ADVERTISEMENT

ಕೂಲಿ ಇಲ್ಲದೆ ಖಾಲಿ ಕುಳಿತ ಕಾರ್ಮಿಕರು

ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 10:11 IST
Last Updated 12 ಜನವರಿ 2017, 10:11 IST
ವಿಜಯಪುರ: ಬೆಂ.ಗ್ರಾ. ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಕೃಷಿ ಕೂಲಿ ಕಾರ್ಮಿಕರು ಡಿಸೆಂಬರ್, ಜನವರಿ ತಿಂಗಳಿನಲ್ಲಿ ಬಿಡುವಿಲ್ಲದಂತೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಆದರೆ ಈ ಬಾರಿ ಬರದ ಪರಿಣಾಮ ಕೃಷಿ ಕಾರ್ಮಿಕರು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ.
 
ಪ್ರತಿ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಈ ಭಾಗದಲ್ಲಿ ರಾಗಿ ಬೆಳೆ ಕೊಯ್ಲು ಆರಂಭವಾಗುತ್ತದೆ. ತಿಂಗಳಿನ ಎರಡನೇ ವಾರದ ಹೊತ್ತಿಗೆ ಕೊಯ್ಲು ಚುರುಕುಗೊಳ್ಳುತ್ತದೆ. ಇದರಿಂದ ಕೃಷಿ ಕಾರ್ಮಿಕರಿಗೆ ನಿತ್ಯವೂ ಉದ್ಯೋಗ ಲಭಿಸುತ್ತದೆ. ಅದರಲ್ಲೂ ರಾಗಿ ಕಟಾವಿನಲ್ಲಿ ಮಹಿಳಾ ಕಾರ್ಮಿಕರು ಹೆಚ್ಚು ತೊಡಗಿಸಿಕೊಳ್ಳುತ್ತಾರೆ. 
 
ರಾಗಿ ಸುಗ್ಗಿ ಪೂರ್ಣಗೊಳ್ಳುವ  ವೇಳೆಗೆ ಸಂಕ್ರಾಂತಿ ಹಬ್ಬ ಬಂದಿರುತ್ತದೆ. ಕೂಲಿಯಲ್ಲಿ ತಾವು ಉಳಿಸಿದ ಹಣದಿಂದ ಹಬ್ಬವನ್ನು ಕಾರ್ಮಿಕರು ಮತ್ತಷ್ಟು ಕಳೆಗಟ್ಟಿಸುವುದು. ಆದರೆ ಈ ಬಾರಿ ಹೊಲಗಳಲ್ಲಿ ಮಹಿಳೆಯರು ನಡುಬಗ್ಗಿಸಿ ರಾಗಿ ಕೊಯ್ಲು ಮಾಡುವ ಚಿತ್ರಗಳು ಎಲ್ಲಿಯೂ ಕಾಣಿಸುತ್ತಿಲ್ಲ. ರಾಗಿ ತೆನೆ ನೋಡುವುದೇ ಒಂದು ಭಾಗ್ಯ ಎನ್ನುವ ಸ್ಥಿತಿ ಬಂದಿದೆ.
 
‘ರಾಗಿ ಕೊಯ್ಲನ್ನು ಕೂಲಿಕಾರರ ಸುಗ್ಗಿಕಾಲ’ ಎಂದು ಹೇಳಬಹುದು. ಸಮಯಕ್ಕೆ ಸರಿಯಾಗಿ ಬೆಳೆ ಜೋಪಾನ ಮಾಡದಿದ್ದರೆ ಬೆಳೆ ಕೈಗೆ ಸಿಗದೆ ನಾಶವಾಗುತ್ತದೆ. ಈ ಭೀತಿಯಲ್ಲಿ ರೈತರು ಹೆಚ್ಚು ಕೂಲಿ ತೆತ್ತಾದರೂ ಫಸಲನ್ನು ದಕ್ಕಿಸಿಕೊಳ್ಳುತ್ತಾರೆ. 
 
ಸುಮಾರು ನಾಲ್ಕೈದು ವರ್ಷಗಳಿಂದ ಬರಗಾಲಕ್ಕೆ ಸಿಕ್ಕಿದ್ದರೂ ಅಲ್ಪ ಸ್ವಲ್ಪ ಬೆಳೆ ಬೆಳೆದು ರೈತರು ಜೀವನ ಮಾಡುತ್ತಿದ್ದಾರೆ. ಆ ಮೂಲಕ ಕಾರ್ಮಿಕರಿಗೆ ಒಂದಿಷ್ಟು ಕೆಲಸ ದೊರೆಯುತ್ತಿತ್ತು. ಈ ಬಾರಿ ಮಳೆ ಕೊರತೆಯಿಂದ ಹೊಲಗಳಲ್ಲಿ ರಾಗಿ ಒಂದು ಅಡಿ ಮೇಲೆ ಬೆಳೆಯದೆ  ಒಣಗಿದೆ. ರಾಗಿ ಕಟಾವನ್ನು ನೆಚ್ಚಿದ್ದವರು ನಗರದತ್ತ ಕೆಲಸಕ್ಕಾಗಿ ವಲಸೆ ಹೋಗುವಂತಹ ಸ್ಥಿತಿ ಬಂದಿದೆ.
 
ಕೂಲಿಗೆ ಕಿಮ್ಮತ್ತಿಲ್ಲ: ರಾಗಿ ಕೊಯ್ಲಿನ ಕಾಲ ಬಂತೆಂದರೆ ಆಳುಗಳ ಕೊರತೆ ಉಂಟಾಗುತ್ತಿತ್ತು. ಹೆಚ್ಚೆಂದರೆ ₹ 120 ಇರುತ್ತಿದ್ದ ಕೂಲಿ ಏಕಾಏಕಿ ₹ 200 ಕ್ಕೆ ಏರಿಕೆಯಾಗುತ್ತಿತ್ತು. ಈಗ ಕೂಲಿ ಬೆಲೆ ₹120 ಇದೆ. ಕೊಳವೆ ಬಾವಿಗಳ ನೀರು ಬಳಸಿ ರಾಗಿ ಬೆಳೆದಿದ್ದರೂ ಅವರು ₹150 ಕೂಲಿ ಕೊಡುವುದೇ ಹೆಚ್ಚು. ಪ್ರತಿವರ್ಷ ಕೊಯ್ಲಿನ ಸಂದರ್ಭದಲ್ಲೆ ಕೂಲಿ ಹೆಚ್ಚಳ ಮಾಡುತಿದ್ದರು. ಈಗ ಕೊಯ್ಲಿನ ಕೆಲಸವಿಲ್ಲದೆ ನಮ್ಮ ಕೂಲಿಗೆ ಕಿಮ್ಮತ್ತಿಲ್ಲ ಎನ್ನುತ್ತಾರೆ ಕೂಲಿಕಾರ್ಮಿಕರಾದ ಮುನಿಯಪ್ಪ, ಚನ್ನಪ್ಪ, ನಾರಾಯಣಮ್ಮ ಮುಂತಾದವರು.
 
ಕೂಲಿ ದರದ ಕುಸಿತ ಒಂದೆಡೆಯಾದರೆ ಬಳಕೆಗೆ ಅಗತ್ಯವಾದ ರಾಗಿಯೂ ಇಲ್ಲ ಎನ್ನುವ ಕೊರಗು ಕಾರ್ಮಿಕರನ್ನು ಕಾಡುತ್ತಿದೆ. ಕೆಲವು ಕಡೆ ಕೊಯ್ಲಾದ ನಂತರ ಕೂಲಿ ಕಾರ್ಮಿಕರು ರೈತರಿಂದ ಕೂಲಿಯ ಬದಲಿಗೆ ಒಕ್ಕಣೆ ಕಣದಲ್ಲಿ ರಾಗಿಯನ್ನು ಪಡೆಯುವುದು ರೂಢಿಯಲ್ಲಿದೆ. ಆದರೆ ಈ ವರ್ಷ ಬೆಳೆಗಳಾಗದೆ ಇರುವುದರಿಂದ ರಾಗಿ ಒಕ್ಕಣೆ ಕೆಲಸವೂ ಇಲ್ಲ. ರಾಗಿಯು ಇಲ್ಲದಂತಾಗಿದೆ. 
 
ಬರಗಾಲದಿಂದ ತತ್ತರಿಸಿರುವ ತಾಲ್ಲೂಕಿನ ಕೃಷಿ ಕೂಲಿಕಾರ್ಮಿಕರು ವಲಸೆ ಹೋಗುವುದನ್ನು ತಪ್ಪಿಸಲು ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕೆಂದು ಕೃಷಿಕ ಸಮಾಜದ ಅಧ್ಯಕ್ಷ ಮಂಡಿಬೆಲೆ ದೇವರಾಜಪ್ಪ ಒತ್ತಾಯಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.