ADVERTISEMENT

‘ಜನಪದದಲ್ಲಿ ಹುಟ್ಟಿದ ಮಹಾಕಾವ್ಯಗಳು’

​ಪ್ರಜಾವಾಣಿ ವಾರ್ತೆ
Published 4 ಮೇ 2017, 9:50 IST
Last Updated 4 ಮೇ 2017, 9:50 IST
ಚನ್ನಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಜಾನಪದ ಕಲೆ ಮತ್ತು ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಕಲಾವಿದರು ಜಾನಪದ ಕಲೆಗಳನ್ನು ಪ್ರದರ್ಶಿಸಿದರು
ಚನ್ನಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಜಾನಪದ ಕಲೆ ಮತ್ತು ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಕಲಾವಿದರು ಜಾನಪದ ಕಲೆಗಳನ್ನು ಪ್ರದರ್ಶಿಸಿದರು   

ಚನ್ನಪಟ್ಟಣ: ‘ಸಮಾನತೆ ಹಾಗೂ ಸಾಮಾಜಿಕ ಪರಿವರ್ತನೆಯ ಹಾದಿಗೆ ದಾರಿ ಮಾಡಿಕೊಟ್ಟ ಮಹಾಕಾವ್ಯಗಳು ಹುಟ್ಟಿದ್ದು ಜಾನಪದದಲ್ಲಿ’ ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ್ ಅಭಿಪ್ರಾಯಪಟ್ಟರು.

ಪಟ್ಟಣದ ಶತಮಾನೋತ್ಸವ ಭವನದಲ್ಲಿ ಬೆಳದಿಂಗಳು ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಜಾನಪದ ಕಲೆ ಮತ್ತು ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಶಾಲೆಯ ಮೆಟ್ಟಿಲೇರದ ಮಾನವೀಯ ಅಂತಃಕರಣದ ವಿವೇಕದ ಬದುಕು ಕಟ್ಟಿದ ಜಾನಪದರು ನಮ್ಮ ಸಂಸ್ಕೃತಿಯ ದ್ಯೋತಕವಾಗಿದ್ದಾರೆ. ಇಂತಹ ಅಪೂರ್ವ ವಿಚಾರವಾದ ಜಾನಪದವನ್ನು ನಾವು ಉಳಿಸಲು ಮುಂದಾಗಬೇಕು’ ಎಂದರು.

ಉದ್ಘಾಟನೆ ಮಾಡಿದ ಜಾನಪದ ಹಾಡುಗಾರ್ತಿ ಸವಿತಾ ಗಣೇಶ ಪ್ರಸಾದ್ ಮಾತನಾಡಿ, ಜಾನಪದ ಕಲೆಗಳಿಗೆ ಗೌರವ ಸಿಕ್ಕಬೇಕಾದರೆ ಕಲಾವಿದನ ನಡೆನುಡಿ ವಿನಯ ಮುಖ್ಯವಾಗುತ್ತದೆ. ಕಲಾವಿದ ನಿರಂತರ ಅಭ್ಯಾಸಗಳನ್ನು ರೂಢಿಸಿಕೊಂಡಾಗ ಮಾತ್ರ ಜಾನಪದ ಸಂಸ್ಕೃತಿಗೆ ಮನ್ನಣೆ ತಂದು ಕೊಟ್ಟಂತಾಗುತ್ತದೆ ಎಂದರು.

ಜಾನಪದ ಗಾಯಕ ಶಂಕರ್ ಭಾರತಿಪುರ ಮಾತನಾಡಿ, ಜಾನಪದ ಕ್ಷೇತ್ರಕ್ಕೆ ಘನತೆ ಗೌರವ ತಂದುಕೊಡುವ ಜಾನಪದ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ ಎಂದರು.

ಹಿರಿಯ ಸೋಬಾನೆ ಪದ ಹಾಡುಗಾರ್ತಿ ಪುಟ್ಟಸಿದ್ದಮ್ಮ ಅಧ್ಯಕ್ಷತೆ ವಹಿಸಿದ್ದರು. ಹೋರಾಟಗಾರ ಪಿ.ಜೆ.ಗೋವಿಂದರಾಜು, ಗಾಯಕ ಹೊನ್ನಿಗನಹಳ್ಳಿ ಬಿ. ಸಿದ್ದರಾಜಯ್ಯ ಮುಂತಾದವರು ಭಾಗವಹಿಸಿದ್ದರು.

ರಂಗಭೂಮಿ ಕಲಾವಿದ ಕುಂತೂರುದೊಡ್ಡಿ ಪುಟ್ಟರಾಜು ಹಾಗೂ ಜಾನಪದ ಚಿತ್ರ ಕಲಾವಿದ ಕೆ. ಕಾಳಯ್ಯ ಅವರನ್ನು ಸನ್ಮಾನಿಸಲಾಯಿತು.
ಟ್ರಸ್ಟ್ ಕಾರ್ಯದರ್ಶಿ ಅಪ್ಪಗೆರೆ ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.