ADVERTISEMENT

ದೇವನಹಳ್ಳಿ: ಕುಡಿಯುವ ನೀರಿಗೆ ಹಾಹಾಕಾರ

ಪುರಸಭೆ ವ್ಯಾಪ್ತಿಯ ಬಾವಿಗಳಲ್ಲಿ ಕ್ಷೀಣಿಸಿದ ಅಂತರ್ಜಲ -– 15 ದಿನಗಳಿಗೊಮ್ಮೆ ನೀರು ಸರಬರಾಜು

​ಪ್ರಜಾವಾಣಿ ವಾರ್ತೆ
Published 3 ಮೇ 2017, 8:37 IST
Last Updated 3 ಮೇ 2017, 8:37 IST
ದೇವನಹಳ್ಳಿ ಪಟ್ಟಣದ 16ನೇ ವಾರ್ಡ್‌ನಲ್ಲಿ ಕುಡಿಯುವ ನೀರಿಗಾಗಿ ಮುಗಿಬಿದ್ದಿರುವ ಸಾರ್ವಜನಿಕರು
ದೇವನಹಳ್ಳಿ ಪಟ್ಟಣದ 16ನೇ ವಾರ್ಡ್‌ನಲ್ಲಿ ಕುಡಿಯುವ ನೀರಿಗಾಗಿ ಮುಗಿಬಿದ್ದಿರುವ ಸಾರ್ವಜನಿಕರು   

ದೇವನಹಳ್ಳಿ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿರುವ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕಡಿಮೆಯಾಗುತ್ತಿದ್ದು ಕೆಲವೇ ದಿನಗಳಲ್ಲಿ ನೀರಿಗೆ ತೀವ್ರ ಉಂಟಾಗುವ ಸಾಧ್ಯತೆ ಇದೆ .

ಪ್ರಸ್ತುತ ಪುರಸಭೆ ವ್ಯಾಪ್ತಿಯಲ್ಲಿ ಇಲಾಖೆ ಅಧಿಕಾರಿಗಳ ಮಾಹಿತಿಯಂತೆ ಸಿಹಿ ಮತ್ತು ಉಪ್ಪು ನೀರಿನ ಒಟ್ಟು 90 ಕೊಳವೆ ಬಾವಿ ಪೈಕಿ 40 ಕೊಳವೆ ಬಾವಿ ಬತ್ತಿ ಹೋಗಿವೆ. ಪ್ರತಿ ಮೂರು ದಿನಗಳಿಗೊಮ್ಮೆ ಒಂದು ಕೊಳವೆ ಬಾವಿಯಲ್ಲಿ ನೀರು ಖಾಲಿಯಾಗುತ್ತಿದೆ.

5 ಲಕ್ಷ ಲೀಟರ್ ಶೇಖರಣಾ ಸಾಮರ್ಥ್ಯ ವಿರುವ ನೀರಿನ ಓವರ್ ಹೆಡ್ ಟ್ಯಾಂಕ್‌ಗೆ ಕೇವಲ 40 ಸಾವಿರ ಲೀಟರ್ ನೀರು ತುಂಬಿಸಲಾಗುತ್ತಿದ್ದು 5 ದಿನಗಳಿಗೊಮ್ಮೆ ಪೂರೈಕೆ ಮಾಡಲಾಗುತ್ತಿದ್ದ ಸಿಹಿ ನೀರು 15 ದಿನಗಳಿಗೊಮ್ಮೆ ಪೂರೈಕೆ ಮಾಡುವಂತಾಗಿದೆ. ಇದನ್ನು   ಪುರಸಭೆ ಸದಸ್ಯರು ಒಪ್ಪಿಕೊಳ್ಳುತ್ತಾರೆ.

ಪುರಸಭೆ ಆವರಣದಲ್ಲಿ ಈಗಾಗಲೇ ಶುದ್ಧ ಕುಡಿಯುವ ನೀರಿನ ಘಟಕ ಅರಂಭಗೊಂಡಿದೆ. ವಿವಿಧ ವಾರ್ಡುಗಳಲ್ಲಿ ನಾಲ್ಕು ಕಡೆ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಕಾಮಗಾರಿ ನಡೆಯುತ್ತಿದೆ. ಈ ಘಟಕಕ್ಕೆ ಯಾವ ಕೊಳವೆ ಬಾವಿಯಿಂದ ನೀರು ಪೂರೈಕೆಗೆ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂಬುದು ಅಧಿಕಾರಿಗಳಿಗೆ ಗೊತ್ತಾಗದೆ ತುಟಿ ಬಿಚ್ಚುತ್ತಿಲ್ಲ.

ನೀರಿನ ಬವಣೆ ಅರಿತು ಕೆಲ ಸಮಾಜ ಸೇವಕರು ಉಚಿತ ಟ್ಯಾಂಕರ್‌ಗಳಲ್ಲಿ ವಿವಿಧ ಬಡಾವಣೆಗೆ ಪೂರೈಕೆ ಮಾಡುತ್ತಿದ್ದಾರೆ. ಪುರಸಭೆಯಿಂದ ಪ್ರತಿದಿನ 20 ಟ್ಯಾಂಕರ್ ಪೂರೈಕೆ ಮಾಡಲಾಗುತ್ತಿದೆ,  ಇದು ಸ್ಥಳೀಯರ ಅಗತ್ಯಕ್ಕೆ ಸಾಕಾಗುತ್ತಿಲ್ಲ .

ಸಿಹಿ ನೀರನ್ನು ಉಪ್ಪು ನೀರಿನೊಂದಿಗೆ ಮಿಶ್ರ ಮಾಡಿ ಪೂರೈಕೆ ಮಾಡಿದರೂ ಸಾಕಾಗುತ್ತಿಲ್ಲ. ಪಟ್ಟಣದ ಶೇಕಡ 50 ರಷ್ಟು ನಾಗರಿಕರು ಖಾಸಗಿ ಟ್ಯಾಂಕರ್‌ಗಳನ್ನು ಅವಲಂಬಿಸಿದ್ದಾರೆ ಇನ್ನೂ ಎರಡು ತಿಂಗಳು ಮಳೆಗಾಲ ಅರಂಭವಾಗುವ ವರೆಗೂ ನೀರಿನ ಲಭ್ಯತೆ ಮತ್ತು ಪೂರೈಕೆ ಹೇಗೆ, ಅಧಿಕಾರಿಗಳು ಮತ್ತು ಸದಸ್ಯರು ನಿದ್ದೆ ಮಾಡುತ್ತಿದ್ದಾರೆಯೇ ಎಂಬುದು ಸಾರ್ವಜನಿಕರ ಅಕ್ರೋಶ.

‘ಬಯಾಪ’ ನಿರ್ಲಕ್ಷ್ಯ: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿ ಪ್ರಾಧಿಕಾರ (ಬಯಾಪ) 2015–16ನೇ ಸಾಲಿನಲ್ಲಿ ಶಿಥಿಲಗೊಂಡಿರುವ 5ಲಕ್ಷ ಲೀಟರ್ ಶೇಖರಣಾ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ನೆಲಸಮ ಮಾಡಿ ನೂತನವಾಗಿ ನಿರ್ಮಾಣ ಮಾಡಲು ₹102 ಲಕ್ಷ ಅನುದಾನ ಬಿಡುಗಡೆ ಮಾಡಿದೆ, ಒಂದು ವರ್ಷ ಕಳೆದರೂ ಟೆಂಡರ್ ಬಗ್ಗೆ ಮಾಹಿತಿ ಇಲ್ಲ, ಯಾವ ಇಲಾಖೆ ಕಾಮಗಾರಿ ಮಾಡಬೇಕು ಎಂಬುದೇ ಗೊತ್ತಿಲ್ಲ ಸಂಪೂರ್ಣ ನಿರ್ಲಕ್ಷ್ಯವಹಿಸಿದೆ.

ಅನೇಕ ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ, ಪುರಸಭೆ ವಾರ್ಡುಗಳಿಗೆ ಹೋದರೆ ಬೈಗುಳ, ಪುರಸಭೆಗೆ ಅನುದಾನ ಕಡಿಮೆ ಬರುತ್ತದೆ ಜೀವಜಲ ಹನಿ ನೀರನ್ನು ಅದಷ್ಟು ಮಿತ ಬಳಕೆ ಮಾಡಬೇಕು ಎಂಬುದಾಗಿ ಪುರಸಭೆ ಅಧ್ಯಕ್ಷ ನರಸಿಂಹಮೂರ್ತಿ ಪ್ರತಿಕ್ರಿಯಿಸಿದರು.

ನಗರೋತ್ಥಾನ ಯೋಜನೆಯಡಿ ಬೆಟ್ಟಕೋಟೆ ಕೆರೆಯಂಗಳದಲ್ಲಿ 20 ಕೊಳವೆ ಬಾವಿ ಕೊರೆಯಿಸಿ ಪೈಪ್ ಲೈನ್ ಮೂಲಕ ನೀರು ತರಲು ₹ 235 ಲಕ್ಷದ ಕ್ರೀಯಾಯೋಜನೆ ಕಡತವನ್ನು ಜಿಲ್ಲಾಧಿಕಾರಿಗೆ ನೀಡಲಾಗಿದೆ.

ಇಂದು ತುರ್ತು ಸಭೆ: ಪಟ್ಟಣದ ವಿವಿಧ ವಾರ್ಡುಗಳಲ್ಲಿ ಉಂಟಾಗಿರುವ ನೀರಿನ ಸಮಸ್ಯೆ ಮತ್ತು ಕೈಗೊಳ್ಳಬಹುದಾದ ಅಗತ್ಯ ಕ್ರಮದ ಬಗ್ಗೆ ಇಂದು (ಮೇ.3 ರಂದು ) ಪುರಸಭೆ ಸಭಾಂಗಣದಲ್ಲಿ ಸಭೆ ಕರೆಯಲಾಗಿದೆ ಎಂದು ಪುರಸಭೆ ಪ್ರಕಟಣೆಯಲ್ಲಿ ತಿಳಿಸಿದೆ .

*
ಪಟ್ಟಣ ವ್ಯಾಪ್ತಿಯಲ್ಲಿ 8 ಕೊಳವೆ ಬಾವಿ ಕೊರೆಯಿಸಲು ಜಾಗ ಗುರುತಿಸಲಾಗಿದೆ. ನೀರಿನ ಬವಣೆ ಬಗ್ಗೆ ನಮಗೂ ಅತಂಕವಿದೆ ನಾಗರಿಕರು ಸಹಕರಿಸಬೇಕು.
-ಅಂಬಿಕಾ,
ಪುರಸಭೆ ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT