ADVERTISEMENT

‘ಮಠಾಧೀಶರಿಗೆ ಜೈ, ಸಾಹಿತಿಗಳಿಗೆ ಬೈ’

ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ.ಅಂಬಣ್ಣ ಕಳವಳ

​ಪ್ರಜಾವಾಣಿ ವಾರ್ತೆ
Published 29 ಜೂನ್ 2015, 10:27 IST
Last Updated 29 ಜೂನ್ 2015, 10:27 IST

ಹೊಸಪೇಟೆ: ‘ಮಠಾಧೀಶರಿಗೆ ಕೋಟಿ ಗಟ್ಟಲೇ ಹಣ ಸುರಿಯುವ ಸರ್ಕಾರ ಸಮಾಜದ ಜೀವ ನಾಡಿಯಾಗಿ ಕೆಲಸ ಮಾಡುವ ಸಾಹಿತಿಗಳ ಕುರಿತು ನಿರ್ಲಕ್ಷ್ಯ ವಹಿಸಿದೆ’ ಎಂದು ಹೊಸಪೇಟೆ ತಾಲ್ಲೂಕು ದ್ವಿತೀಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಬಿ.ಅಂಬಣ್ಣ ಆರೋಪಿಸಿದರು. 

ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ವತಿಯಿಂದ ಹಂಪಿಯ ಮಾಲ್ಯವಂತ ರಘುನಾಥ ದೇವಸ್ಥಾನದಲ್ಲಿ ಭಾನುವಾರ ಆಯೋಜಿಸಿದ್ದ ಹೊಸಪೇಟೆ ತಾಲ್ಲೂಕು ದ್ವಿತೀಯ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು. ‘ಮಠಾಧೀಶರ ಅಧೀನದಲ್ಲಿರುವ ಭಕ್ತರ ಮತ ಬ್ಯಾಂಕ್‌ಗೆ ಕೊಳ್ಳೆ ಹೊಡೆಯುವ ಉದ್ದೇಶದಿಂದ ನೂರಾರು ಕೋಟಿ ವ್ಯಯ ಮಾಡುವ ಸರ್ಕಾರ, ಜನ ಸಾಮಾನ್ಯರು, ಸಮಾಜದ ಕುರಿತು ನಿಜವಾದ ಕಾಳಜಿ ಹೊಂದಿರುವ ಸಾಹಿತಿಗಳ ಆರ್ಥಿಕ, ಸಾಮಾಜಿಕ ಸ್ಥಿತಿಗತಿಯ ಕುರಿತು ಚಿಂತನೆ ನಡೆದಿರುವುದು ವಿಷಾದದ ಸಂಗತಿ. ಸರ್ಕಾರದ ಒಡೆದು ಆಳುವ ನೀತಿಯಿಂದ ಸಾರಸ್ವತ ಲೋಕ ಕುಗ್ಗಿದೆ. ಸಾಹಿತಿಗಳಲ್ಲಿನ ಏಕತೆ ಕೊರತೆಯಿಂದಲೇ ಇಂಥ ಸ್ಥಿತಿ ಎದುರಾಗಿದ್ದು, ಸಾಹಿತಿಗಳು ಒಗ್ಗಟ್ಟಾಗುವವರೆಗೂ ವ್ಯವಸ್ಥೆಯ ಗಮನ ಸೆಳೆಯಲು ಸಾಧ್ಯವಿಲ್ಲ’ ಎಂದರು.

‘ಸಾಹಿತ್ಯ ಕೇವಲ ವಿದ್ಯಾವಂತರ ಜಿಜ್ಞಾಸೆಯ ಸೊತ್ತು ಆಗಬಾರದು. ಪ್ರಪಂಚದ ಮೂಲೆ ಮೂಲೆಗೂ ಸಾಹಿತ್ಯದ ಮಳೆ ಸುರಿಸುವ ಮೂಲಕ ವ್ಯವಸ್ಥೆ ಹಾಗೂ ರಾಜಕಾರಣಿಗಳ ಎದೆ ತಟ್ಟಬೇಕು. ಅಂದಾಗ ಮಾತ್ರ ಸಾಹಿತ್ಯದ ಕುರಿತು ಅಲ್ಪವಾಗಿ ಮಾತನಾಡುವವರ ಬಾಯಿ ಬಂದಾಗುತ್ತದೆ.  ವಿಜಯನಗರ ಸಾಮ್ರಾಜ್ಯದ ಆಡಳಿತದಲ್ಲಿ ಸಾಹಿತ್ಯಕ್ಕೆ ಮೊದಲ ಪ್ರಾಶಸ್ತ್ಯ ಇತ್ತು. ಆದರೆ, ಈಗಿನ ರಾಜಕಾರಣಿಗಳಿಗೆ ತಮ್ಮ ಕುರ್ಚಿಯೇ ಮುಖ್ಯವಾಗಿದ್ದು, ಅಧಿಕಾರದ ದಾಹಕ್ಕಾಗಿ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ’ ಎಂದ ಅವರು, ‘ಅಕ್ಷರಕ್ಕೆ ಎಂದೂ ಸಾವಿಲ್ಲ. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು’ ಎಂದರು.

ಸಮ್ಮೇಳನ ಉದ್ಘಾಟಿಸಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಶಿವಾನಂದ ವಿರಕ್ತಮಠ ಮಾತ ನಾಡಿ, ‘ವಿದ್ವಾಂಸರಿಂದ ರಚನೆಯಾದ ಸಾಹಿತ್ಯ ಕೆಲವೇ ಜನರಿಗೆ ಸೀಮಿತವಾಗಿದೆ. ಇದರಿಂದ ಬಹು ಸಂಖ್ಯಾತರಾಗಿರುವ ಗ್ರಾಮೀಣರಿಗೆ ಸಾಹಿತ್ಯದ ರುಚಿ ಸವಿಯಲು ಈವರೆಗೂ ಸಾಧ್ಯವಾಗುತ್ತಿಲ್ಲ. ನಿತ್ಯ ಬದುಕಿನ ಆಗು–ಹೋಗುಗಳನ್ನು ದಾಖಲಿಸುವ ಮೂಲಕ ಸಾಹಿತ್ಯವನ್ನು ಜನ ಸ್ನೇಹಿಯಾಗುವಂತೆ ಮಾಡಬೇಕು’ ಎಂದು ಹೇಳಿದರು.

‘ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಡಾ.ಅಂಬಣ್ಣ ಅವರ ಸಾಹಿತ್ಯ ನೆಲಮೂಲ ಸಂಸ್ಕೃತಿಯಿಂದ ಕೂಡಿದ್ದು, ನಮ್ಮ ನೆಲ, ಜಲ, ಸಂಪ್ರದಾಯ, ಆಚರಣೆ, ಪದ್ಧತಿ, ವೈದ್ಯಕೀಯ ಸೇವೆ ಕುರಿತ ಅವರ ಜ್ಞಾನ ವಿಶ್ವವಿದ್ಯಾ ಲಯವನ್ನು ಮೀರಿಸುವಷ್ಟಿದೆ’ ಎಂದು ಬಣ್ಣಿಸಿದರು.
ಬುಕ್ಕಸಾಗರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಲ್ಲಿಪುರದ ತಿಮ್ಮಪ್ಪ, ಉಪಾಧ್ಯಕ್ಷೆ ಹನುಮಕ್ಕ, ವೆಂಕಟಾಪುರದ ರೈತ ಸಂಘದ ಅಧ್ಯಕ್ಷ ಎನ್‌.ದುರ್ಗಪ್ಪ, ಮಾಬುಸಾಬ್‌, ಆರ್‌.ಡಿ.ವೀರಣ್ಣ, ಆರ್‌.ಧನಂಜಯ ಮತ್ತಿತರರು ಹಾಜರಿದ್ದರು.

ಕನ್ನಡ ಸಾಹಿತ್ ಪರಿಷತ್ತು ಜಿಲ್ಲಾ ಘಟಕದ ಸಂಚಾಲಕ ಅಬ್ದುಲ್‌ ಹೈ ಸ್ವಾಗತಿಸಿದರು. ಗೌರವ ಕೋಶಾಧ್ಯಕ್ಷ ಡಿ.ನಾಗರಾಜಪ್ರಸಾದ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿರು. ಜಿಲ್ಲಾ ಘಟಕದ ಅಧ್ಯಕ್ಷ ಸಿರಿಗೇರಿ ಯರಿಸ್ವಾಮಿ ಆಶಯ ನುಡಿಗಳನ್ನಾಡಿದರು. ಎಸ್‌.ಎಂ. ನಾಗರಾಜಸ್ವಾಮಿ ನಿರೂಪಿಸಿದರು.

ತಾಲ್ಲೂಕು ಘಟಕವೇ ಇಲ್ಲ!
ಭಾನುವಾರ ನಡೆದ ಹೊಸಪೇಟೆ ತಾಲ್ಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಾಲ್ಲೂಕು ಘಟಕವೇ ಭಾಗವಹಿಸಿಲ್ಲ. ಜಿಲ್ಲಾ ಘಟಕವೇ ಸಮ್ಮೇಳನದ ಆತಿಥ್ಯ ವಹಿಸಿ ಕೈತೊಳೆದುಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ತಾಲ್ಲೂಕಿನ ಸಾಹಿತಿಗಳಿಗಾಗಲಿ, ಕಸಾಪ ಸದಸ್ಯರಿಗಾಗಲಿ ಸಮ್ಮೇಳನದ ಕುರಿತು ಮಾಹಿತಿ ಇಲ್ಲದಿರುವುದರಿಂದ ಕೆಲವೇ ಜನರಿಗೆ ಸೀಮಿತವಾದಂತೆ ಕಂಡು ಬಂದಿತು. ಸಮ್ಮೇಳನದಲ್ಲಿ ಬುಕ್ಕಸಾಗರ ಹಾಗೂ ವೆಂಕಟಾಪುರದ ಗ್ರಾಮ ಪಂಚಾಯ್ತಿ ಜನಪ್ರತಿನಿಧಿಗಳು ಹಾಗೂ ಅವರ ಬೆಂಬಲಿಗರನ್ನು ಹೊರತುಪಡಿಸಿ ಸಾಹಿತ್ಯದ ಬಗ್ಗೆ ಆಸಕ್ತಿ ಇರುವ ಜನರು ಬೆರಳೆಣಿಕೆಯಷ್ಟು ಮಾತ್ರ ಇದ್ದರು.

ಮುಖ್ಯಾಂಶಗಳು
* ಸರ್ಕಾರದಿಂದ ಸಾಹಿತ್ಯ ವರ್ಗದ ನಿರ್ಲಕ್ಷ್ಯ ಆರೋಪ
* ಸಾಹಿತಿಗಳು ಒಗ್ಗೂಡಿದರೆ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯ
* ಸಮ್ಮೇಳನಕ್ಕೆ ಸಾಹಿತ್ಯ ಆಸಕ್ತರ ಕೊರತೆ

ಓದುವವರ ಸಂಖ್ಯೆ ಕಡಿಮೆ ಯಾಗುತ್ತಿದೆ. ಸಾಹಿತ್ಯ ಓದುವ ಹವ್ಯಾಸ ಬೆಳೆಯುವುದು ಅಗತ್ಯವಾಗಿದ್ದು, ಸಮಾಜ ಒಪ್ಪುವ ಸಾಹಿತ್ಯ ರಚನೆಗೆ ಸಾಹಿತಿಗಳು ಮುಂದಾಗಬೇಕು
ಡಾ. ಬಿ.ಅಂಬಣ್ಣ, ಸಮ್ಮೇಳನದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.