ತೆಕ್ಕಲಕೋಟೆ: ಸಮೀಪದ ಬಲಕುಂದಿ, ಮುದೇನೂರು ಗ್ರಾಮದ ಬಳಿಯ ಹಗರಿ ನದಿಯ ಶನೇಶ್ವರ ದೇವಸ್ಥಾನದ ಬಳಿಯ ಹೊಂಡದಲ್ಲಿ ಸಾವಿರಾರು ಮೀನು ಹಾಗೂ ಇತರೆ ಜಲಚರಗಳು ಸಾವಿಗೀಡಾಗಿವೆ.
ಸೋಮವಾರ ನಡೆದ ಜಾತ್ರಾ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಹಗರಿ ನದಿಯಲ್ಲಿನ ನೀರಿನ ಹರಿವಿನ ಪ್ರಮಾಣ ಇಲ್ಲವಾಗಿದೆ. ರೈತರು ಹೊಂಡಗಳಲ್ಲಿ ಅಳಿದುಳಿದ ನೀರನ್ನು ಬಿಡದೆ ಬಳಸುತ್ತಿರುವುದರಿಂದ ಈ ಮೀನುಗಳು ಸತ್ತಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.
ಕೆರೆಯಲ್ಲಿ ಲಕ್ಷಾಂತರ ಮೀನುಗಳಿದ್ದು, ನೀರಿನ ಪ್ರಮಾಣ ಕಡಿಮೆಯಾದಂತೆ ಆಮ್ಲಜನಕದ ಕೊರತೆ ಎದುರಿಸಿ ಸಾಯುತ್ತಿವೆ. ಹೀಗೆ ಮುಂದುವರಿದರೆ ಮೀನುಗಳ ಸಾವಿನ ಪ್ರಮಾಣ ಹೆಚ್ಚಬಹುದು ಎನ್ನುತ್ತಾರೆ ಸ್ಥಳೀಯರು.
ಅಲ್ಲದೆ ಬಲಕುಂದಿ- ಮುದೇನೂರು ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾರ್ಯ ನಡೆದಿರುವುದರಿಂದ ಸೇತುವೆ ನಿರ್ಮಾಣ ಕಾರ್ಯಕ್ಕೆ ಹೆಚ್ಚಿನ ನೀರು ಬಳಕೆಯಾಗುತ್ತಿದ್ದು, ಸುತ್ತಲಿನ ಹೊಂಡಗಳಲ್ಲಿ ನಿಲ್ಲುತ್ತಿದ್ದ ನೀರು ಕಡಿಮೆಯಾಗಿ ಈ ರೀತಿ ಜಲಚರಗಳು ಸಾವಿಗೀಡಾಗುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನದಿ ತೀರದ ಗ್ರಾಮದ ಯುವಕರು ಮತ್ತು ಮಕ್ಕಳು ಜೀವಂತ ಮೀನು ಹಿಡಿದು ಮಾರಾಟ ಮಾಡುತ್ತಿರುವುದರಿಂದ ಸ್ಥಳೀಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದ್ದು, ಸ್ಥಳೀಯ ಗ್ರಾಮ ಪಂಚಾಯಿತಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ದೇವಸ್ಥಾನದ ಅರ್ಚಕ ನಾಗೇಂದ್ರ ಸ್ವಾಮಿ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.