ADVERTISEMENT

ಆಧುನಿಕ ಎಪಿಎಂಸಿ ಮಾರುಕಟ್ಟೆ ನಿರ್ಮಾಣ

ಕನಕಪುರದಲ್ಲಿ ಸಚಿವ ಡಿ.ಕೆ ಶಿವಕುಮಾರ್ ಭರವಸೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 6:21 IST
Last Updated 18 ಜನವರಿ 2017, 6:21 IST
ಆಧುನಿಕ ಎಪಿಎಂಸಿ ಮಾರುಕಟ್ಟೆ ನಿರ್ಮಾಣ
ಆಧುನಿಕ ಎಪಿಎಂಸಿ ಮಾರುಕಟ್ಟೆ ನಿರ್ಮಾಣ   

ಕನಕಪುರ:  ನಗರದಲ್ಲಿ ಹಾದು ಹೋಗುವ ಬೈಪಾಸ್‌ ರಸ್ತೆಯಲ್ಲಿ 7 ಎಕರೆ ಭೂಮಿಯನ್ನು ಎ.ಪಿ.ಎಂ.ಸಿ. ಮಾರುಕಟ್ಟೆಗೆ ಖರೀದಿ ಮಾಡಿದ್ದು ಅದರಲ್ಲಿ ಅತ್ಯಾಧುನಿಕ ಮಾದರಿಯ ಎ.ಪಿ.ಎಂ.ಸಿ. ಮಾರುಕಟ್ಟೆಯನ್ನು ಅಭಿವೃದ್ಧಿಗೊಳಿಸುವುದಾಗಿ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ತಾಲ್ಲೂಕಿನ ಸಾತನೂರು ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಎ.ಪಿ.ಎಂ.ಸಿ. ಚುನಾವಣೆಗೆ ಮತ ಚಲಾಯಿಸಿ ಅವರು ಮಾತನಾಡಿದರು.

‘ಜೆ.ಡಿ.ಎಸ್‌. ಪಕ್ಷವು ತಾಲ್ಲೂಕಿನಲ್ಲಿ ಉಳಿಸಿದ್ದ ಗುಡಿಸಲುಗಳು ಇನ್ನೂ ಬಾಕಿ ಉಳಿದಿದ್ದು ಅವುಗಳನ್ನು ತೆಗೆದು ಬಡವರಿಗೆ ಮನೆ ನಿರ್ಮಾಣ ಮಾಡಿಕೊಡುತ್ತಿದ್ದೇವೆ. ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೂಕ್ತ  ಜಾಗವನ್ನು ನೀಡದೆ ಅಭಿವೃದ್ಧಿ ಕಾಣದೆ ಅತಂತ್ರ ಸ್ಥಿತಿಯಲ್ಲಿತ್ತು, ಅದನ್ನು ಅಭಿವೃದ್ಧಿಗೊಳಿಸಲು ಜೆ.ಡಿ.ಎಸ್‌.ನವರು ಬಿಡುತ್ತಿರಲಿಲ್ಲ’ ಎಂದು ಅವರು  ಆರೋಪಿಸಿದರು.

‘ನಾವು ಮಾಡುತ್ತಿರುವ ಅಭಿವೃದ್ಧಿ ಕೆಲಸಗಳಿಂದ ತಾಲ್ಲೂಕಿನ ಜನತೆ ಮತ್ತು ರೈತರು ನಮ್ಮ ಮೇಲೆ ನಂಬಿಕೆಯಿಟ್ಟಿದ್ದಾರೆ. ಈ  ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳನ್ನು ತಾಲ್ಲೂಕಿನ ಜನತೆ ಗೆಲ್ಲಿಸಲಿದ್ದಾರೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಬಿ.ಎಂ.ಐ.ಸಿ. ಅಧ್ಯಕ್ಷ ಎಚ್‌.ಕೆ. ಶ್ರೀಕಂಠು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಹದೇವಯ್ಯ, ಗ್ರಾಮ ವಿದ್ಯಾ ಪ್ರಚಾರಕ ಸಂಘದ ಕಾರ್ಯದರ್ಶಿ ಸಿ.ರಮೇಶ್‌, ಟಿ.ಎ.ಪಿ.ಸಿ.ಎಂ.ಎಸ್‌. ಮಾಜಿ ಅಧ್ಯಕ್ಷ ಎಸ್‌.ಎಸ್‌.ಶಂಕರ್‌, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್‌.ಜೆ.ನಾಗರಾಜು, ಸದಸ್ಯ ಮಂಜು, ಮುಖಂಡರಾದ ನಾಗರಾಜು, ವ್ಯಾಸಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.