ಸಂಡೂರು: ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಆದರೆ, ಕಾರ್ಮಿಕರಿಗೆ ಅವುಗಳ ಬಗೆಗಿನ ತಿಳಿವಳಿಕೆಯ ಕೊರತೆಯಿಂದ ಪ್ರಯೋಜನ ಸಿಗುತ್ತಿಲ್ಲ.
ಅಸಂಘಟಿತ ಕಾರ್ಮಿಕ ವಲಯದಲ್ಲಿ ಬರುವ ಕಟ್ಟಡ ನಿರ್ಮಾಣ ಕಾರ್ಮಿಕರ ಹೋರಾಟದ ಫಲವಾಗಿ 1996ರಲ್ಲಿ ಸ್ಥಾಪನೆಗೊಂಡ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಅನೇಕ ಸವಲತ್ತು ನೀಡಲಾಗುತ್ತಿದೆ.ಬುನಾದಿ ತೋಡುವವರು, ವಿದ್ಯುದ್ದೀಕರಣ, ಪೈಪ್‍ಲೈನ್, ಪ್ಲಾಸ್ಟರಿಂಗ್, ಟೈಲ್ಸ್, ಒಳಾಂಗಣ ವಿನ್ಯಾಸ ಸೇರಿದಂತೆ ಇತರೆ ಕೆಲಸಗಳಲ್ಲಿ ಕಾರ್ಮಿಕರು ತೊಡಗಿಸಿಕೊಂಡಿದ್ದಾರೆ. ಅಸಂಖ್ಯ ಕಾರ್ಮಿಕರಿದ್ದರೂ ಬಹುತೇಕರು ಕಲ್ಯಾಣ ಮಂಡಳಿಯ ಸದಸ್ಯತ್ವ ಪಡೆದಿಲ್ಲ. ಇದರಿಂದಾಗಿ ಅನೇಕರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.
‘2011ರ ಮುಂಚೆ ಜಿಲ್ಲಾಮಟ್ಟದ ಅಧಿಕಾರಿಗಳೇ ಕಾರ್ಮಿಕರಿಗೆ ಗುರುತಿನ ಚೀಟಿ ನೀಡುತ್ತಿದ್ದರು. 2011 ರಿಂದ ತಾಲ್ಲೂಕಿನಲ್ಲಿಯೇ ಗುರುತಿನ ಚೀಟಿ ನೀಡಲಾಗುತ್ತಿದೆ. 2011ರಿಂದ ತಾಲ್ಲೂಕಿನಲ್ಲಿ 2,500 ಕಟ್ಟಡ ಕಾರ್ಮಿಕರು ಹಾಗೂ ಸುಮಾರು 9,000 ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು ಹೆಸರು ನೋಂದಣಿ ಮಾಡಿಸಿದ್ದಾರೆ’ ಎಂದುಕಾರ್ಮಿಕ ಇಲಾಖೆಯ ಇನ್‌ಸ್ಪೆಕ್ಟರ್ ದಿವಾಕರ್ ತಿಳಿಸಿದರು.
ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸದಸ್ಯರಾಗಲು ಕಟ್ಟಡ ಮಾಲೀಕರು, ಗುತ್ತಿಗೆದಾರರು, ಗುತ್ತಿಗೆದಾರರ ಸಂಘ, ಕಾರ್ಮಿಕ ಸಂಘಟನೆಗಳು ಅಥವಾ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ನೀಡುವ ಉದ್ಯೋಗ ದೃಢೀಕರಣ ಪತ್ರದೊಂದಿಗೆ ಕಾರ್ಮಿಕ ಇಲಾಖೆಗೆ ಅರ್ಜಿ ಸಲ್ಲಿಸಿದರೆ ಅಂತಹವರಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ. ಆದರೆ, ಬಹುತೇಕರಿಗೆ ಅದರ ಬಗ್ಗೆ ಅರಿವಿಲ್ಲ.
‘ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಹೆಸರು ನೋಂದಣಿ ಮಾಡಿಸಿದರೆ ಅನೇಕ ಸೌಕರ್ಯಗಳು ಸಿಗುತ್ತವೆ. ಈ ಕುರಿತು ಕಾರ್ಮಿಕರಲ್ಲಿ ಜಾಗೃತಿ ಮೂಡಿಸಿ, ಎಲ್ಲರೂ ಹೆಸರು ನೋಂದಣಿ ಮಾಡಿಕೊಳ್ಳುವಂತೆ ನೋಡಿಕೊಳ್ಳಬೇಕಿದೆ’ ಎಂದು ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ವಿ.ದೇವಣ್ಣ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.