ADVERTISEMENT

‘ದೇವೇಗೌಡ ಇರುವವರೆಗೆ ಜೆಡಿಎಸ್‌’

​ಪ್ರಜಾವಾಣಿ ವಾರ್ತೆ
Published 26 ಮೇ 2017, 10:19 IST
Last Updated 26 ಮೇ 2017, 10:19 IST

ಬಿಡದಿ: ‘ಮುಂಬರುವ ಚುನಾವಣೆಯಲ್ಲಿ ಜೆಡಿಎಸ್‌ 120 ಸ್ಥಾನ ಗೆದ್ದು ಬರುವುದು ಕನಸಿನ ಮಾತು. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಇರುವವರೆಗೆ ಮಾತ್ರ ಆ ಪಕ್ಷಕ್ಕೆ ಉಳಿಗಾಲ’ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಲೇವಡಿ ಮಾಡಿದರು.

ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರೀಕಲ್‌ದೊಡ್ಡಿ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಸಂದರ್ಭ ಅವರು ಪತ್ರಕರ್ತರ ಜೊತೆ ಮಾತನಾಡಿದರು.

‘ಕುಮಾರಸ್ವಾಮಿ ಅವರು ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರುವವರೆಗೂ ಮತ್ತೆ ಮತ್ತೆ ಜನಾದೇಶಕ್ಕೆ ತೆರಳುವುದಾಗಿ ಹೇಳಿದ್ದಾರೆ, ಅವರು ಅಧಿಕಾರಕ್ಕೆ ಬರುವಷ್ಟರಲ್ಲಿ ಮೂರ್ನಾಲ್ಕು ಚುನಾವಣೆ ಎದುರಾದರೆ ನಮ್ಮಂತಹ ಬಡಪಾಯಿಗಳು ಚುನಾವಣೆ ಎದುರಿಸುವುದು ಹೇಗೆಂಬ ಭಯ ನಮಗೆ ಈಗಲೇ ಕಾಡಲಾರಂಭಿಸಿದೆ’ ಎಂದರು.

ADVERTISEMENT

ಕಾಂಗ್ರೆಸ್‌ ನಾಯಕರೂ ಜೆಡಿಎಸ್‌ನವರೇ:
‘ಕಾಂಗ್ರೆಸ್ ಕಾರ್ಯಕರ್ತರಿಗೆ ಕಿರುಕುಳ ನೀಡಿರುವ ಬಾಲಕೃಷ್ಣ ಅವರಿಗೆ ಕಾಂಗ್ರೆಸ್ ಸೇರಿ ಮತ ಕೇಳಲು ನೈತಿಕತೆ ಇದೆಯೇ?’ ಎಂಬ ಜಿ.ಪಂ ಸದಸ್ಯ ಎ.ಮಂಜು ಅವರ ಟೀಕೆಗೆ ಪ್ರತಿಕ್ರಿಯಿಸಿದ ಬಾಲಕೃಷ್ಣ ‘ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನಲ್ಲಿರುವ ಶೇ 50ರಷ್ಟು ನಾಯಕರು ಜೆಡಿಎಸ್‌ ಮೂಲದವರೇ’ ಎಂದರು.

‘ನನ್ನ ತಂದೆ ಹುಲಿಕಟ್ಟೆ ಚನ್ನಪ್ಪ ಹಿಂದೆ ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಈಗ ನಾನು ಅವರ ಹಾದಿಯನ್ನೇ ಹಿಡಿದಿದ್ದೇನೆ. ಟಿಕೆಟ್ ಕೊಡುವುದು ಬಿಡುವುದು  ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಎ.ಮಂಜುಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದರೆ ಅವರ ಗೆಲುವಿಗಾಗಿ ಶ್ರಮಿಸುವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.