ADVERTISEMENT

ಚುನಾವಣೆ ಬಂದಾಗ ನೆನಪಾಗುವ ಐಯ್ಯನಹಳ್ಳಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2017, 9:11 IST
Last Updated 27 ಜುಲೈ 2017, 9:11 IST
ಡಾಂಬರು, ಜಲ್ಲಿ ಕಲ್ಲು ಕಿತ್ತು ಹೋಗಿ ಗುಂಡಿ ಬಿದ್ದಿರುವ ಐಯ್ಯನಹಳ್ಳಿ ರಸ್ತೆ
ಡಾಂಬರು, ಜಲ್ಲಿ ಕಲ್ಲು ಕಿತ್ತು ಹೋಗಿ ಗುಂಡಿ ಬಿದ್ದಿರುವ ಐಯ್ಯನಹಳ್ಳಿ ರಸ್ತೆ   

ಐಯ್ಯನಹಳ್ಳಿ (ದೊಡ್ಡಬಳ್ಳಾಪುರ): ‘ನಮ್ಮನ್ನು ಮನುಷ್ಯರು ಎಂದು ಇಲ್ಲಿನ ಗ್ರಾಮ ಪಂಚಾಯಿತಿಯವರು ಪರಿಗಣಿಸಿದ್ದರೆ ಇಷ್ಟು ಹೊತ್ತಿಗೆ ಕನಿಷ್ಠ ಕುಡಿಯುವ ನೀರನ್ನಾದರೂ ಸರಿಯಾಗಿ ಸರಬರಾಜು ಮಾಡುತ್ತಿದ್ದರು. ಚರಂಡಿಗಳಲ್ಲಿ ನಿಂತು, ನೆಲಮಟ್ಟದ ಕೆಸರಿನ ಗುಂಡಿಗಳಿಗೆ ಇಳಿದು ನೀರು ತುಂಬಿಕೊಳ್ಳುವಂತಹ ಸ್ಥಿತಿ ನಮಗೆ ಬರುತ್ತಿರಲಿಲ್ಲ’ ಇದು ತಾಲ್ಲೂಕು ಕೇಂದ್ರದಿಂದ 22 ಕಿ.ಮೀ ದೂರದ ಐಯ್ಯನಹಳ್ಳಿ ಗ್ರಾಮದ ಮಹಿಳೆಯರು ಹೇಳಿದ ಮಾತು.

ಹುಲುಕುಂಟೆ ಗ್ರಾಮ ಪಂಚಾಯಿತಿಗೆ ಸೇರಿರುವ ಈ ಗ್ರಾಮದಲ್ಲಿ 120 ಕುಟುಂಬಗಳು ವಾಸವಾಗಿವೆ. ಸುಮಾರು 450 ಮತದಾರರಿದ್ದಾರೆ. ಆದರೆ ಇಲ್ಲಿನ ಚರಂಡಿ ಅವ್ಯವಸ್ಥೆಯಿಂದ ಕೂಡಿದೆ. ಪ್ರಾಥಮಿಕ ಶಾಲಾ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಗ್ರಾಮಕ್ಕೆ ಹೋಗುವ ರಸ್ತೆ ಗುಂಡಿಗಳಿಂದ ಕೂಡಿದೆ. ಚುನಾವಣೆ ಬಂದಾಗ ಚುನಾಯಿತ ಜನ ಪ್ರತಿನಿಧಿಗಳಿಗೆ ಇವೆಲ್ಲವೂ ನೆನಪಿಗೆ ಬರುತ್ತದೆ ಎಂದು ಯುವ ಮುಖಂಡ ಎನ್‌.ಬಸವರಾಜ್‌ ತಿಳಿಸುತ್ತಾರೆ.

ಈ ಊರಿಗೊಬ್ಬರು ಗ್ರಾಮ ಪಂಚಾಯಿತಿ ಸದಸ್ಯ ಇದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಕಸಾಘಟ್ಟ ಗ್ರಾಮದ ಬೂತ್‌ಗೆ ಇಲ್ಲಿನ ಮತದಾರರನ್ನು ಸೇರಿಸಿದ್ದಾರೆ. ಹೀಗಾಗಿ ಇಲ್ಲಿಂದ ಆಯ್ಕೆಯಾಗಿರುವ ಮೂರು ಜನ ಪಂಚಾಯಿತಿ ಸದಸ್ಯರು ಕಸಾಘಟ್ಟ ಗ್ರಾಮದವರೇ ಆಗಿದ್ದಾರೆ. ಪಂಚಾಯಿತಿಯಿಂದ ಅಥವಾ ಸರ್ಕಾರದ ಯಾವುದೇ ಯೋಜನೆಗಳು ಬಂದರೂ  ಎಲ್ಲವು ಕಸಾಘಟ್ಟದ ಜನರಿಗೆ ತಲುಪುತ್ತಿವೆ ಎನ್ನುವ ಆರೋಪ ಅವರದ್ದು.

ADVERTISEMENT

ಶಾಲಾ ಕಟ್ಟಡದ ಮೇಲ್ಚಾವಣಿ ಕುಸಿತದ ಭೀತಿ: ಮಳೆ ಬಂದರೆ ನೀರೆಲ್ಲ ಶಾಲೆಯ ಒಳಗೆ ಇರುತ್ತವೆ. ಯಾವ ಗಳಿಗೆಯಲ್ಲಿ ಮೇಲ್ಚಾವಣಿ ಮಕ್ಕಳ ಮೇಲೆ ಕುಸಿದು ಬೀಳುತ್ತದೆಯೋ ಎನ್ನುವಂತಾಗಿದೆ. ಹೀಗಾಗಿ ಈ ಕಟ್ಟಡದ ಒಳಗೆ ವಿದ್ಯಾರ್ಥಿಗಳು ಕುಳಿತುಕೊಳ್ಳುವುದೇ ಇಲ್ಲ.

ಕಟ್ಟಡದ ದುಸ್ಥಿತಿಯ ಬಗ್ಗೆ ಫೋಟೊಗಳ ಸಮೇತ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಗ್ರಾಮಸ್ಥರು ದೂರು ನೀಡಿದ್ದೇವೆ ಎನ್ನುತ್ತಾರೆ. ಈಗ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೂ ಒಟ್ಟು 28 ವಿದ್ಯಾರ್ಥಿಗಳು ಇದ್ದಾರೆ. ಹೀಗೆಯೇ ಮುಂದುವರೆದರೆ ಶಾಲೆಯನ್ನೇ ಮುಚ್ಚುವ ಸ್ಥಿತಿ ಬರಲಿದೆ ಎನ್ನುತ್ತಾರೆ ಗ್ರಾಮಸ್ಥರು.

ಚರಂಡಿಯಲ್ಲಿ ಕುಡಿಯುವ ನೀರು: ಇಡೀ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಮಿನಿ ಟ್ಯಾಂಕ್‌ಗಳನ್ನು ನಿರ್ಮಿಸಿದ್ದಾರೆ. ಆದರೆ ಅವುಗಳಿಂದ ನೀರು ಹಿಡಿದುಕೊಳ್ಳಲು ಕೊಳಾಯಿಗಳನ್ನು ಚರಂಡಿ ಕಡೆಗೆ ಅಳವಡಿಸಿದ್ದಾರೆ. ಹೀಗಾಗಿ ಚರಂಡಿಯಲ್ಲಿ ನಿಂತು ಮಹಿಳೆಯರು ನೀರು ಹಿಡಿದುಕೊಳ್ಳುವಂತಾಗಿದೆ.

‘ಕೊಳಾಯಿಗಳಲ್ಲಿ ಬರುವ ನೀರಿಗೆ ಇಡೀ ಗ್ರಾಮದಲ್ಲಿ ಎಲ್ಲೂ ಸಾರ್ವಜನಿಕರ ಕೊಳಾಯಿಗಳನ್ನು ಅಳವಡಿಸಿ ಸಿಮೆಂಟ್‌ ಕಟ್ಟೆ ನಿರ್ಮಿಸಿಲ್ಲ. ನೆಲಮಟ್ಟದಿಂದ ಒಳಗೆ ಇರುವ ಪೈಪ್‌ಗಳ ಸಮೀಪ ಗುಂಡಿಗಳನ್ನು ಸಾರ್ವಜನಿಕರೇ ತೋಡಿಕೊಂಡಿದ್ದಾರೆ. ಈ ಗುಂಡಿಗಳಲ್ಲಿ ಸದಾ ಕೆಸರು ನೀರು ತುಂಬಿಕೊಂಡಿರುತ್ತದೆ. ಇದರಲ್ಲಿಯೇ ಬಿಂದಿಗೆಗಳನ್ನು ಇಟ್ಟು ನೀರು ತುಂಬಿಕೊಳ್ಳಬೇಕು’ ಎನ್ನುತ್ತಾರೆ ಗ್ರಾಮದ ನಿವಾಸಿ ಸಂಜೀವಮ್ಮ.

ಈ ಗ್ರಾಮಕ್ಕೆ ಕಸಾಘಟ್ಟ ಗ್ರಾಮದ ಮೂಲಕ ಅಥವಾ ಕನಸವಾಡಿಯಿಂದ  ಅಂಬಲಗೆರೆ ಮೂಲಕ ಬರುವ ರಸ್ತೆ ಡಾಂಬರು ಕಂಡು ದಶಕಗಳೇ ಕಳೆದು ಹೋಗಿದೆ ಎಂಬ ಆಕ್ಷೇಪ ಜನರದು. ಮಳೆ ಬಂದಾಗ ರಸ್ತೆ ಎಲ್ಲಿದೆ, ಗುಂಡಿ ಎಲ್ಲಿದೆ ಎನ್ನುವುದೇ ತಿಳಿಯುತ್ತಿಲ್ಲ.

ದ್ವಿಚಕ್ರ ವಾಹನಗಳಲ್ಲಿ ಬರುವವರು ಬಿದ್ದು, ಎದ್ದು ಬಂದು ಮನೆ ಸೇರಿಕೊಳ್ಳಬೇಕು. ರಸ್ತೆಯಲ್ಲಿ ಎದ್ದಿರುವ ಜಲ್ಲಿಕಲ್ಲುಗಳಿಂದಾಗಿ ಹಗಲಿನ ವೇಳೆಯಲ್ಲಿಯೇ ರಸ್ತೆಯಲ್ಲಿ ಓಡಾಡುವುದು ಕಷ್ಟ ಎನ್ನುವ ಅಳಲು ಯುವಕರದು. ನಗರದಲ್ಲಿನ ಕೈಗಾರಿಕೆಗಳಿಗೆ ಕೆಲಸಕ್ಕೆ ಹೋಗಿ ಸಂಜೆ ಊರು ಸೇರಬೇಕಾದರೆ ಅತ್ಯಂತ ಕಷ್ಟವಾಗುತ್ತಿದೆ ಎನ್ನುತ್ತಾರೆ.

ಪ್ರಧಾನಿ ಕಚೇರಿ ಆದೇಶಕ್ಕೂ ಬೆಲೆ ಇಲ್ಲ
ಗ್ರಾಮದಲ್ಲಿನ ಅವ್ಯವಸ್ಥೆಗಳ ಕುರಿತು ಗ್ರಾಮ ಪಂಚಾಯಿತಿ, ಶಾಸಕರು, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಗೆ ಹೇಳಿ ಬೇಸತ್ತು ಕೊನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಆನ್‌ಲೈನ್‌ ಮೂಲಕ ಜುಲೈ 7 ರಂದು ದೂರು ಸಲ್ಲಿಸಲಾಗಿದೆ.

ಜುಲೈ 12ರಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾ ಅಧಿಕಾರಿಗೆ ಆನ್‌ಲೈನ್‌ ಮೂಲಕ ದೂರಿನ ಬಗ್ಗೆ ಕ್ರಮ ಕೈಗೊಳ್ಳುವಂತೆ ಪ್ರಧಾನಿ  ಕಾರ್ಯಾಲಯದಿಂದ ಆದೇಶ  ಬಂದಿದೆ.  ಆದರೆ ಇಲ್ಲಿನ ಅಧಿಕಾರಿಗಳು ಕನಿಷ್ಠ ಗ್ರಾಮಕ್ಕೆ ಭೇಟಿ ನೀಡಿ ನಾವು ನೀಡಿರುವ ಪರಿಶೀಲನೆಯನ್ನೂ ಮಾಡಿಲ್ಲ ಎನ್ನುತ್ತಾರೆ ಗ್ರಾಮದ ಬಸವರಾಜು.    
ಪ್ರಧಾನ ಮಂತ್ರಿಗಳ ಆದೇಶಕ್ಕೂ ಅಧಿಕಾರಿಗಳು ಬೆಲೆ ನೀಡಿಲ್ಲ ಅಂದ ಮೇಲೆ ಜನರ ದೂರುಗಳು ಪರಿಹಾರ ಆಗುವುದು ಹೇಗೆ ಎನ್ನುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.