ADVERTISEMENT

ಎನ್ನೆಸ್ಸೆಸ್‌ ಶಿಬಿರದಲ್ಲಿ ಕಲಿತದ್ದನ್ನು ಅನುಸರಿಸಿ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಶಿಬಿರದ ಸಮಾರೋಪ ಸಮಾರಂಭ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2017, 8:14 IST
Last Updated 25 ಮಾರ್ಚ್ 2017, 8:14 IST

ದೊಡ್ಡಬಳ್ಳಾಪುರ: ಎನ್.ಎಸ್.ಎಸ್ ಶಿಬಿರದಲ್ಲಿ ಕಲಿತ ಸೇವಾ ಕಾರ್ಯಗಳನ್ನು ನಮ್ಮ ಸುತ್ತಲಿನ  ಪರಿಸರದಲ್ಲಿ ಪಾಲಿಸಿದಾಗ ಮಾತ್ರ ಶಿಬಿರದಲ್ಲಿ ಕಲಿತದ್ದು ಸಾರ್ಥಕವಾಗುತ್ತದೆ. ನಾಯಕತ್ವ ಎಂದರೆ ನಮ್ಮನ್ನು ನಾವು ಮೊದಲು ತೊಡಗಿಸಿಕೊಳ್ಳುವುದು ಎನ್ನುವುದನ್ನು ಅರಿಯಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ.ಜಿ. ಚಂದ್ರಶೇಖರಯ್ಯ ಹೇಳಿದರು.

ತಾಲ್ಲೂಕಿನ ದಡಘಟ್ಟುಮಡುಗು ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಆಯೋಜಿಸಿದ್ದ ಎನ್.ಎಸ್.ಎಸ್ ವಿಶೇಷ ಸೇವಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.

ಇಂದು ಮನುಷ್ಯ ಪ್ರಕೃತಿಯನ್ನು ಸಂರಕ್ಷಿಸಿಕೊಳ್ಳುವಲ್ಲಿ ವಿಫಲನಾಗುತ್ತಿದ್ದು, ಪ್ರಾಣಿಗಳಿಗಿರುವ ಮನಸ್ಥಿತಿಯೂ ಇಲ್ಲದಂತಾಗಿದೆ. ಉದ್ಯೋಗ ಎನ್ನುವುದು ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳುವುದಕ್ಕಾಗಿ. ಇದರಲ್ಲಿ ಯಾವುದೇ ಮೇಲು ಕೀಳಿಲ್ಲ. ಗ್ರಾಮೀಣರು ನಗರದ ಕಡೆ ಮುಖ ಮಾಡುವುದು ಬಿಟ್ಟು, ಹೈನುಗಾರಿಕೆ, ಪಶುಸಂಗೋಪನೆ ಮೊದಲಾದ ಉಪಕಸುಬು ಮಾಡಿಕೊಳ್ಳಬೇಕಿದೆ ಎಂದರು.

ಪ್ರಾಂಶುಪಾಲ ಪ್ರೊ.ಎಸ್.ಪಿ.ರಾಜಣ್ಣ ಮಾತನಾಡಿ, ಯುವಜನರ ಬೌದ್ಧಿಕ ವಿಕಾಸಕ್ಕೆ ಮತ್ತು ಶ್ರಮ ಸಂಸ್ಕೃತಿ ಮೌಲ್ಯವನ್ನು ಅರಿವುಗೊಳಿಸಿಕೊಳ್ಳಲು ಇಂಥ ಶಿಬಿರಗಳು ಸಹಕಾರಿಯಾಗುತ್ತವೆ. ಶಿಬಿರದಲ್ಲಿ ವಿದ್ಯಾರ್ಥಿಗಳು ಇರುವ ಅಲ್ಪ ಅವಧಿಯಲ್ಲಿಯೇ ಗಮನಾರ್ಹ ಸಾಧನೆ ಮಾಡಿರುವುದು ಅಭಿನಂದನೀಯ ಎಂದರು.

ಶಿಬಿರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊಂಡರು. ಶಿಬಿರದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಮ್ಮ ಅನಿಲ್‌ನಾರಾಯಣ್, ಮುಖಂಡರಾದ ಪುಟ್ಟಣ್ಣ, ಜಯಣ್ಣ, ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯ ಡಿ.ಶ್ರೀಕಾಂತ, ಶಿಬಿರಾಧಿಕಾರಿಗಳಾದ ಶ್ರೀನಿವಾಸ ಜಿ.ಪ್ರಕಾಶ, ಸುದರ್ಶನ್ ಕುಮಾರ್ ಭಾಗವಹಿಸಿದ್ದರು.

ಶಿಬಿರದ ಕಾರ್ಯಕ್ರಮಗಳು: ಶಾಸಕ ವೆಂಕಟರಮಣಯ್ಯ ಗಿಡಗಳನ್ನು ನೆಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಸಂವಿಧಾನ ಮತ್ತು ಗ್ರಾಮ ಸ್ವರಾಜ್ಯ ಎಂಬ ವಿಷಯದ ಬಗ್ಗೆ ದಯಾನಂದಗೌಡ ಮಾತನಾಡಿದರು. ಗ್ರಾಮೀಣ ಮಹಿಳೆಯರ ಆರೋಗ್ಯ ಮತ್ತು ಅಪೌಷ್ಟಿಕತೆ ಸಮಸ್ಯೆ ವಿಷಯದ ಬಗ್ಗೆ ರಮೇಶ್ ಮಾತನಾಡಿದರು.

ಕೆರೆ, ಬಾವಿ ಮತ್ತು ನದಿಗಳ ಪುನಶ್ಚೇತನ ವಿಚಾರಗಳ ಬಗ್ಗೆ ಜನಾರ್ದನ ಕೆಸರಗದ್ದೆ ಮಾತನಾಡಿ, ನೀರಿನ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಇಡೀ ಭೂಮಿಯೇ ಮರುಭೂಮಿಯಾಗುತ್ತದೆ. ನೀರಿನ ಮಹತ್ವವನ್ನು ಎಲ್ಲರೂ ಗಂಭೀರವಾಗಿ ಅರಿಯಬೇಕು ಎಂದರು.

ಜನಪರ ಯೋಜನೆಗಳ ಅನುಷ್ಠಾನ, ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ಮಾತನಾಡಿದ ವೆಂಕಟೇಶ್, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಗೊಳ್ಳಲು ಮಾಹಿತಿ ಹಕ್ಕು ಕಾಯ್ದೆ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ದಿನನಿತ್ಯದ ಚರ್ಚೆಯಲ್ಲಿ ಸಿದ್ದರಾಮಯ್ಯ.ಡಿ.ಪಿ, ರವೀಂದ್ರ, ನರೇಂದ್ರ ಕುಮಾರ್, ದೇವರಾಜು, ಕೆಂಪರಾಜು, ಬಾಲಾನಾಯಕ್, ಸಿದ್ದರಾಮರಾಜು, ಶ್ರೀನಿವಾಸಯ್ಯ, ರಾಜೇಶ್, ಅಮರನಾರಾಯಣಸ್ವಾಮಿ, ಸದಾಶಿವರಾಮಚಂದ್ರಗೌಡ, ಪಾಪಣ್ಣ, ಸತೀಶ್, ಸಂದ್ಯಾರಾಣಿ, ಶ್ರೀಕಾಂತ್, ಸುಷ್ಮ, ಅಂಜುಳ ಶಿಬಿರಾಧಿಕಾರಿಗಳಾದ ಶ್ರೀನಿವಾಸ ಜಿ, ಪ್ರಕಾಶ, ಸುದರ್ಶನ್ ಕುಮಾರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.