ADVERTISEMENT

‘ನಿಸ್ವಾರ್ಥ ಜೀವನದಿಂದ ಆನಂದ’

​ಪ್ರಜಾವಾಣಿ ವಾರ್ತೆ
Published 5 ಮೇ 2017, 9:04 IST
Last Updated 5 ಮೇ 2017, 9:04 IST

ದೊಡ್ಡಬಳ್ಳಾಪುರ: ಮನುಷ್ಯ ಹಂಚುವುದನ್ನು ಕಲಿತುಕೊಳ್ಳಬೇಕು. ಸ್ವಾರ್ಥದಿಂದ ಸಾಧಿಸುವುದೇನು ಇಲ್ಲ. ನಿಸ್ವಾರ್ಥ ಜೀವನ ಆನಂದವನ್ನು ನೀಡುತ್ತದೆ ಎಂದು ನಿವೃತ್ತ ಜಿಲ್ಲಾಧಿಕಾರಿ ಡಾ.ಸೋಮಶೇಖರ್ ಹೇಳಿದರು.

ನಗರೇಶ್ವರಸ್ವಾಮಿ ಸೇವಾ ಸಮಿತಿಯಿಂದ ಆಯೋಜಿಸಿದ್ದ ಪ್ರಥಮ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಸೇವಾ ಮನೋಭಾವನೆ ಉಳ್ಳವರ ಸಂಖ್ಯೆ  ಇಳಿಮುಖವಾಗುತ್ತಿದೆ. ಸಾಮಾಜಿಕ ಕೆಲಸಗಳು ಹೆಚ್ಚಾಗಿ ನಡೆಯಬೇಕು. ಹಿಂದೆ ವಚನಕಾರರು ತಮ್ಮ ವಚನಗಳ ಮೂಲಕ ಸಾಮಾಜಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಿ ಎಂದರು.

ವಯಸ್ಸಾದವರನ್ನು ಸಮಾಜದಲ್ಲಿ ಹೊರೆಯೆಂದು ಭಾವಿಸುತ್ತಾರೆ. ಮನೆಯವರೆ ನಿರ್ಲಕ್ಷ್ಯ ಭಾವದಿಂದ ನೋಡುತ್ತಾರೆ. ಆದರೆ ವಯಸ್ಸಾದವರನ್ನು ನಗರೇಶ್ವರ ದೇವಸ್ಥಾನ ಸಮಿತಿಯವರು ಪುಣ್ಯಕ್ಷೇತ್ರ ದರ್ಶನಕ್ಕೆ ಕಳುಹಿಸುತ್ತಿರುವುದು ತುಂಬಾ ಸಂತಸ ತಂದಿದೆ ಎಂದು ಹೇಳಿದರು.

ವಯಸ್ಸಾದವರನ್ನು ನಿರ್ಲಕ್ಷ್ಯ ಮಾಡುವ ಯುವಕರಿಗೂ ವಯಸ್ಸಾಗುತ್ತದೆ ಎಂಬುದನ್ನು ಮರೆಯಬಾರದು. ಕೇವಲ ದೇಹಕ್ಕಾಗಿ ಆಸೆಗಳನ್ನು ಬೆಳೆಸಿಕೊಂಡರೆ ಉಪಯೋಗವಿಲ್ಲ ಎಂದು ತಿಳಿಸಿದರು.

ನಗರೇಶ್ವರ ಸ್ವಾಮಿ ಸೇವಾ ಸಮಿತಿ ಕಾರ್ಯದರ್ಶಿ ಬಸವರಾಜು ಮಾತನಾಡಿ, ಯುವಕರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವುದು ಸಂತಸ ತಂದಿದೆ. ಹಿರಿಯರ ಮಾರ್ಗದರ್ಶನದಲ್ಲಿ ಹಿರಿಯರನ್ನು ಮರೆಯದೆ ವಯಸ್ಸಾದ ಕಾಲದಲ್ಲಿ ಪುಣ್ಯಕ್ಷೇತ್ರಗಳನ್ನು ಉಚಿತವಾಗಿ ನೋಡಿಬರುವ ವ್ಯವಸ್ಥೆ ಮಾಡಿರುವುದು ಬೇರೆ ನಗರಗಳ ಯುವಕರಿಗೆ ಸ್ಫೂರ್ತಿ ನೀಡುವಂತಹ ಕೆಲಸ ಎಂದರು. ಸಮಾಜಮುಖಿ ಕೆಲಸಗಳಿಗೆ ಶ್ರಮಿಸಿದವರುಮ ಹಾಗೂ ನಗರದ ದಾನಿಗಳನ್ನು ಸನ್ಮಾನಿಸಲಾಯಿತು.

ಹಿರಿಯರಿಗೆ ಉಚಿತ ಪ್ರವಾಸ: ನಗರೇಶ್ವರ ಸ್ವಾಮಿ ಸೇವಾ ಸಮಿತಿಯ ವತಿಯಿಂದ ಜನಾಂಗದ ಹಿರಿಯರನ್ನು ಜುಲೈ 4 ರಂದು ಉಚಿತವಾಗಿ ಶ್ರೀಕಾಶಿ ವಿಶ್ವನಾಥ, ಅಯೋಧ್ಯ, ಗಯಾ, ಅಲಹಾಬಾದ್ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ 9 ದಿನಗಳ ಪ್ರವಾಸಕ್ಕೆ ಕಳುಹಿಸಲಾಗುತ್ತಿದೆ.

ಈ ಕಾರ್ಯಕ್ರಮದಲ್ಲಿ ವಾಣಿಜ್ಯೋದ್ಯಮಿ ಬಿ.ಶಿವಾನಂದಪ್ಪ, ಪಿ.ಸಿ.ಪುಟ್ಟರುದ್ರಪ್ಪ, ಪಿ.ಆರ್.ವೀರಣ್ಣ, ಟಿ.ಎಸ್.ಮಹದೇವಯ್ಯ, ಪುಟ್ಟಸ್ವಾಮಿ,         ಪಿ.ಸಿ.ರಾಜಣ್ಣ, ಎಸ್‌.ನಟರಾಜ, ನಗರೇಶ್ವರಸ್ವಾಮಿ ಸೇವಾ ಸಮಿತಿ ಪದಾಧಿಕಾರಿಗಳಾದ ಬೇಕರಿ ಸತೀಶ್, ಶ್ಯಾಮ್, ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.