ADVERTISEMENT

ಜೀವಾಳವಾಗದ ರೇಷ್ಮೆ ಉದ್ಯಮ,ರೀಲರ್‌ಗೂ ಸಂಕಷ್ಟ

ಶಾಪವಾದ ಬರಗಾಲ, ತಾಲ್ಲೂಕಿನಾದ್ಯಂತ ರೇಷ್ಮೆ ಉತ್ಪಾದನೆಯಲ್ಲಿ ಕುಂಠಿತ

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 9:30 IST
Last Updated 31 ಜನವರಿ 2017, 9:30 IST
ಜೀವಾಳವಾಗದ ರೇಷ್ಮೆ ಉದ್ಯಮ,ರೀಲರ್‌ಗೂ ಸಂಕಷ್ಟ
ಜೀವಾಳವಾಗದ ರೇಷ್ಮೆ ಉದ್ಯಮ,ರೀಲರ್‌ಗೂ ಸಂಕಷ್ಟ   
ವಿಜಯಪುರ: ರೇಷ್ಮೆ ಉದ್ಯಮವನ್ನೆ ಜೀವಾಳವಾಗಿ ನಂಬಿಕೊಂಡು ಬದುಕು ಕಟ್ಟಿಕೊಂಡಿರುವ ತಾಲ್ಲೂಕಿನ ಜನರ ಪಾಲಿಗೆ ತೀವ್ರ ಬರಗಾಲ ಶಾಪವಾಗಿ ಪರಿಣಮಿಸುತ್ತಿದ್ದು ಮಾರುಕಟ್ಟೆಗೆ ಬರುತ್ತಿರುವ ಗೂಡಿನ ಪ್ರಮಾಣದಲ್ಲಿ ಗಣನೀಯವಾಗಿ ಇಳಿಮುಖವಾಗುತ್ತಿರುವುದರಿಂದ  ರೀಲರುಗಳು ಸಂಕಷ್ಟ ಎದುರಿಸುವಂತಾಗಿದೆ ಎಂದು ರೀಲರ್ಸ್ ಸಂಘದ ಕಾರ್ಯದರ್ಶಿ ಸಾಧಿಕ್ ಪಾಷ ತಿಳಿಸಿದ್ದಾರೆ.
 
ಕೇಂದ್ರ ಸರ್ಕಾರ 2016 ನವೆಂಬರ್ 8 ರಂದು ₹ 500  ಮತ್ತು ₹ 1000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ ನಂತರ ರೀಲರುಗಳಿಗೆ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ರೇಷ್ಮೆ ಉದ್ಯಮವನ್ನು ನಂಬಿಕೊಂಡಿರುವ ರೀಲರುಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
 
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವಾರಕ್ಕೆ ಕೇವಲ ₹ 24 ಸಾವಿರ ರೂಪಾಯಿಗಳ ಹಣ ಮಾತ್ರ ಡ್ರಾ ಮಾಡಿಕೊಳ್ಳಲು ನೀಡಿರುವ ಮಿತಿಯನ್್ನು ಕೇಂದ್ರ ಸರ್ಕಾರ 2016 ಡಿಸೆಂಬರ್ ನಂತರ  ವಿಸ್ತರಣೆ ಮಾಡಲಿದೆ ಎಂಬ ನಿರೀಕ್ಷೆಯಲ್ಲಿದ್ದ ಜನರ ಆಶಯದಂತೆ ಸರ್ಕಾರ, 2017 ಜನವರಿ ಕಳೆದರೂ ಅಂತಹ ಯಾವುದೇ ಘೋಷಣೆ ಮಾಡಿಲ್ಲ.
 
ಹೀಗಾಗಿ ಗೂಡು ಖರೀದಿಗಾಗಿ ರೀಲರುಗಳು ಹಣವನ್ನು ಹೊಂದಿಸಲು ಸಾಧ್ಯವಾಗದೆ ಪರದಾಡುವಂತಾಗಿದೆ.  ಖರೀದಿ ಮಾಡುವ ಗೂಡಿನ ಪ್ರಮಾಣಕ್ಕೆ ಅನುಗುಣವಾಗಿ ಹಣವನ್ನು ಹೊಂದಿಸಲು ಸಾಧ್ಯವಾಗುತ್ತಿಲ್ಲ. ಚೆಕ್ಕುಗಳನ್ನು ಪಡೆದುಕೊಳ್ಳಲು ರೈತರು ಒಪ್ಪುತ್ತಿಲ್ಲ. ಮಾರುಕಟ್ಟೆಯ ಅಧಿಕಾರಿಗಳು ರೈತರೊಂದಿಗೆ ಸಮಾಲೋಚನೆ ಮಾಡಿಕೊಂಡು ಖರೀದಿ ಮಾಡಿಕೊಳ್ಳಿ ಎನ್ನುತ್ತಾರೆ. ಇದರಿಂದ ಬಹಳಷ್ಟು  ರೀಲರುಗಳು ಹರಾಜಿನಲ್ಲಿ ಭಾಗವಹಿಸುತ್ತಿಲ್ಲ.
 
ರೀಲರುಗಳು ರೈತರುಗಳಿಗೆ ಚೆಕ್ಕುಗಳ ಮೂಲಕ ಹಣ ಪಾವತಿ ಮಾಡಲು ಮುಂದಾಗಿದ್ದಾರೆ.  ರೀಲರುಗಳು ನೀಡುತ್ತಿರುವ ಚೆಕ್ಕುಗಳಲ್ಲಿ ಕಂಡು ಬರುತ್ತಿರುವ ಸಣ್ಣಪುಟ್ಟ ದೋಷಗಳಿಂದ ಚೆಕ್ಕುಗಳನ್ನು ಬ್ಯಾಂಕುಗಳಿಂದ ವಾಪಸ್  ನೀಡುತ್ತಿರುವದು  ಒಂದೆಡೆಯಾದರೆ ಕೆಲವು ಮಂದಿ ರೀಲರುಗಳು ಚೆಕ್ಕುಗಳಲ್ಲಿ ನಮೂದು ಮಾಡಿರುವ ದಿನಾಂಕದೊಳಗೆ  ಖಾತೆಗಳಿಗೆ ಹಣ ಜಮಾ ಮಾಡಲು ಸಾಧ್ಯವಾಗದೆ ಚೆಕ್‌ಗಳು ಬೌನ್ಸ್ ಆಗುತ್ತಿವೆ. 
 
ಇದರಿಂದ ರೈತರು ಸಕಾಲದಲ್ಲಿ ಹಣಪಡೆಯಲು ಸಾಧ್ಯವಾಗದೆ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಮಾರುಕಟ್ಟೆಯ ಆವರಣದಲ್ಲೆ ಬ್ಯಾಂಕ್ ಶಾಖೆಯನ್ನು ತೆರೆದು ರೀಲರುಗಳಿಗೆ ಚಾಲ್ತಿಖಾತೆಯನ್ನು ಮಾಡಿಕೊಡುವಂತೆ ಮನವಿ ಮಾಡುತ್ತಲೇ ಇದ್ದೇವೆ. ಇದುವರೆಗೂ ಕ್ರಮಕ್ಕೆ ಇಲಾಖೆ ಮುಂದಾಗಿಲ್ಲವೆಂದು ರೀಲರುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ವಿಜಯಪುರದ ರೇಷ್ಮೆಗೂಡು ಮಾರುಕಟ್ಟೆಗೆ ಬರುತ್ತಿದ್ದ ಸುಮಾರು 300 ಲಾಟುಗಳಷ್ಟು ಗೂಡಿಗೆ ಬದಲಾಗಿ ಕೇವಲ 160 ಲಾಟುಗಳಷ್ಟೇ ಆವಕವಾಗುತ್ತಿದೆ. ಸರ್ಕಾರ ರೈತರ ಗೂಡಿಗೆ ನೀಡುತ್ತಿದ್ದ ಪ್ರೋತ್ಸಾಹಧನವನ್ನು ನಿಲ್ಲಿಸಿರುವ ಕಾರಣ ಶೇ 75 ರಷ್ಟು ರೈತರು ಮಾರುಕಟ್ಟೆಗೆ ಗೂಡು ತರುತ್ತಿಲ್ಲ. ರೈತರ ಗೂಡು ತೂಕ ಮಾಡಿದ ದಿನವೇ ಪ್ರೋತ್ಸಾಹಧನ ಬಿಡುಗಡೆ ಮಾಡಿದರೆ ರೈತರು ಮಾರುಕಟ್ಟೆಗೆ ತಂದು ವ್ಯವಹರಿಸುತ್ತಾರೆ. ಸರ್ಕಾರಕ್ಕೂ ತೆರಿಗೆ ಪಾವತಿಯಾಗುತ್ತದೆ ಎಂದು ರೀಲರುಗಳಾದ ನಾಗರಾಜು, ಕೃಷ್ಣಪ್ಪ, ಮಹಮದ್ ಗೌಸ್, ಮುಂತಾದವರು ಒತ್ತಾಯ ಮಾಡಿದ್ದಾರೆ. 
 
**
ಗುಣಮಟ್ಟದ ಗೂಡಿಲ್ಲ
ರೀಲರುಗಳು ನೂರು ರೂಪಾಯಿಗಳಿಗೆ ₹ 1 ನಂತೆ ಪ್ರತಿ ಕೆ.ಜಿ.ಗೂಡಿಗೆ ₹ 4 ಖರ್ಚಾಗುತ್ತಿದೆ. ರೈತರು ಕೂಡಾ ನೂರು ರೂಪಾಯಿಗಳಿಗೆ ₹ 1 ತೆರಿಗೆ ಕಟ್ಟುತ್ತಿದ್ದಾರೆ. ಆದರೆ ತೆರಿಗೆ ತೆಗೆದುಕೊಳ್ಳುತ್ತಿರುವ ಸರ್ಕಾರ ರೀಲರುಗಳಿಗೆ ಅಗತ್ಯವಾಗಿರುವ ಸೌಲಭ್ಯಗಳನ್ನು ಕಲ್ಪಿಸುತ್ತಿಲ್ಲ. ಆದ್ದರಿಂದ ಸರ್ಕಾರ ತೆರಿಗೆಯನ್ನು 50 ಪೈಸೆಗೆ ಇಳಿಕೆ ಮಾಡಬೇಕು. ರೇಷ್ಮೆ ನೂಲಿನ ಬೆಲೆಯು ಕಡಿಮೆಯಾಗಿದ್ದು ಉತ್ತಮ ಗುಣಮಟ್ಟದ ರೇಷ್ಮೆನೂಲಿಗೆ ₹ 3600 ವರೆಗೂ ಮಾರಾಟವಾಗುತ್ತಿದೆ.
 
ಈಚೆಗಿನ  ವಾತಾವರಣಗಳಲ್ಲಿ ಸರಿಯಾಗಿ ನೂಲು ಬಿಚ್ಚಾಣಿಕೆಯಾಗುತ್ತಿಲ್ಲ. ಗೂಡು ಗುಣಮಟ್ಟದಿಂದ ಬರುತ್ತಿಲ್ಲ. ಆದ್ದರಿಂದ  ನಮ್ಮ ರೇಷ್ಮೆಗೆ ಬೇಡಿಕೆಯು ಕಡಿಮೆಯಾಗುತ್ತಿದೆ. ಪ್ರತಿ ಕೆ.ಜಿ.ಗೆ ₹ 2400 ರೂಪಾಯಿಗಳಿಂದ ಕೇಳುತ್ತಾರೆ.  ತಮಿಳುನಾಡಿನ ಸೇಲಂ, ಬೆಂಗಳೂರು ಮುಂತಾದ ಕಡೆಗಳಲ್ಲಿ ಅವರು ಕೇಳಿದ ದರಕ್ಕೆ ಮಾರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ರೀಲರುಗಳಾದ ಅಕ್ರಮ ಪಾಷಾ, ಸಾಧಿಕ್, ಜಬೀವುಲ್ಲಾ, ಕೃಷ್ಣಪ್ಪ ಮುಂತಾದವರು ತಿಳಿಸಿದ್ದಾರೆ. 
 
**
ಗೂಡಿನ ಆವಕ ಕಡಿಮೆಯಾಗಿದೆ. ರೈತರಿಗೆ ಹಣದ ಸಮಸ್ಯೆಯಾಗದಂತೆ ರೀಲರ್‌ ಮತ್ತು ರೈತರು ಒಪ್ಪಿಕೊಂಡ ನಂತರವೇ ಚೆಕ್ಕುಗಳನ್ನು ಕೊಡಿಸಲಾಗುತ್ತಿದೆ
-ಬೈರಾರೆಡ್ಡಿ , ಉಪನಿರ್ದೇಶಕ ರೇಷ್ಮೆ ಮಾರುಕಟ್ಟೆ

 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.