ADVERTISEMENT

ಒಬ್ಬ ವಿದ್ಯಾರ್ಥಿಗೆ ಒಂದು ಸರ್ಕಾರಿ ಶಾಲೆ!

​ಪ್ರಜಾವಾಣಿ ವಾರ್ತೆ
Published 20 ಮೇ 2017, 5:25 IST
Last Updated 20 ಮೇ 2017, 5:25 IST
ದೊಡ್ಡಬಳ್ಳಾಪುರದಲ್ಲಿ ಸರ್ಕಾರಿ ಶಾಲೆಯೊಂದರ ದಾಖಲಾತಿ ಪ್ರಚಾರಕ್ಕಾಗಿ ವಾದ್ಯಗೋಷ್ಠಿಯೊಂದಿಗೆ ಪ್ರಚಾರ ನಡೆಸುತ್ತಿರುವ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು
ದೊಡ್ಡಬಳ್ಳಾಪುರದಲ್ಲಿ ಸರ್ಕಾರಿ ಶಾಲೆಯೊಂದರ ದಾಖಲಾತಿ ಪ್ರಚಾರಕ್ಕಾಗಿ ವಾದ್ಯಗೋಷ್ಠಿಯೊಂದಿಗೆ ಪ್ರಚಾರ ನಡೆಸುತ್ತಿರುವ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು   

ದೊಡ್ಡಬಳ್ಳಾಪುರ: ಈ ಊರಿನ ಶಾಲೆಯಲ್ಲಿ ಇರುವುದೇ ಒಬ್ಬ ವಿದ್ಯಾರ್ಥಿ. ಜತೆಗೆ ಒಬ್ಬರೇ ಶಿಕ್ಷಕ. ವಿದ್ಯಾರ್ಥಿ ಬರದಿದ್ದರೆ ಶಾಲೆಗೇ ರಜೆ. ಸರ್ಕಾರ ಕಡಿಮೆ ವಿದ್ಯಾರ್ಥಿಗಳಿರುವ ಸರ್ಕಾರಿ ಶಾಲೆಯನ್ನು ಮುಚ್ಚಬಾರದೆಂಬ ನಿಯಮ ಮಾಡಿರುವುದರಿಂದ ಈ ಶಾಲೆಯನ್ನು ಹೇಗಾದರೂ ಮಾಡಿ ಮುಂದುವರಿಸಲು ಕಸರತ್ತು ನಡೆದಿದೆ.

ತಾಲ್ಲೂಕಿನ ಮಧುರೆ ಹೋಬಳಿ ಹೊನ್ನಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಾದೇವಿಪುರದ ಕಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿಯಲ್ಲಿ ಒಬ್ಬಳೇ  ವಿದ್ಯಾರ್ಥಿನಿ ಇದ್ದಾಳೆ. ಈಕೆ 5ನೇ ತರಗತಿಗೆ ಅದೇ ಶಾಲೆಯಲ್ಲಿ ಓದಲು ಬಯಸಿದರೆ ಶಾಲೆ ಉಳಿಯುತ್ತದೆ. ಇಲ್ಲದಿದ್ದರೆ ಶಾಲೆ ಮುಚ್ಚಬೇಕಾಗುತ್ತದೆ. ಹೊಸ ವಿದ್ಯಾರ್ಥಿಗಳ ದಾಖಲಾತಿಯೂ ಆಗಿಲ್ಲ.

ತಾಲ್ಲೂಕಿನ  ದೊಡ್ಡಬೆಳವಂಗಲ ಹೋಬಳಿ ಸಕ್ಕರೆಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಸಂಕರಸನಹಳ್ಳಿ ಶಾಲೆಯಲ್ಲೂ 3ನೇ ತರಗತಿಯಲ್ಲಿ ಒಬ್ಬನೇ ವಿದ್ಯಾರ್ಥಿ ಇದ್ದಾನೆ. ಮಧುರೆ ಹೋಬಳಿಯ ಕುಂಟರಕುಂಟೆ ಪಾಳ್ಯ, ಗೂಳ್ಯದಲ್ಲಿಯೂ ಒಬ್ಬನೇ ವಿದ್ಯಾರ್ಥಿ ಇರುವ ಶಾಲೆಗಳಿವೆ.  ಅತ್ತ ಮುಚ್ಚಲು ಆಗದೆ, ಇತ್ತ ತೆರೆಯದಿರಲೂ ಆಗದೆ ಅವು ತೂಗುಯ್ಯಾಲೆಯಲ್ಲಿವೆ.

ADVERTISEMENT

2016–17ನೇ ಸಾಲಿನ ಅಂಕಿ- ಅಂಶದಂತೆ ಸರ್ಕಾರಿ, ಖಾಸಗಿ, ಅನುದಾನಿತ ಸೇರಿದಂತೆ ಎಲ್ಲ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ  21,993 ವಿದ್ಯಾರ್ಥಿಗಳು, ಹಿರಿಯ ಪ್ರಾಥಮಿಕ ಶಾಲೆಯಲ್ಲಿ (6 ರಿಂದ 8) 9,092 ಹಾಗೂ ಪ್ರೌಢ ಶಾಲೆಗಳಲ್ಲಿ  11,264 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ತಾಲ್ಲೂಕಿನಲ್ಲಿ 1 ರಿಂದ 10 ರವರೆಗೆ ಒಟ್ಟು 42,349 ವಿದ್ಯಾರ್ಥಿಗಳು ದಾಖಲಾಗಿದ್ದರು. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ದಾಖಲಾತಿಯ ಅಂಕಿ ಅಂಶಗಳಂತೆ  ಒಂದು ವರ್ಷಕ್ಕೆ ಸರಾಸರಿ 47 ಮಂದಿ ದಾಖಲಾದರೆ, ಖಾಸಗಿ ಶಾಲೆಗಳಲ್ಲಿ 320 ವಿದ್ಯಾರ್ಥಿಗಳು ದಾಖಲಾಗುತ್ತಿದ್ದಾರೆ. ಆದರೆ ಪ್ರೌಢ ಶಾಲೆಗಳಲ್ಲಿ ಮಾತ್ರ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಹೆಚ್ಚಿನ ದಾಖಲಾತಿಯಾಗಿವೆ.

ಖಾಸಗಿ ಪ್ರಾಥಮಿಕ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ದಾಖಲಾತಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ದಾಖಲಾತಿ ವರ್ವದಿಂದ ವರ್ಷಕ್ಕೆ ಕುಸಿಯುತ್ತಲೇ ಇದೆ. 

ಸರ್ಕಾರಿ ಶಾಲೆ ಬಗ್ಗೆ ಅಸಡ್ಡೆ ಏಕೆ ?: ಯಾವುದೇ ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಸರ್ಕಾರ ಘೋಷಿಸಿರುವುದರಿಂದ ಕಡಿಮೆ ದಾಖಲಾತಿ ಇರುವ ಶಾಲೆಗಳಿಗೂ ಸದ್ಯಕ್ಕೆ ಯಾವುದೇ ಆತಂಕವಿಲ್ಲ. ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 430 ವಿದ್ಯಾರ್ಥಿಗಳಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಇರುವ ಸೌಲಭ್ಯಗಳ ಕುರಿತು ಏಪ್ರಿಲ್, ಮೇ ತಿಂಗಳಲ್ಲಿಯೇ ಪ್ರಚಾರ ಕೈಗೊಂಡು ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಹಲವಾರು ಸೌಲಭ್ಯಗಳನ್ನು ನೀಡಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಂದ ಪ್ರಚಾರ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಪೋಷಕರು ಗಮನ ಹರಿಸಬೇಕು ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ.

ಇಂಗ್ಲಿಷ್‌ ಇಲ್ಲ: ಸರ್ಕಾರಿ ಶಾಲೆಗಳಲ್ಲಿ ಇರುವ ಸೌಲಭ್ಯಗಳ ಕುರಿತು ಏಪ್ರಿಲ್, ಮೇ ತಿಂಗಳಲ್ಲಿಯೇ ಪ್ರಚಾರ ಕೈಗೊಳ್ಳಲಾಗುತ್ತಿದೆ. ಆದರೂ ವಿದ್ಯಾರ್ಥಿಗಳು ಬರುತ್ತಿಲ್ಲ. ಈ ಕುರಿತು ಮಧ್ಯಮ ವರ್ಗದ ಪೋಷಕರನ್ನು ಕೇಳಿದರೆ, ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುವುದಿಲ್ಲ. ಮೂಲ ಸೌಕರ್ಯ ಇಲ್ಲ. ಸರ್ಕಾರಿ ಶಾಲೆಗೆ ಕಳಿಸುತ್ತಿದ್ದೇವೆಂದು ಹೇಳಿಕೊಳ್ಳುವುದು ಘನತೆಗೆ ಕಡಿಮೆ ಎನ್ನುತ್ತಾರೆ. ಇದರಿಂದ ಸರ್ಕಾರಿ ಶಾಲೆಗಳು ಬಡವರಿಗಷ್ಟೇ ಸೀಮಿತ ಎಂಬಂತಾಗಿದೆ.

ಆಂಗ್ಲ ಮಾಧ್ಯಮದತ್ತ ಒಲವು

ಶಾಲೆಗಳ ದಾಖಲಾತಿಗಳಲ್ಲಿ ಆಂಗ್ಲ ಮಾಧ್ಯಮ ಹಾಗೂ ಕೇಂದ್ರೀಯ ಪಠ್ಯಕ್ರಮಗಳಿಗೆ ಪೋಷಕರ ಒಲವು ಹೆಚ್ಚಾಗಿದೆ. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆ ಆಗುತ್ತಿದೆ. 2015–16ನೇ ಸಾಲಿನಲ್ಲಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ  ಇದ್ದ 10,830 ವಿದ್ಯಾರ್ಥಿಗಳ ಸಂಖ್ಯೆ  2016–17ನೇ ಸಾಲಿನಲ್ಲಿ 10,287 ಕ್ಕೆ ಕುಸಿದಿದೆ.

ಶಾಲೆ ಅಂಗಡಿ ಆಗದಿರಲಿ

ಶಾಲೆಗಳಲ್ಲಿ ನೋಟ್ ಪುಸ್ತಕ ಮೊದಲುಗೊಂಡು ಪರಿಕರಗಳನ್ನು ಮಾರಾಟ ಮಾಡುವುದಕ್ಕೆ ಸರ್ಕಾರ ನಿರ್ಬಂಧ ಹಾಕಿದ್ದರೂ ಶಾಲೆಗಳಲ್ಲಿ ಮಾರಾಟ ನಡೆಯುತ್ತಿದೆ ಎಂದು ಪೋಷಕರು ಹೇಳಿದ್ದಾರೆ.

ಈ ಬಗ್ಗೆ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು. ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಭಾಷೆ ಕಲಿಕೆ ಆರಂಭಿಸಿ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕಿದೆ ಎನ್ನುವುದು ಪೋಷಕರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.