ADVERTISEMENT

ಸಾವಯವ ಪದ್ಧತಿಯಲ್ಲಿ ಕಲ್ಲಂಗಡಿ ಬೆಳೆ

ವಿ.ಎಂ.ನಾಗಭೂಷಣ
Published 17 ಜನವರಿ 2018, 7:13 IST
Last Updated 17 ಜನವರಿ 2018, 7:13 IST
ಸಂಡೂರು ತಾಲ್ಲೂಕಿನ ಕುರೆಕುಪ್ಪ ಗ್ರಾಮದಲ್ಲಿ ಸಾವಯವ ಪದ್ಧತಿಯಲ್ಲಿ ಕಲ್ಲಂಗಡಿ ಬೆಳೆ ಬೆಳೆದ ರೈತ ಎಚ್. ಶಿವನಗೌಡ
ಸಂಡೂರು ತಾಲ್ಲೂಕಿನ ಕುರೆಕುಪ್ಪ ಗ್ರಾಮದಲ್ಲಿ ಸಾವಯವ ಪದ್ಧತಿಯಲ್ಲಿ ಕಲ್ಲಂಗಡಿ ಬೆಳೆ ಬೆಳೆದ ರೈತ ಎಚ್. ಶಿವನಗೌಡ   

ಕುರೆಕುಪ್ಪ (ಸಂಡೂರು): ‘ತರಕಾರಿ ಬೆಳೆಗಳ ಕಣಜ’ ಎಂದು ಪ್ರಸಿದ್ಧವಾದ ತಾಲ್ಲೂಕಿನ ಕುರೆಕುಪ್ಪ ಗ್ರಾಮದಲ್ಲಿ ಈಗ ಆ ಸಾಲಿಗೆ ಕಲ್ಲಂಗಡಿ ಬೆಳೆ ಸೇರ್ಪಡೆಯಾಗಿದೆ. ಎಲ್ಲಿ ನೋಡಿದರೂ ಕಾಣುವ ಹೂಕೋಸು, ಟೊಮೆಟೊ, ಬೀಟ್‌ರೂಟ್‌, ಮೂಲಂಗಿ, ಬದನೆ ಬೆಳೆಯ ಜೊತೆಗೆ ಕಲ್ಲಂಗಡಿಯೂ ಕಣ್ಮನ ಸೆಳೆಯಲಿದೆ. ಗ್ರಾಮದ ರೈತ ಎಚ್. ಶಿವನಗೌಡ ಇದೇ ಮೊದಲ ಬಾರಿಗೆ ಐದು ಎಕರೆ ಜಮೀನಿನಲ್ಲಿ ಸಂಪೂರ್ಣವಾಗಿ ಸಾವಯವ ಪದ್ಧತಿಯಲ್ಲಿ ‘ಇಶಾ’ ತಳಿಯ ಕಲ್ಲಂಗಡಿ ಬೆಳೆದಿದ್ದು, 20–25 ದಿನಗಳಲ್ಲಿ ಬೆಳೆ ಕಟಾವಿಗೆ ಬರಲಿದೆ.

60 ದಿನಗಳ ಕಲ್ಲಂಗಡಿ ಬೆಳೆಯಲ್ಲಿ ಬೆಳೆದ ಒಂದೊಂದು ಕಲ್ಲಂಗಡಿ 3ರಿಂದ 5 ಕೆ.ಜಿ. ತೂಗುತ್ತಿದೆ. ಕಟಾವಿಗೆ ಬರುವ ಹೊತ್ತಿಗೆ ಇವುಗಳ ಗಾತ್ರ ಮತ್ತು ತೂಕ ಇನ್ನೂ ಹೆಚ್ಚಲಿದೆ.

ಆಧುನಿಕ ತಂತ್ರಜ್ಞಾನ: ಶಿವನಗೌಡರ ಅವರದು ಆಧುನಿಕ ಹಾಗೂ ಸಾವಯವ ಮಿಳಿತಗೊಂಡ ಕೃಷಿ ಪದ್ಧತಿ. ಹನಿ ನೀರಾವರಿ ಪದ್ಧತಿಯಲ್ಲಿ ಈ ಬೆಳೆಯ ಬೀಜ ನಾಟಿಗೆ ಮುಂಚೆ ಕೊಟ್ಟಿಗೆ ಗೊಬ್ಬರವನ್ನು ಬಳಸಲಾಗಿದೆ. ನಿಯಮಿತವಾಗಿ ಬೆಲ್ಲ, ಮಜ್ಜಿಗೆ, ದ್ವಿದಳ ಧಾನ್ಯದ ಹಿಟ್ಟು, ಬಾಳೆಹಣ್ಣು ಬೆರೆಸಿ ತಯಾರಿಸಿದ ಜೀವಾಮೃತವನ್ನು ನೀಡುತ್ತಿದ್ದಾರೆ.

ADVERTISEMENT

ನೀರು ಬೇಗನೆ ಆವಿಯಾಗದೆ ಬೆಳೆಗಳಿಗೆ ಅಗತ್ಯವಾದ ತೇವಾಂಶವನ್ನು ಉಳಿಸುವ ಸಲುವಾಗಿ ಮಲ್ಚಿಂಗ್‌ ಪದ್ಧತಿಯನ್ನೂ ಅನುಸರಿಸಿದ್ದಾರೆ. ಕೀಟ ಬಾಧೆ ತಡೆಯಲು ಮೋಹಕ ಬಲೆ, ಸ್ಟಿಕರ್‌ಗಳನ್ನು ಅಳವಡಿಸಿದ್ದಾರೆ.

‘ಹನಿ ನೀರಾವರಿ ವ್ಯವಸ್ಥೆ ಅಳವಡಿಸಿಕೊಳ್ಳಲು ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ನೀಡುವಂತೆ 8–10 ಎಕರೆ ಇರುವ ರೈತರಿಗೂ ಸಹಾಯಧನ ನೀಡಬೇಕು.ಮೋಹಕ ಬಲೆ, ಸ್ಟಿಕರ್‌ಗಳನ್ನು ಸಹಾಯಧನ ದರದಲ್ಲಿ ವಿತರಿಸಿದರೆ ಅನುಕೂಲವಾಗುತ್ತದೆ’ ಎಂಬುದು ಶಿವನಗೌಡ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.