ADVERTISEMENT

ಗಾಯಗೊಂಡ ಮರಿ ಆನೆ; ವೈದ್ಯರಿಂದ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2017, 6:15 IST
Last Updated 28 ನವೆಂಬರ್ 2017, 6:15 IST
ಬನ್ನೇರುಘಟ್ಟ ಜೈವಿಕ ಉದ್ಯಾನದ ಆನೆ ಲಕ್ಷ್ಮೀಯು ಹೆಣ್ಣು ಮರಿಗೆ ಜನ್ಮ ನೀಡಿದೆ
ಬನ್ನೇರುಘಟ್ಟ ಜೈವಿಕ ಉದ್ಯಾನದ ಆನೆ ಲಕ್ಷ್ಮೀಯು ಹೆಣ್ಣು ಮರಿಗೆ ಜನ್ಮ ನೀಡಿದೆ   

ಆನೇಕಲ್‌: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿನ ಆನೆ ‘ಲಕ್ಷ್ಮಿ’ಯು ಹೆಣ್ಣು ಮರಿಗೆ ಜನ್ಮ ನೀಡಿದ್ದು ಅವಧಿ ಪೂರ್ವ ಜನನ ಹಾಗೂ ಮರಿಯ ಎಡಗಾಲು ಗಾಯಗೊಂಡಿರುವುದರಿಂದ ಅದನ್ನು ಜತನದಿಂದ ಕಾಪಾಡಲಾಗುತ್ತಿದೆ. ಉದ್ಯಾನದ ವೈದ್ಯರು 24 ಗಂಟೆಯೂ ತೀವ್ರ ನಿಗಾ ವಹಿಸಿದ್ದಾರೆ.

ಶನಿವಾರ ಆನೆಯು ಹೆಣ್ಣು ಮರಿಗೆ ಜನ್ಮ ನೀಡಿತು. ಆಗ ಮರಿಯ ಕಾಲಿಗೆ ಗಾಯವಾಗಿದೆ. ಹಾಗಾಗಿ ಅದು ಎದ್ದು ತಾಯಿಯ ಹಾಲನ್ನು ಕುಡಿಯಲು ಸಾಧ್ಯವಾಗುತ್ತಿಲ್ಲ. ಒಂದು ತಿಂಗಳು ಮುಂಚಿತವಾಗಿ ಮರಿ ಜನಿಸಿರುವುದರಿಂದ ಮರಿಯ ತೂಕ ಕಡಿಮೆಯಿದೆ. ನಿಶ್ಯಕ್ತ ಮರಿಗೆ ತಾಯಿಯ ಹಾಲು ಅತ್ಯಂತ ಅವಶ್ಯಕವಾಗಿತ್ತು ಉದ್ಯಾನದ ಅಧಿಕಾರಿಗಳು ತಿಳಿಸಿದ್ದಾರೆ.

ತಾಯಿಯ ಹಾಲು ಕರೆದು ಬಾಟಲಿ ಮೂಲಕ ಕುಡಿಸಲಾಗುತ್ತಿದೆ. ಜೊತೆಗೆ ಪೌಷ್ಟಿಕಾಂಶಗಳಾದ ಕ್ಯಾಲ್ಶಿಯಂ, ಲ್ಯಾಕ್ಟೋಜನ್‌ಗಳನ್ನು ಹಾಲಿನ ಜತೆ ನೀಡಲಾಗುತ್ತಿದ್ದು ಮಾವುತರು, ವೈದ್ಯರು ತೀವ್ರ ನಿಗಾ ವಹಿಸಿ ಮರಿಯನ್ನು ಜೋಪಾನವಾಗಿ ನೋಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ADVERTISEMENT

ಲಕ್ಷ್ಮಿಯು 2014ರಲ್ಲಿ ಮರಿಯೊಂದಕ್ಕೆ ಜನ್ಮ ನೀಡಿತ್ತು. ಆಗ ತಾಯಿಯು ಮರಿಯನ್ನು ಸರಿಯಾಗಿ ಆರೈಕೆ ಮಾಡದ ಕಾರಣ ಅದು ಮೃತಪಟ್ಟಿತ್ತು. 2013ರಲ್ಲಿ ಲಕ್ಷ್ಮಿಯನ್ನು ಸುತ್ತೂರು ಮಠದಿಂದ ಬನ್ನೇರುಘಟ್ಟ ಉದ್ಯಾನಕ್ಕೆ ತರಲಾಗಿತ್ತು.

ಸಾಮಾನ್ಯವಾಗಿ ತಾಯಿಯು ಮರಿಯನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳುತ್ತದೆ. ಆದರೆ, ಲಕ್ಷ್ಮಿಯು ಮರಿಯನ್ನು ಹತ್ತಿರ ಸೇರಿಸುತ್ತಿಲ್ಲ. ಇದರಿಂದ ಸಮಸ್ಯೆ ಉಂಟಾಗಿದೆ. ಗಾಯಗೊಂಡಿರುವ ಕಾಲಿಗೆ ವೈದ್ಯರು ಚಿಕಿತ್ಸೆ ನೀಡಿ ಬ್ಯಾಂಡೇಜ್ ಮಾಡಿದ್ದಾರೆ. ಹೆಬ್ಬಾಳದಿಂದ ತಜ್ಞ ವೈದ್ಯರು ಮಂಗಳವಾರ ಬರುತ್ತಿದ್ದು ಅವರ ಮಾರ್ಗದರ್ಶನದಲ್ಲಿ ಚಿಕಿತ್ಸೆ ಮುಂದುವರೆಸಲಾಗುವುದು ಎಂದು ಉದ್ಯಾನದ ವೈದ್ಯ ಡಾ.ಸುಜಯ್ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.