ADVERTISEMENT

ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ

ನೀರಾವರಿ ಕಾಲುವೆಗಳಿಗೆ ತುಂಗಭದ್ರಾ ಜಲಾಶಯದಿಂದ ನೀರು ಹರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಜನವರಿ 2017, 10:48 IST
Last Updated 28 ಜನವರಿ 2017, 10:48 IST

ಹೊಸಪೇಟೆ: ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣಗೊಂಡ ರಾಯ, ಬಸವ, ಬೆಲ್ಲ, ಕಾಳಘಟ್ಟ ಮತ್ತು ತುರ್ತಾ ಕಾಲುವೆಗಳಿಗೆ ತುಂಗಭದ್ರಾ ಜಲಾಶಯ ದಿಂದ ನೀರು ಹರಿಸಬೇಕೆಂದು ಒತ್ತಾಯಿಸಿ ಹೊಸಪೇಟೆ ರೈತರ ಸಂಘವು ಶುಕ್ರವಾರ ಕರೆ ಕೊಟ್ಟಿದ್ದ ತಹಶೀಲ್ದಾರ್‌ ಕಚೇರಿ ಮುತ್ತಿಗೆ ಹಿಂಸಾಚಾರಕ್ಕೆ ತಿರುಗಿತು.

ಬೆಳಿಗ್ಗೆ 11ಗಂಟೆ ಸುಮಾರಿಗೆ ನಗರದ ರೈತ ಭವನದಲ್ಲಿ ಸೇರಿದ ನೂರಾರು ರೈತರು ಅಲ್ಲಿಂದ ತಹಶೀ ಲ್ದಾರ್‌ ಕಚೇರಿ ವರೆಗೆ ಬೃಹತ್‌ ಪ್ರತಿ ಭಟನಾ ರ್‍ಯಾಲಿ ನಡೆಸಿದರು.

ಮಾರ್ಗ ದುದ್ದಕ್ಕೂ ಜಿಲ್ಲಾ ಆಡಳಿತ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ದರು. ರಸ್ತೆ ಮಧ್ಯದಲ್ಲಿ ಟೈರ್‌ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಶೀಲ್ದಾರ್‌ ಕಚೇರಿಯ ಮುಖ್ಯದ್ವಾರ ದಿಂದ ಕೆಲ ರೈತರು ಒಳ ಪ್ರವೇಶಿಸಿದರು. ಇನ್ನೊಂದು ಗೇಟ್‌ಗೆ ಪೊಲೀಸರು ಬೀಗ ಜಡಿದು ಬಿಗಿ ಭದ್ರತೆ ಕೈಗೊಂಡಿದ್ದರು. ಆ ಗೇಟ್‌ನ್ನು ತೆರೆಯುವಂತೆ ರೈತರು ಪಟ್ಟು ಹಿಡಿದರು. ಈ ವೇಳೆ ವಾಗ್ವಾದ ನಡೆಯಿತು. ಪೊಲೀಸರು ಜಗದಿದ್ದಾಗ ರೈತರು ಗೇಟ್‌ ಮುರಿದು ಒಳಗೆ ಪ್ರವೇಶಿಸಿದರು.

ಈ ಸಂದರ್ಭದಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಜನರನ್ನು ಚದುರಿಸಿದರು. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ರೈತರು, ತಹಶೀಲ್ದಾರ್‌ ಹಾಗೂ ಉಪನೋಂದಣಾಧಿಕಾರಿ ಕಚೇರಿಯ ಕಿಟಕಿ ಗಾಜುಗಳನ್ನು ಕಲ್ಲು ಗಳಿಂದ ಒಡೆದು ಪುಡಿ ಮಾಡಿದರು. ಬಳಿಕ ಕಚೇರಿಯ ಒಳಗೆ ನುಗ್ಗಿ ಅಲ್ಲಿದ್ದ ವಸ್ತುಗಳನ್ನು ಹಾನಿಗೊಳಿಸಿದರು.

ಕಚೇರಿ ಒಳ ಆವರಣದಲ್ಲಿಯೇ ಠಿಕಾಣಿ ಹೂಡಿ ಧರಣಿ ಮುಂದುವರಿಸಿದರು. ರೈತರ ಪ್ರತಿಭಟನೆ ಬೆಂಬಲಿಸಿ ಸ್ಥಳೀಯ ಶಾಸಕ ಆನಂದ ಸಿಂಗ್‌ ಕೂಡ ಪಾಲ್ಗೊಂಡಿದ್ದರು. ಸಂಜೆ 6ರವರೆಗೆ ಧರಣಿ ನಡೆಯಿತು.

ಬಳಿಕ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರೈತರ ಸಂಘದ ಅಧ್ಯಕ್ಷ ಗೋಸಲ ಭರಮಪ್ಪ, ಜಲಾಶಯ ನಿರ್ಮಾಣವಾದ ದಿನದಿಂದ ವಿಜಯನಗರ ಕಾಲುವೆಗಳಿಗೆ ವರ್ಷದ ಹನ್ನೊಂದು ತಿಂಗಳು ನೀರು ಹರಿಸುತ್ತ ಬರಲಾಗಿದೆ. ಈ ಬಾರಿ ನೀರು ಹರಿಸದೇ ಇರುವುದರಿಂದ ರೈತರು ತೊಂದರೆಗೆ ಒಳಗಾಗಿದ್ದಾರೆ. ನೀರು ಹರಿಸುವವರೆಗೆ ಧರಣಿ ಕೈಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನೀರು ಹರಿಸದಿದ್ದಲ್ಲಿ ಕಬ್ಬು, ಬಾಳೆ ಬೆಳೆಗಾರರು ತೀವ್ರ ಸಮಸ್ಯೆ ಎದುರಿಸಬೇಕಾಗುತ್ತದೆ. ಒಂದುವೇಳೆ ಶುಕ್ರವಾರ ರಾತ್ರಿಯೊಳಗೆ ಕಾಲುವೆಗಳಿಗೆ ನೀರು ಹರಿಸದಿದ್ದಲ್ಲಿ ಜ. 28ರಂದು ಹೊಸಪೇಟೆ ಬಂದ್‌ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರೈತ ಮುಖಂಡರಾದ ಕಿಚಡಿ ಲಕ್ಷ್ಮಣ, ಬಿಸಾಟಿ ಸತ್ಯನಾರಾಯಣ, ಬಿ. ನಾಗರಾಜ, ಬೆಳಗೋಡು ರುದ್ರಪ್ಪ, ಸಿ. ಶಂಶುದ್ದೀನ್‌, ಖಾಜಾ ಹುಸೇನ್‌ ನಿಯಾಜಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.