ADVERTISEMENT

ಬೀದಿ ನಾಯಿಗಳ ದಾಳಿ; 17 ಜನಕ್ಕೆ ಗಾಯ

ಕಂಚಗಾರಪೇಟೆ, ಮಲ್ಪತ್ರ ಓಣಿಯಲ್ಲಿ ದಾಳಿ; ಇಬ್ಬರಿಗೆ ಬಳ್ಳಾರಿ ವಿಮ್ಸ್‌ಗೆ ದಾಖಲು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2018, 8:28 IST
Last Updated 23 ಆಗಸ್ಟ್ 2018, 8:28 IST
ಬೀದಿ ನಾಯಿಗಳ ದಾಳಿಗೆ ಗಾಯಗೊಂಡು ಹೊಸಪೇಟೆಯ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಗುರುವಾರ ಚಿಕಿತ್ಸೆ ಪಡೆದ ಮಕ್ಕಳು–ಪ್ರಜಾವಾಣಿ ಚಿತ್ರ
ಬೀದಿ ನಾಯಿಗಳ ದಾಳಿಗೆ ಗಾಯಗೊಂಡು ಹೊಸಪೇಟೆಯ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಗುರುವಾರ ಚಿಕಿತ್ಸೆ ಪಡೆದ ಮಕ್ಕಳು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ಇಲ್ಲಿನ ಕಂಚಗಾರಪೇಟೆ ಹಾಗೂ ಮಲ್ಪತ್ರ ಓಣಿಯಲ್ಲಿ ಬೀದಿ ನಾಯಿಗಳು ದಾಳಿ ನಡೆಸಿ 12 ಮಕ್ಕಳು ಸೇರಿದಂತೆ ಒಟ್ಟು 17 ಜನರನ್ನು ಗುರುವಾರ ಗಾಯಗೊಳಿಸಿವೆ.

‘ಕಂಚಗಾರಪೇಟೆಯಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಗಾಯಗೊಳಿಸಿವೆ. ಎಲ್ಲರಿಗೂ ಇಂಜೆಕ್ಷನ್‌ ಕೊಟ್ಟಿದ್ದೇವೆ. ಐದು ವರ್ಷದ ಮೊಹಮ್ಮದ್‌ ಸಾಫ್ನಾ ಕೈಗೆ ನಾಯಿ ಕಡಿದಿದ್ದು, ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ವಿಮ್ಸ್‌) ಕಳಿಸಿಕೊಡಲಾಗಿದೆ’ ಎಂದು ಇಲ್ಲಿನ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಭಾಗೀರಥಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹುಚ್ಚು ನಾಯಿ ಕಡಿದಿದೆಯೋ ಅಥವಾ ಬೀದಿಯಲ್ಲಿ ಓಡಾಡುವ ಸಾಮಾನ್ಯ ನಾಯಿಗಳು ಕಚ್ಚಿವೆಯೋ ಗೊತ್ತಾಗಿಲ್ಲ. ಆದರೂ ಎಲ್ಲರಿಗೂ ಇಂಜೆಕ್ಷನ್‌ ಕೊಟ್ಟು, ಪ್ರಾಥಮಿಕ ಚಿಕಿತ್ಸೆ ನೀಡಿದ್ದೇವೆ. ಯಾರಿಗೂ ಯಾವುದೇ ರೀತಿಯ ಅಪಾಯವಿಲ್ಲ’ ಎಂದು ಹೇಳಿದರು.

ADVERTISEMENT

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್‌ ಇಮಾಮ್‌ ನಿಯಾಜಿ ಅವರು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.

‘ನಗರದಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದೆ. ಈ ಕುರಿತು ಈ ಹಿಂದೆ ಅನೇಕ ಸಲ ನಗರಸಭೆಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಭವಿಷ್ಯದಲ್ಲಿ ಇಂತಹ ಘಟನೆಗಳು ಜರುಗದಂತೆ ನೋಡಿಕೊಳ್ಳಬೇಕು ಎಂದು ನಗರಸಭೆಗೆ ಒತ್ತಾಯಿಸಿದ್ದೇವೆ. ದಾಳಿ ನಡೆಸಿರುವ ನಾಯಿಗಳನ್ನು ಸ್ಥಳೀಯರು ಅಲ್ಲಿಂದ ಹೊಡೆದು ಓಡಿಸಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.