ADVERTISEMENT

‘ಹಿಂದೂ, ಮುಸ್ಲಿಂ ಆಶಯ ಒಂದೇ’

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 9:57 IST
Last Updated 20 ಏಪ್ರಿಲ್ 2017, 9:57 IST

ಹೂವಿನಹಡಗಲಿ:  ಪಟ್ಟಣದ ಗೌಸಿಯಾ ನಗರದ ಹಜರತ್ ಬಿಲಾಲ್ 6ನೇ ಸುನ್ನಿ ಜಮಾತ್ ವತಿಯಿಂದ ಬುಧವಾರ ಮುಸ್ಲಿಂ ಬಡ ಮಕ್ಕಳಿಗೆ ಸಾಮೂಹಿಕ ಮುಂಜಿ ಕಾರ್ಯಕ್ರಮ ನಡೆಯಿತು.ನ್ಯೂ ಸ್ಟಾರ್ ಕಮಿಟಿ, ಕೆಜಿಎನ್ ಕಮಿಟಿ ವತಿಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ಮುಂಜಿ ನಡೆಯಿತು.ಮುಂಜಿಗೆ ಒಳಗಾದ ಎಲ್ಲ ಮಕ್ಕಳಿಗೆ ಬಟ್ಟೆ, ದವಸ ಧಾನ್ಯ, ಪೌಷ್ಟಿಕ ಆಹಾರ ಮತ್ತು ವೈದ್ಯಕೀಯ ಕಿಟ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ಶಾಸಕ ಶಿರಾಜ್ ಶೇಖ್ ಮಾತನಾಡಿ, ಈ ರೀತಿ ಸಾಮೂಹಿಕ ಮುಂಜಿ ಆಯೋಜಿಸುವುದರಿಂದ ಬಡವರಿಗೆ ಆರ್ಥಿಕ ಹೊರೆ ತಪ್ಪುತ್ತದೆ ಎಂದರು.‘ಇಸ್ಲಾಂ ಧರ್ಮದ ಎಲ್ಲ ಆಚರಣೆಗಳಿಗೆ ವೈಜ್ಞಾನಿಕ ಹಿನ್ನೆಲೆ ಇದೆ. ಮುಸ್ಲಿಂ ಜನಾಂಗದಲ್ಲಿ ಹುಟ್ಟಿದ ಮಕ್ಕಳು ಸುನ್ನತಿಯ ಬಳಿಕವೇ ಧಾರ್ಮಿಕ ಸಂಸ್ಕಾರ ಪಡೆಯುತ್ತಾರೆ. ಮುಂಜಿಯು ಬರೀ ಮುಸ್ಲಿಮರಿಗೆ ಸೀಮಿತ ಎಂಬುದು ತಪ್ಪು ತಿಳಿವಳಿಕೆ. ವೈಜ್ಞಾನಿಕ ಅರಿವು ಹೊಂದಿರುವ ಇತರೆ ಜನಾಂಗದವರೂ ಮುಂಜಿ ಮಾಡಿಸಿಕೊಳ್ಳುತ್ತಾರೆ’ ಎಂದು ಹೇಳಿದರು.

ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಮಾತನಾಡಿ, ಹಿಂದೂ ಮುಸ್ಲಿಮರ ಆಚರಣೆಗಳು ಭಿನ್ನವಾಗಿದ್ದರೂ ಅವುಗಳ ಉದ್ದೇಶ ಒಂದೇ ಆಗಿವೆ. ಬಡವರ ಅನುಕೂಲಕ್ಕಾಗಿ ಮುಂಜಿ ಕಾರ್ಯಕ್ರಮ ಆಯೋಜಿಸಿದಂತೆ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಿ ಎಂದರು.

ADVERTISEMENT

ಲಕ್ಷ್ಮಿಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಪಿ.ಟಿ.ಭರತ್ ಮಾತನಾಡಿ, ಪ್ರಾಚೀನ ಕಾಲದಿಂದ ನಡೆಸಿಕೊಂಡು ಬಂದಿರುವ ಆಚರಣೆಗಳೆಲ್ಲವೂ ಕೂಡ ವೈಜ್ಞಾನಿಕವಾಗಿವೆ ಎಂದರು. ಸಹರಾ ಬ್ಯಾಂಕ್ ಅಧ್ಯಕ್ಷ ವಾರದ ಗೌಸ್ ಮೊಹಿದ್ದೀನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶಿವಯೋಗಿ, ಮುಖಂಡರಾದ  ಅಟವಾಳಗಿ ಕೊಟ್ರೇಶ, ಸಿ.ಚಾಂದಸಾಹೇಬ್, ಕೆ.ಗೌಸ್‌ ಮೊಹಿದ್ದೀನ್,  ಚಂದ್ರನಾಯ್ಕ, ಪುರಸಭೆ ಸದಸ್ಯ ಖಾಜಾಹುಸೇನ್, ಮರ್ದಾನ್‌ ಬೀ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.