ADVERTISEMENT

ಆಶ್ರಯ ನಿವೇಶನಕ್ಕೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಮೇ 2017, 10:30 IST
Last Updated 24 ಮೇ 2017, 10:30 IST

ದೊಡ್ಡಬಳ್ಳಾಪುರ: ಆಶ್ರಯ ಸಮಿತಿಯಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ಜನಪರ ಹೋರಾಟಗಳ ಒಕ್ಕೂಟ ಮತ್ತು ಕರ್ನಾಟಕ ಜನಪರ ಸೇವಾ ಸಮಿತಿ ನೇತೃತ್ವದಲ್ಲಿ ನಗರಸಭೆ ಮುಂಭಾಗ ಮಂಗಳವಾರ ಪ್ರತಿಭಟನಾ ಧರಣಿ ನಡೆಸಲಾಯಿತು.

ಆಶ್ರಯ ಫಲಾನುಭವಿಗಳಿಗೆ ನಿವೇಶನ ನೀಡುವಂತೆ ಮೇಲಧಿಕಾರಿಗಳಿಂದ ಆದೇಶವಾಗಿದ್ದರೂ, ಆಶ್ರಯ ಸಮಿತಿ ಹಾಗೂ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ದೂರಲಾಯಿತು.

ಒಕ್ಕೂಟದ ಜನಪರ ಹೋರಾಟಗಳ ಅಧ್ಯಕ್ಷ ಜಿ. ನಂಜುಂಡಯ್ಯ, ಉಪಾಧ್ಯಕ್ಷ ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿ ಸಿ.ಆರ್. ಚೌಡಪ್ಪ, ಬಡವರಿಗೆ ಬಹುಮಹಡಿ ಕಟ್ಟಡಗಳು ಬೇಡ. ಆಶ್ರಯ ಫಲಾನುಭವಿಗಳಿಗೆ ಪ್ರತ್ಯೇಕ ನಿವೇಶನಗಳನ್ನು ನೀಡಬೇಕು. ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಸಂಘಟನೆಯ ಪದಾಧಿಕಾರಿಗಳು 2007 ರಿಂದ ವಿವಿಧ ಹಂತಗಳಲ್ಲಿ ಹೋರಾಟಗಳನ್ನು ರೂಪಿಸಿ 1,292 ಜನ ವಸತಿ ರಹಿತರ ಪಟ್ಟಿ ತಯಾರಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು ಎಂದರು.

ADVERTISEMENT

ಅದರಂತೆ ಸರ್ಕಾರ ಕಸಬಾ ಹೋಬಳಿಯ ರೋಜಿಪುರ ಸರ್ವೇ ನಂ 27ರಲ್ಲಿ 3 ಎಕರೆ ಜಮೀನು ಮಂಜೂರು ಮಾಡಿದ್ದು, ಈಗ ಅಧಿಕಾರಿಗಳು ಮೂರು ಅಂತಸ್ತಿನ ಮಹಡಿ ಕಟ್ಟಿ ಅದನ್ನು ಫಲಾನುಭವಿಗಳಿಗೆ ಹಂಚುತ್ತೇವೆ ಎಂಬ ಹೇಳಿಕೆ ನೀಡುತ್ತಿದ್ದಾರೆ. ಪ್ರತಿ ಫಲಾನುಭವಿಗೆ ನಿವೇಶನಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ಆಶ್ರಯ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅನೇಕ ಗೊಂದಲಗಳಿವೆ. ಸ್ವಹಿತಾಸಕ್ತಿ ಮತ್ತು ರಾಜಕಾರಣ ಇಲ್ಲಿ ಕೆಲಸ ಮಾಡುತ್ತಿದ್ದು, ನೈಜ ಬಡವರನ್ನು ಗುರುತಿಸುವ ಕೆಲಸ ಆಗುತ್ತಿಲ್ಲ. ಪೌರಾಯುಕ್ತರು ಸರ್ಕಾರದ ಆದೇಶವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧರಣಿ ಸ್ಥಳಕ್ಕೆ ನಗರಸಭೆ ಆಯುಕ್ತ ಡಾ.ಪಿ.ಬಿಳಿಕೆಂಚಪ್ಪ ಮತ್ತು ಅಧ್ಯಕ್ಷ ಕೆ.ಬಿ. ಮುದ್ದಪ್ಪ ಬಂದು ಸಂಧಾನ ಸಭೆ ನಡೆಸಿದಾಗ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.
ಪೌರಾಯಕ್ತ ಡಾ.ಪಿ.ಬಿಳಿಕೆಂಚಪ್ಪ ಮಾತನಾಡಿ, ಸರ್ಕಾರಿ ಆದೇಶದಂತೆ ಪ್ರತ್ಯೇಕ ನಿವೇಶನಗಳನ್ನು ಹಂಚುವಂತಿಲ್ಲ. 1:3 ಅನುಕ್ರಮದಂತೆ ಮೂರು ಅಂತಸ್ತಿನ ಮನೆಗಳನ್ನು ಕಟ್ಟಿಕೊಡಬೇಕು ಎಂಬ ಆದೇಶವಿದೆ.

ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ರವಾನಿಸಲಾಗುವುದು. ಸರ್ಕಾರದ ಆದೇಶ ಬಂದ ನಂತರ ಮುಂದಿನ ಆದೇಶದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಆಶ್ರಯ ಫಲಾನುಭವಿಗಳು ಮತ್ತಿತರರು  ಭಾಗವಹಿಸಿದ್ದರು.

* *

ವಸತಿ ಸಂಕೀರ್ಣಗಳನ್ನು ಕಟ್ಟಿ ಯಾರೊಬ್ಬರಿಗೂ ಭೂಮಿಯ ಒಡೆತನ ನೀಡದಂತೆ ಮಾಡುವ ಬಂಡವಾಳಶಾಹಿ ಧೋರಣೆಯನ್ನು ಆಶ್ರಯ ಸಮಿತಿ ಮತ್ತು ಸರ್ಕಾರ ಕೈಬಿಡಬೇಕು
ವಿವಿಧ ಗಣ್ಯರು, ಹೋರಾಟ ಸಮಿತಿ ಪದಾಧಿಕಾರಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.