಒತ್ತು ಕೊಡಲಾಗಿದೆ.

ನಗರದ ಮೇನ್‌ ಬಜಾರ್‌ನಲ್ಲಿರುವ ವಿನಾಯಕ ಗಣೇಶ ಮೂರ್ತಿ ಮಾರಾಟ ಮಳಿಗೆಯಲ್ಲಿ ಎರಡು ತಿಂಗಳಿಂದ ವಿವಿಧ ಬಗೆಯ, ಆಕಾರದ ಮೂರ್ತಿಗಳನ್ನು ತಯಾರಿಸಲಾಗುತ್ತಿದೆ. ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತದಿಂದ ಬಂದಿರುವ ಒಂಬತ್ತು ಜನ ಪರಿಣತರು ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ADVERTISEMENT

ಸ್ಥಳೀಯವಾಗಿ ಸಿಗುವ ಕೆಂಪು ಮಣ್ಣು, ಬಿದಿರನ್ನು ಬಳಸಿಕೊಂಡು ಪ್ರತಿಮೆ ನಿರ್ಮಿಸಲಾಗುತ್ತಿದೆ. ಇಡೀ ಮೂರ್ತಿ ತಯಾರಾದ ಬಳಿಕ ಕೊನೆಯಲ್ಲಿ ಹೊಳಪು ಬರಲು ಕೋಲ್ಕತ್ತದಿಂದ ತಂದಿರುವ ಮಣ್ಣನ್ನು ಉಪಯೋಗಿಸಲಾ ಗುತ್ತದೆ. ಬಳಿಕ ಅವುಗಳ ಮೇಲೆ ವಾಟರ್‌ ಕಲರ್‌ ಮಾಡಲಾಗುತ್ತದೆ. ಕೆಲವರು ಸಹಜವಾಗಿಯೇ ಇರುವ ಪ್ರತಿಮೆಗಳನ್ನು ಬಯಸುವುದರಿಂದ ಕೆಲವಕ್ಕೆ ಬಣ್ಣ ಬಳಿಯದೆ ಹಾಗೇ ಬಿಡಲಾಗುತ್ತದೆ.

ಮೂರು ಅಡಿ ಎತ್ತರವಿರುವ ಗಣೇಶ ಪ್ರತಿಮೆಯಿಂದ ಆರು, ಎಂಟು, ಹತ್ತು ಹಾಗೂ ಹನ್ನೇರಡು ಅಡಿಗಳ ವರೆಗೆ ಎತ್ತರವಿರುವ ಪ್ರತಿಮೆಗಳನ್ನು ಈಗಾಗಲೇ ನಿರ್ಮಿಸಲಾಗಿದೆ. ರಥದ ಮೇಲೆ ಸವಾರಿ ಮಾಡುತ್ತಿರುವ ಗಣೇಶ, ಗರುಡ ಗಣೇಶ, ಇಲಿ ಮೇಲೆ ಕೂತಿರುವ ಗಣಪ, ನಾಗ ದೇವತೆ ಮೇಲೆ ಕೂಳಿತಿರುವ ಬೆನಕ ಇದರಲ್ಲಿ ಪ್ರಮುಖವಾದವು. ಮೂರು ಅಡಿಯ ಗಣೇಶನ ಪ್ರತಿಮೆಗೆ ₹ 5 ಸಾವಿರ ಇದ್ದರೆ, ಹನ್ನೆರಡು ಅಡಿಯ ಗಣೇಶನಿಗೆ ₹ 20 ಸಾವಿರ ಬೆಲೆ ಇದೆ. ಅವುಗಳ ವಿನ್ಯಾಸ ಬದಲಾದಂತೆ ಬೆಲೆಯೂ ಬದಲಾಗುತ್ತದೆ.

ಕೋಲ್ಕತ್ತದ ಸ್ವಪ್ನ ಪಾಲ್‌ ಅವರನ್ನು ಒಳಗೊಂಡ ಒಂಬತ್ತು ಜನರು ಕಳೆದ 15 ವರ್ಷಗಳಿಂದ ನಿರಂತರವಾಗಿ ಹೊಸಪೇಟೆಗೆ ಬಂದು ಪ್ರತಿಮೆ ತಯಾರಿಸುತ್ತಿದ್ದಾರೆ. ಮೂರು ತಿಂಗಳ ವರೆಗೆ ಕುಟುಂಬ ಸದಸ್ಯರಿಂದ ದೂರ ಉಳಿದು, ಪ್ರತಿಮೆ ನಿರ್ಮಾಣ ಮಾಡುತ್ತಾರೆ. ಮತ್ತೆ ತಮ್ಮ ಊರುಗಳಿಗೆ ಹಿಂತಿರುಗಿದ ನಂತರ ದುರ್ಗಾ ದೇವಿಯ ಪ್ರತಿಮೆಗಳನ್ನು ನಿರ್ಮಿಸುತ್ತಾರೆ.

‘ನಮ್ಮ ಪೂರ್ವಜರು ಪ್ರತಿಮೆಗಳನ್ನು ತಯಾರಿಸುತ್ತಿದ್ದರು. ನಾವು ಕೂಡ ಅದೇ ವೃತ್ತಿಯಲ್ಲಿ ಮುಂದುವರೆದಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ದೊಡ್ಡ ದೊಡ್ಡ ದುರ್ಗಾದೇವಿಯ ಪ್ರತಿಮೆಗಳನ್ನು ಮಾಡುತ್ತೇವೆ. ಗಣೇಶ ಉತ್ಸವಕ್ಕೂ ಮುನ್ನ ಪ್ರತಿ ವರ್ಷ ಮೂರು ತಿಂಗಳು ಹೊಸಪೇಟೆಯಲ್ಲಿ ಇದ್ದುಕೊಂಡು ಮೂರ್ತಿಗಳನ್ನು ನಿರ್ಮಿಸಿಕೊಡುತ್ತೇವೆ. ಇದಕ್ಕಾಗಿ ಕೈತುಂಬ ಹಣ ಸಿಗುತ್ತದೆ’ ಎನ್ನುತ್ತಾರೆ ಸ್ವಪ್ನ ಪಾಲ್‌.

‘ಪ್ರತಿ ವರ್ಷ ಹೊಸ ಹೊಸ ವಿನ್ಯಾಸದ ಮೂರ್ತಿಗಳನ್ನು ತಯಾರಿಸು ತ್ತೇವೆ. ಇಂತಹ ಪ್ರತಿಮೆಗಳೇ ಬೇಕೆಂದು ಕೆಲವರು ಮುಂಚಿತವಾಗಿ ಹಣ ಕೊಟ್ಟು ತಿಳಿಸುತ್ತಾರೆ. ಅವರಿಗೆ ಅವರ ಅಭಿರುಚಿಗೆ ತಕ್ಕಂತಹ ಪ್ರತಿಮೆ ಮಾಡಿ ಕೊಡುತ್ತೇವೆ. ಕೆಲವನ್ನು ನಾವೇ ನಮ್ಮ ಬುದ್ಧಿ ಉಪಯೋಗಿಸಿ ತಯಾರಿಸುತ್ತೇವೆ. ನಾವು ತಯಾರಿಸಿದ ಮೂರ್ತಿಗಳಿಗೆ ಭಾರಿ ಬೇಡಿಕೆ ಇದೆ. ಇದಕ್ಕೆ ಸಾಕ್ಷಿ ಪ್ರತಿ ವರ್ಷ ಒಂದೇ ಒಂದು ಪ್ರತಿಮೆ ಉಳಿಯದಿರುವುದು’ ಎಂದರು.

ಬಹುತೇಕ ಮೂರ್ತಿಗಳು ಸಿದ್ಧವಾಗಿದ್ದು, ಅವುಗಳಿಗೆ ಅಂತಿಮ ಸ್ಪರ್ಶ ನೀಡುವ ಕೆಲಸ ನಡೆಯುತ್ತಿದೆ. ಅನೇಕ ಜನ ಮುಂಗಡ ಹಣ ಪಾವತಿಸಿ, ಇಷ್ಟದ ಮೂರ್ತಿಯನ್ನು ಮುಂಚಿತವಾಗಿ ತಮ್ಮದಾಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.