ADVERTISEMENT

ಹೊಳಲು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2015, 7:09 IST
Last Updated 7 ಅಕ್ಟೋಬರ್ 2015, 7:09 IST
ವೈದ್ಯರಿಗಾಗಿ ಕಾದು ಕುಳಿತಿರುವ ರೋಗಿಗಳು
ವೈದ್ಯರಿಗಾಗಿ ಕಾದು ಕುಳಿತಿರುವ ರೋಗಿಗಳು   

ಹೂವಿನಹಡಗಲಿ: ತಾಲ್ಲೂಕಿನ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಹೊಳಲು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೇ ಬಡ ರೋಗಿಗಳು ಚಿಕಿತ್ಸೆಗೆ ಪರದಾಡುತ್ತಿದ್ದಾರೆ.

10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಹೊಳಲು, ತಾಲ್ಲೂಕಿನ ದೊಡ್ಡ ಗ್ರಾಮ. ಸುತ್ತಮುತ್ತಲ 29 ಹಳ್ಳಿಗಳ ವ್ಯಾಪ್ತಿ ಹೊಂದಿರುವ ಈ ಆಸ್ಪತ್ರೆಯನ್ನು  ಹೆಚ್ಚೂ ಕಡಿಮೆ ಅರ್ಧ ತಾಲ್ಲೂಕಿನ ಜನತೆ ಅವಲಂಬಿಸಿದೆ. ಅನೇಕ ವರ್ಷಗಳಿಂದ ಒಬ್ಬ ವೈದ್ಯರು ಮಾತ್ರ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಈಚೆಗೆ ಅವರೂ ವರ್ಗವಾಗಿರುವುದ ರಿಂದ ರೋಗಿಗಳಿಗೆ ಚಿಕಿತ್ಸೆ ನೀಡುವವರು ಇಲ್ಲದಂತಾಗಿದೆ. ಕತ್ತೆಬೆನ್ನೂರು ಆಸ್ಪತ್ರೆ ವೈದ್ಯರನ್ನು ವಾರದಲ್ಲಿ ಮೂರು ದಿನ ಇಲ್ಲಿಗೆ ನಿಯೋಜಿಸಿದ್ದರೂ ಅವರು ಬಂದು ಹೋಗುವ ಮಾಹಿತಿ ತಿಳಿಯುವುದಿಲ್ಲ ಎನ್ನುವುದು ಇಲ್ಲಿನ ಜನತೆಯ ದೂರು.

ಆಸ್ಪತ್ರೆಯಲ್ಲಿ ವೈದ್ಯರ ಎರಡು ಹುದ್ದೆ, ಹಿರಿಯ ಪುರುಷ ಹಾಗೂ ಮಹಿಳಾ ಆರೋಗ್ಯ ಸಹಾಯಕಿಯರ ಎರಡು ಹುದ್ದೆ, ಆರೋಗ್ಯ ಶಿಕ್ಷಣಾಧಿಕಾರಿಯ ಒಂದು ಹುದ್ದೆ ಖಾಲಿ ಇದೆ. ಇರುವ ಆರು ಜನ ಕಿರಿಯ ಆರೋಗ್ಯ ಸಹಾಯಕಿಯರು ಸಣ್ಣ ಪುಟ್ಟ ರೋಗಗಳಿಗೆ ಮಾತ್ರ ಚಿಕಿತ್ಸೆ ನೀಡುತ್ತಾರೆ. ವೈದ್ಯರು ಮತ್ತು ನುರಿತ ಸಿಬ್ಬಂದಿ ಇಲ್ಲದ ಕಾರಣ, ಹೆರಿಗೆಗೆ ಬರುವ ಗರ್ಭಿಣಿಯರನ್ನು ಬೇರೆ ಆಸ್ಪತ್ರೆಗೆ ಕಳಿಸಿಕೊಡಲಾಗುತ್ತಿದೆ.

ಊರಲ್ಲಿ ಆಸ್ಪತ್ರೆ ಇದ್ದರೂ ಜನರು ಸಾಮಾನ್ಯ ಕಾಯಿಲೆಗಳ ಚಿಕಿತ್ಸೆಗಾಗಿ ಹರಪನಹಳ್ಳಿ, ದಾವಣಗೆರೆ, ಹಾವೇರಿ, ರಾಣೆಬೆನ್ನೂರು ಆಸ್ಪತ್ರೆಗಳಿಗೆ ಅಲೆಯುವ ಸ್ಥಿತಿ ಇದೆ. ಕೆಲವು ಪ್ರಕರಣಗಳಲ್ಲಿ ತುರ್ತು ಚಿಕಿತ್ಸೆ ಸಿಗದೇ ರೋಗಿಗಳು ಮಾರ್ಗ ಮಧ್ಯೆ ಮೃಪಟ್ಟಿರುವ ನಿದರ್ಶನಗಳಿವೆ.

ಆಸ್ಪತ್ರೆಯಲ್ಲಿ ಸಿಬ್ಬಂದಿ ಸಮಸ್ಯೆ ಒಂದೆಡೆಯಾದರೆ, ಮೂಲ ಸೌಕರ್ಯಗಳ ಕೊರತೆಯೂ ಇದೆ. ರಾತ್ರಿ ವಿದ್ಯುತ್ ಕಡಿತ ಉಂಟಾದಲ್ಲಿ ಪರ್ಯಾಯ ಬೆಳಕಿನ ವ್ಯವಸ್ಥೆ ಇಲ್ಲದೇ ರೋಗಿಗಳು ತೊಂದರೆ ಅನುಭವಿಸುತ್ತಾರೆ.

ಇತ್ತೀಚೆಗೆ ವಿದ್ಯುತ್ ಕಡಿತ ಹೆಚ್ಚಾಗಿರುವುದರಿಂದ ಆಸ್ಪತ್ರೆ ತುಂಬಾ ಕತ್ತಲೆ ಆವರಿಸುತ್ತಿದ್ದು, ವಿಷ ಜಂತುಗಳ ಕಾಟವೂ ಹೆಚ್ಚಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ಪ್ರತಿಭಟನೆಗೂ ಸಿಗದ ಫಲ
ಕಳೆದ ಕೆಲ ದಿನಗಳ ಹಿಂದೆ 11 ವರ್ಷದ ಬಾಲಕನಿಗೆ ಹಾವು ಕಚ್ಚಿ, ಸಕಾಲಕ್ಕೆ ಚಿಕಿತ್ಸೆ ದೊರೆಯದೇ ಮೃತಪಟ್ಟಿದ್ದ.  11 ವರ್ಷದ ಬಾಲಕ ಚಿಕಿತ್ಸೆ ಸಿಗದೇ ಮೃತಪಟ್ಟ ಘಟನೆ ಖಂಡಿಸಿ ಕುಟುಂಬದವರು ಶವದೊಂದಿಗೆ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು. ಪ್ರಕರಣ ಮುಂದಿಟ್ಟುಕೊಂಡು ಗ್ರಾಮಸ್ಥರು ಹೊಳಲು ಬಂದ್‌ ಆಚರಿಸಿ ಜಿಲ್ಲಾಡಳಿತದ ಕಣ್ಣು ತೆರೆಸಿದ್ದರು. ಹಾಲಿ ಸೇವೆಯಲ್ಲಿರುವ ವೈದ್ಯರ ಜತೆ ಇನ್ನೊಬ್ಬ ವೈದ್ಯರನ್ನು ನಿಯೋಜಿಸುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಆಗ ಭರವಸೆ ನೀಡಿದ್ದರು. ಇದೀಗ ಬೇರೊಬ್ಬ  ವೈದ್ಯರನ್ನು ನಿಯೋಜಿಸುವುದಿರಲಿ, ಇದ್ದ ವೈದ್ಯರನ್ನೂ ವರ್ಗ ಮಾಡಿರುವುದು ಗ್ರಾಮಸ್ಥರನ್ನು ಕೆರಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.