ADVERTISEMENT

ಗಮನ ಸೆಳೆದ ನೃತ್ಯ, ಸಾಹಸ ಪ್ರದರ್ಶನದ ರೋಮಾಂಚನ

​ಪ್ರಜಾವಾಣಿ ವಾರ್ತೆ
Published 27 ಜನವರಿ 2015, 11:29 IST
Last Updated 27 ಜನವರಿ 2015, 11:29 IST
ಗಮನ ಸೆಳೆದ ನೃತ್ಯ, ಸಾಹಸ ಪ್ರದರ್ಶನದ ರೋಮಾಂಚನ
ಗಮನ ಸೆಳೆದ ನೃತ್ಯ, ಸಾಹಸ ಪ್ರದರ್ಶನದ ರೋಮಾಂಚನ   

ಆನೇಕಲ್‌: ದೇಶದ ಸಮಗ್ರತೆ ಹಾಗೂ ಅಭಿವೃದ್ದಿಗಾಗಿ ಎಲ್ಲರೂ ಶ್ರಮಿಸಬೇಕು. ಯುವ ಶಕ್ತಿ ಜಾಗೃತವಾಗಬೇಕು ಎಂದು ಶಾಸಕ ಬಿ.ಶಿವಣ್ಣ ನುಡಿದರು.
ಅವರು ಪಟ್ಟಣದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ  ಮಾತನಾಡಿದರು.

ದೇಶ ಆರ್ಥಿಕವಾಗಿ ಸಬಲವಾಗಲು ಯುವ ಶಕ್ತಿ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ದೇಶದ ಏಕತೆಯ ಸಂಕೇತವಾದ ರಾಷ್ಟ್ರೀಯ ಹಬ್ಬಗಳಲ್ಲಿ ಎಲ್ಲರೂ ಮನೆಯ ಹಬ್ಬದಂತೆ ಪಾಲ್ಗೊಳ್ಳಬೇಕು ಎಂದರು.

ತಹಶೀಲ್ದಾರ್‌ ಅನಿಲ್‌ಕುಮಾರ್‌ ಅವರು ಧ್ವಜಾರೋಹಣ ನೆರವೇರಿಸಿ ಸಂದೇಶ ವಾಚನ ಮಾಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ.ಸಿ.ರಾಮಚಂದ್ರ ಮಾತನಾಡಿದರು. ಪುರಸಭೆ ಅಧ್ಯಕ್ಷ ಎನ್.ಎಸ್.ಅಶ್ವಥ್‌ನಾರಾಯಣ ಮಾತನಾಡಿ ಪಟ್ಟಣದ ಸ್ವಚ್ಛತೆಗಾಗಿ ಪ್ಲಾಸ್ಟಿಕ್ ನಿಷೇಧಿಸಲಾಗಿದೆ.  ಪರಿಶಿಷ್ಟ ಜಾತಿ ಮತ್ತು ವರ್ಗಗಳ ಯಾವುದೇ ವ್ಯಕ್ತಿ ಮೃತಪಟ್ಟಲ್ಲಿ ಶವಸಂಸ್ಕಾರಕ್ಕಾಗಿ ಪುರಸಭೆಯ ವತಿಯಿಂದ ₨5 ಸಾವಿರ ನೆರವು ನೀಡುವುದಾಗಿ ಘೋಷಿಸಿದರು.ಸ
ವಿದ್ಯಾರ್ಥಿಗಳ ಸಾಹಸ ಪ್ರದರ್ಶನ, ಗ್ರಾಮೀಣ ಸೊಗಡಿನ ನೃತ್ಯಗಳು, ಜಾನಪದ ತಂಡಗಳ ಕಲಾ ಪ್ರದರ್ಶನ ಹಾಗೂ ದೇಶ ಭಕ್ತಿಯನ್ನು ಬಿಂಬಿಸುವ ನೃತ್ಯಗಳು ನೋಡುಗರ ಮನಸೂರೆಗೊಂಡವು. ಕಾರ್ಯಕ್ರಮದಲ್ಲಿ ಭೂಸೇನೆಯ ನಿವೃತ್ತ ಅಧಿಕಾರಿ ಕ್ಯಾಪ್ಟನ್ ಬಲದೇವ್ ಸಿಂಗ್, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಚಿನ್ನಪ್ಪ, ಹೊಸ ಬೆಳಕು ಟ್ರಸ್‌್ಟನ ರಾಮಕೃಷ್ಣ, ಶೌರ್ಯ ಮೆರೆದ ಸೆಕ್ಯೂರಿಟಿ ಉತ್ತಪ್ಪ ಅವರನ್ನು ಸನ್ಮಾನಿಸಲಾಯಿತು.

ಪುರಸಭಾ ಉಪಾಧ್ಯಕ್ಷ ಮುನಾವರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಓಂಕಾರ್, ಉಪಾಧ್ಯಕ್ಷೆ ಸೌಭಾಗ್ಯ ನಂಜಾರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್. ರಾಮಮೂರ್ತಿ, ಪುರಸಭಾ ಪ್ರಭಾರ ಮುಖ್ಯಾಧಿಕಾರಿ ಚಂದ್ರಶೇಖರ್‌, ತಾಲ್ಲೂಕು ಪಂಚಾಯಿತಿ ಹಾಗೂ ಪುರಸಭೆಯ ಸದಸ್ಯರು ಹಾಜರಿದ್ದರು.

ದೇವನಹಳ್ಳಿ ವರದಿ
ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ರಾಷ್ಟ್ರದ ಪ್ರತಿಯೊಂದು ಹಂತದ ಆಡಳಿತ ಜವಾಬ್ದಾರಿಗಾಗಿ ರಚಿಸಿದ ಸಂವಿಧಾನದ ಕರಡು ರಾಷ್ಟ್ರಕ್ಕೆ ಸಮರ್ಪಿಸಿದ ದಿನವನ್ನು ಗಣರಾಜ್ಯೋತ್ಸವ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ತಹಸೀಲ್ದಾರ್ ಕೇಶವಮೂರ್ತಿ ತಿಳಿಸಿದರು.

ಪಟ್ಟಣದ ಸರ್ಕಾರಿ ಕಿರಿಯ ಕಾಲೇಜು ಆವರಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ಸೋಮವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಮೂಲ್ಯ ಸಂವಿಧಾನಕ್ಕೆ ಯಾವುದೇ ರೀತಿಯಿಂದ ಧಕ್ಕೆ ತಂದರೂ ಅದು ಶಿಕ್ಷಾರ್ಹ ಅಪರಾಧವಾಗಲಿದೆ ಎಂದರು. ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ರಾಜಣ್ಣ ,ತಾ.ಪಂ.ಉಪಾಧ್ಯಕ್ಷೆ ಮೀನಾಕ್ಷಿ ಮುನಿಕೃಷ್ಣ, ಪುರಸಭೆ ಸದಸ್ಯ ಎಂ.ಮೂರ್ತಿ, ಶಾಸಕ ಪಿಳ್ಳಮುನಿಶ್ಯಾಮಪ್ಪ, ಟಿಎಪಿಎಂಸಿಎಸ್ ಅಧ್ಯಕ್ಷ ಕೆ.ರಮೇಶ್ ಮಾತನಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮುನಿರಾಜು, ಪುರಸಭೆ ಅಧ್ಯಕ್ಷೆ ಶಾರದಮ್ಮ, ಉಪಾಧ್ಯಕ್ಷೆ ಗಾಯಿತ್ರಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಉಮೇಶ್, ಜೆ.ಡಿ.ಎಸ್ ಅಧ್ಯಕ್ಷ ಮುನಿಶ್ಯಾಮೇಗೌಡ, ಪ್ರಧಾನ ಕಾರ್ಯದರ್ಶಿ ರವೀಂದ್ರ, ತಾ.ಪಂ. ಸದಸ್ಯ ಬಿ.ಕೆ. ಶಿವಪ್ಪ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ ಹಾಜರಿದ್ದರು.

ದೊಡ್ಡಬಳ್ಳಾಪುರ ವರದಿ
ಎಲ್ಲ ವರ್ಗ, ಧರ್ಮಗಳ ಏಳಿಗೆಗೂ ಸಮಾನ ಅವಕಾಶ ನೀಡಿರುವ ಸಂವಿಧಾನ ಎನ್ನುವ ಹೆಮ್ಮೆ ನಮ್ಮದಾಗಬೇಕು ಎಂದು ಉಪವಿಭಾಗಾಧಿಕಾರಿ ಸಿ.ಮಂಜುನಾಥ್‌ ಹೇಳಿದರು. ಅವರು ನಗರದ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸಂವಿಧಾನದ ಆಶಯಗಳಿಗೆ ಭಂಗ ತರದಂತೆ ನಡೆದುಕೊಳ್ಳುವ ಹೊಣೆ ಪ್ರತಿಯೊಬ್ಬ ಪ್ರಜೆಗಳ ಮೇಲಿದೆ ಎಂದರು.

ಶಾಸಕ ಟಿ.ವೆಂಕಟರಮಣಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾರಂಭ­ದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಜಿ.ಲಕ್ಷ್ಮೀಪತಿ, ನಗರಸಭೆ ಅಧ್ಯಕ್ಷೆ ಶಂಷುನ್ನಿಸಾ ಆರೀಫ್, ಉಪಾಧ್ಯಕ್ಷೆ ಮಂಜುಳಾ, ತಹಸೀಲ್ದಾರ್ ಎಂ.ಕೆ.ರಮೇಶ್, ಡಿವೈಎಸ್‌ಪಿ ಟಿ.ಕೋನಪ್ಪರೆಡ್ಡಿ, ನಗರಸಭೆ ಪೌರಾಯುಕ್ತ ಕೆ. ನರಸಿಂಹಮೂರ್ತಿ,ಬಿಇಓ ಹನುಮಂತಪ್ಪ, ಇಓ ಅಶ್ವತ್ಥರೆಡ್ಡಿ ಹಾಜರಿದ್ದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ವರುಣ್ ಗೌಡ(ಯೋಗ), ರಾಮಾಂಜಿನಪ್ಪ, ವೈರ್ ರಾಜಣ್ಣ, ಅಶ್ವತ್ಥಪ್ಪ(ರಂಗ ಕಲೆ), ಮಹೇಶ್ ಕುಮಾರ್ (ಕ್ರೀಡೆ), ರಾಜಣ್ಣ(ಕನ್ನಡಪರ ಹೋರಾಟ), ಜೆ.ಎನ್.ಲಕ್ಷ್ಮಣ್(ಕುಸ್ತಿ), ಸಮೀನಾಬಾನು(ಅಂಗವಿಕಲತೆ ನಡುವೆಯೂ ಉತ್ತಮ ಶೈಕ್ಷಣಿಕ ಸಾಧನೆ), ಗೌರಮ್ಮ(ಜಾನಪದ) ಗಣ್ಯರನ್ನು ಸನ್ಮಾನಿಸಲಾಯಿತು.

ಗಣರಾಜ್ಯೋತ್ಸವ ಪರೇಡನ್ನು ಕ್ಷೇತ್ರ ದೈಹಿಕ ಶಿಕ್ಷಣ ಅಧಿಕಾರಿ ಬಿ.ಜಿ.ಅಮರ್‌ನಾಥ್ ನಡೆಸಿಕೊಟ್ಟರು. ನಗರದ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ವಿಜಯಪುರ ವರದಿ
ಪುರಸಭೆಯ ವತಿಯಿಂದ ಪಟ್ಟಣದ ಸರ್ಕಾರಿ ಕಾಲೇಜು ಮೈದಾನದಲ್ಲಿ ಅದ್ದೂರಿ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು.
ಪುರಸಭಾ ಅಧ್ಯಕ್ಷರು ಧ್ವಜಾರೋಹಣೆ ಮಾಡಿದರು. ವಿವಿಧ ಶಾಲೆಯ ಪಥಸಂಚಲನ ತಂಡಗಳು ರಾಷ್ಟ್ರಧ್ವಜಕ್ಕೆ ಗೌರವ ವಂದನೆ ನೀಡಿದರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ಬಸವ ಕಲ್ಯಾಣ ಮಠದ ಸ್ವಾಮೀಜಿ ಸನ್ಮಾನಿಸಿದರು. ಪುರಸಭಾ ಅಧ್ಯಕ್ಷೆ ಅನುಸೂಯಮ್ಮ ಸಂಪತ್‌ಕುಮಾರ್‌, ಪುರಸಭಾ ಸದಸ್ಯ ಮಂಜುನಾಥ್‌್ ಮಾತನಾಡಿದರು. ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು, ವಿದ್ಯಾರ್ಥಿಗಳು ಬೃಹತ್‌ ಭಾರತಾಂಬೆಯ ಚಿತ್ರಪಠದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ಮಾಡಿದರು.
ಶಿಕ್ಷಕ ಕೆ.ಎಚ್‌.ಚಂದ್ರಶೇಖರ್‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.