ADVERTISEMENT

ಹೊಂಡ, ಕೆರೆಯಲ್ಲಿ ನೀರು: ರೈತರ ಹರ್ಷ

​ಪ್ರಜಾವಾಣಿ ವಾರ್ತೆ
Published 16 ಮೇ 2017, 7:11 IST
Last Updated 16 ಮೇ 2017, 7:11 IST

ಕಂಪ್ಲಿ: ಪಟ್ಟಣ ಸೇರಿದಂತೆ ಸುತ್ತಲಿನ ಹಳ್ಳಿಗಳಲ್ಲಿ ಭಾನುವಾರ ತಡ ರಾತ್ರಿ ಸುರಿದ ಮಳೆಯಿಂದ ಅಲ್ಲಲ್ಲಿ ನಿರ್ಮಿಸಿರುವ ಚೆಕ್‌ ಡ್ಯಾಂ, ಕೃಷಿ ಹೊಂಡ, ಸಣ್ಣ ಕೆರೆ, ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹವಾಗಿದೆ.

ಗುಡುಗು, ಮಿಂಚು, ಸಿಡಿಲು ಸಹಿತ ಸುಮಾರು 20.6 ಮಿ.ಮೀ ಮಳೆ ಸುರಿದಿದೆ. ಹದ ಮಳೆಯಾಗಿರುವುದರಿಂದ ರೈತರ ಚಿತ್ತ ಹೊಲದತ್ತನೆಟ್ಟಿದ್ದು, ಕೊಟ್ಟಿಗೆ ಗೊಬ್ಬರವನ್ನು ಟ್ರ್ಯಾಕ್ಟರ್‌, ಬಂಡಿಗಳ ಮೂಲಕ ಸಾಗಿಸುವ ದೃಶ್ಯ  ಸೋಮವಾರ ಕಂಡುಬಂತು.

ಮಳೆ ನೀರು ಸಂಗ್ರಹವಾಗಿರುವುದರಿಂದ ಜಾನುವಾರು, ಸಂಚಾರಿ ಕುರಿಗಾರರಿಗೆ, ಪಕ್ಷಿ ಸಂಕುಲಕ್ಕೆ ಅನುಕೂಲವಾಗಿದೆ. ಇದೇ ವಾರದಲ್ಲಿ ಎರಡು ಬಾರಿ ಮಳೆಯಾಗಿರುವುದರಿಂದ ಬೋರ್‌ವೆಲ್‌ಗಳ ಅಂತರ್ಜಲಮಟ್ಟವೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ರೈತರು ತಿಳಿಸಿದರು.

ADVERTISEMENT

ಮಳೆ ಸುರಿದ ಪರಿಣಾಮ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗಿ ಭಾನುವಾರ ರಾತ್ರಿ ಜನತೆ ತೊಂದರೆ ಅನುಭವಿಸಿದರು. ಸೋಮವಾರ ಮಧ್ಯಾಹ್ನದ ನಂತರ ವಿದ್ಯುತ್‌ ಪೂರೈಕೆಯಾಗಿದೆ.

ಹಾನಿ ಇಲ್ಲ
ಕೂಡ್ಲಿಗಿ:   ತಾಲ್ಲೂಕಿನಾದ್ಯಂತ ಭಾನುವಾರ ತಡ ರಾತ್ರಿಯಿಂದ ಉತ್ತಮ ಮಳೆಯಾಗಿದ್ದು, ಅಲ್ಲಲ್ಲಿ ಹಳ್ಳಗಳು ತುಂಬಿ ಹರಿದಿವೆ. ಹೊಸಹಳ್ಳಿ, ಕಾನಮಡುಗು, ಆಲೂರು, ಪೂಜಾರಹಳ್ಳಿ, ಹುಡೇಂ ಸೇರಿದಂತೆ ಕಾನಹೊಸಹಳ್ಳಿ ಹೋಬಳಿಯಲ್ಲಿ ಉತ್ತಮ ಮಳೆಯಾಗಿದೆ. ಹೊಸಹಳ್ಳಿ ಸುತ್ತ ಮುತ್ತ ಅತಿ ಹೆಚ್ಚು ಮಳೆಯಾಗಿದ್ದು ಹಳ್ಳಗಳು ತುಂಬಿ ಹರಿದಿದ್ದು, ಕೆರೆಯಲ್ಲಿ ಸ್ವಲ್ಪ ನೀರಿ ಬಂದು ನಿಂತಿವೆ.

ಉಳಿದಂತೆ ಕೂಡ್ಲಿಗಿ ಹಾಗೂ ಕೊಟ್ಟೂರು ಹೋಬಳಿಗಳಲ್ಲಿ ಕೆಲವು ಕಡೆ ಸಾಧಾರಣ ಮಳೆಯಾಗಿದ್ದರೆ, ಕೆಲವು ಕಡೆ ಹದ ಮಳೆಯಾಗಿದೆ. ಆದರೆ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ತಹಶೀಲ್ದಾರ್ ಎಲ್. ಕೃಷ್ಣಮೂರ್ತಿ ತಿಳಿಸಿದ್ದಾರೆ.

ಉತ್ತಮ ಮಳೆ
ಕುರುಗೋಡು: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಾನುವಾರ ರಾತ್ರಿ ಉತ್ತಮ ಮಳೆಯಾಗಿದೆ. 38.2 ಎಂ.ಎಂ. ಮಳೆಯಾದ ಬಗ್ಗೆ ಪಟ್ಟಣ ಮಳೆಮಾಪನ ಕೇಂದ್ರದಲ್ಲಿ ದಾಖಲಾಗಿದೆ.

ಎರಡು ದಿನಗಳ ಹಿಂದೆ ಬಂದಿದ್ದ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹಾಗೆಯೇ ಉಳಿದಿತ್ತು. ಪುನಾ ಭಾನುವಾರ ರಾತ್ರಿ ಉತ್ತಮ ಮಳೆಯಾಗಿರುವುದರಿಂದ ಭೂಮಿಯ ತೇವಾಂಶ ಹೆಚ್ಚಾಗಿದೆ. ತಗ್ಗು ಪ್ರದೇಶ ಮತ್ತು ಹೊಲಗದ್ದೆಗಳಲ್ಲಿ ಮಳೆ ನೀರು ನಿಂತಿರುವುದು ಕಂಡುಂಬತು.

ಕೊಟ್ಟೂರಿನಲ್ಲಿ ಭಾರಿ ಮಳೆ
ಕೊಟ್ಟೂರು:  ಪಟ್ಟಣದಲ್ಲಿ ಭಾನುವಾರ ಮಧ್ಯರಾತ್ರಿ ಗುಡುಗು ಸಿಡಿಲಿನಿಂದ ಕೂಡಿದ ಉತ್ತಮ ಮಳೆಯಾಗಿದೆ. ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶಗಳಲ್ಲಿ ಮಳೆಯಾಗಿರುವುದರಿಂದ ಇದುವರೆಗೂ ಬಿಸಿಲಿನ ತಾಪಕ್ಕೆ ತತ್ತರಿಸಿದ್ದ ಜನತೆಗೆ ಈ ಮಳೆ ಸ್ವಲ್ಪ ಮಟ್ಟಿಗೆ ನೆಮ್ಮದಿ ತಂದು ನಿಟ್ಟುಸಿರು ಬಿಡುವಂತಾಗಿದೆ. ಅಲ್ಲದೇ ರೈತರ ಮೊಗದಲ್ಲಿ ಮಂದಹಾಸ ಮೂಡಿ ಬಿತ್ತನೆ ಕಾರ್ಯಕ್ಕೆ ಅಣಿಯಾಗಲು ಹೊಲಗಳನ್ನು ಸಜ್ಜುಗೊಳಿಸುವ ದೃಶ್ಯ ಎಲ್ಲೆಡೆ ಕಂಡುಬರುತ್ತಿದೆ.  

ಜಾನುವಾರು ಬಲಿ
ಸಂಡೂರು: ತಾಲ್ಲೂಕಿನ ವಿವಿದೆಡೆ ಭಾನುವಾರ ಉತ್ತಮ ಮಳೆಯಾಗಿದ್ದು, ಈ ಸಂದರ್ಭದಲ್ಲಿ ಸಿಡಿದ ಸಿಡಿಲಿಗೆ 17 ಜಾನುವಾರುಗಳು ಬಲಿಯಾಗಿವೆ. ಸಿಡಿಲಿಗೆ ಯರ್ರಯ್ಯನಹಳ್ಳಿಯಲ್ಲಿ ಪೂಜಾರ ಸೂರಲಿಂಗಪ್ಪನವರ 14 ಕುರಿಗಳು, ದೇವರ ಬುಡ್ಡೇನಹಳ್ಳಿಯಲ್ಲಿ ಹನುಮಂತಪ್ಪನವರ 2 ಮೇಕೆ ಹಾಗೂ ಧರ್ಮಾಪುರದಲ್ಲಿ ನಾಗಮ್ಮನವರ ಎಮ್ಮೆಯೊಂದು ಮೃತಪಟ್ಟಿದೆ.

ಮಳೆ ವಿವರ : ಸೋಮವಾರ ಸಂಡೂರು ಮಳೆ ಮಾಪನ ಕೇಂದ್ರದಲ್ಲಿ 42.3 ಮಿ.ಮೀ, ಚೋರುನೂರು ಕೇಂದ್ರದಲ್ಲಿ 14.3 ಮಿ.ಮೀ ಹಾಗೂ ಕುರೆಕುಪ್ಪ ಮಳೆ ಮಾಪನ ಕೇಂದ್ರದಲ್ಲಿ 25 ಮಿ.ಮೀ ಮಳೆ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.