ADVERTISEMENT

ನೀರು ಪೂರೈಕೆಯಲ್ಲಿ ತಾರತಮ್ಯ

ವಿಜಯಪುರ ಪುರಸಭೆ ವಿರುದ್ಧ 22ನೇ ವಾರ್ಡ್‌ ನಿವಾಸಿಗಳ ದೂರು: ಖಾಸಗಿ ಟ್ಯಾಂಕರ್‌ಗಳಿಗೆ ಮೊರೆ!

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2015, 10:13 IST
Last Updated 4 ಸೆಪ್ಟೆಂಬರ್ 2015, 10:13 IST

ವಿಜಯಪುರ: ‘ಪುರಸಭೆಯು ಕೆಲವು ವಾರ್ಡ್‌ಗಳಿಗೆ ನೀರು ಸರಬರಾಜು ಮಾಡುವಲ್ಲಿ ತಾರತಮ್ಯ ಎಸಗುತ್ತಿದೆ’ ಎಂದು ಇಲ್ಲಿನ 22ನೇವಾರ್ಡ್ ಬಸವನಕುಂಟೆ ಕಾಲೋನಿ ನಿವಾಸಿಗಳು ದೂರಿದರು.

‘ವಾರ್ಡ್‌ಗೆ 20 ದಿನಗಳಿಗೊಮ್ಮೆ ನೀರು ಬರುತ್ತದೆ. ಒಂದು ಕೊಳಾಯಿಯಲ್ಲಿ 8 ಮನೆಯವರು ನೀರು ಹಿಡಿಯಬೇಕು. ಒಂದೊಂದು ಮನೆಗೆ 8ರಿಂದ 10 ಬಿಂದಿಗೆ ನೀರು ಮಾತ್ರ ಸಿಗುತ್ತದೆ. ಇದೇ ನೀರನ್ನು 20 ದಿನಗಳು ಬಳಕೆ ಮಾಡಬೇಕಾದ ಪರಿಸ್ಥಿತಿ ವಾರ್ಡ್‌ನಲ್ಲಿದೆ ’ ಎಂದು ಸ್ಥಳೀಯ ನಿವಾಸಿ ಮುನಿಯಮ್ಮ ಹೇಳಿದರು.

‘ನೀರಿನ ಅಭಾವದಿಂದಾಗಿ ಮಕ್ಕಳನ್ನು ಶುಭ್ರವಾಗಿ ಶಾಲೆಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲ. ದನಕರುಗಳಿಗೆ ನೀರಿಲ್ಲ, ವಾರಕ್ಕೊಮ್ಮೆ 50 ಮನೆಗಳಿಗೆ ಒಂದರಂತೆ ಟ್ಯಾಂಕರ್ ನೀರು ಒದಗಿಸುತ್ತಿದ್ದಾರೆ. ವಾರ್ಡ್‌ ನಿವಾಸಿಗಳು ಬಿಂದಿಗೆಗೆ ₨ 2 ರಂತೆ ಹಣ ತೆತ್ತು ಖಾಸಗಿ ಕೊಳವೆ ಬಾವಿಗಳ ಮಾಲೀಕರ ಬಳಿ ನೀರು ಖರೀದಿಸುತ್ತಿದ್ದಾರೆ. ಕೂಲಿ ಮಾಡಿ ಗಳಿಸಿದ ಹಣದಲ್ಲಿ ಸುಮಾರು ಅರ್ಧದಷ್ಟು ನೀರಿಗೆ ವ್ಯಯವಾಗುತ್ತಿದೆ’ ಎಂದರು.

ವಾರ್ಡ್‌ನ ಜನತೆಗೆ ನಿಯಮಿತವಾಗಿ ನೀರು ಸರಬರಾಜು ಮಾಡುವಲ್ಲಿ ಸ್ಥಳೀಯ ವಾರ್ಡ್‌ ಸದಸ್ಯರು ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ ಎಂದು  ದೂರಿದರು.
ಕಳೆದ ತಿಂಗಳು ಪುರಸಭೆಯ ಮುಂದೆ ಇದೇ ವಾರ್ಡ್‌ನ ಮಹಿಳೆಯರು ಪ್ರತಿಭಟನೆ ಮಾಡಿದಾಗ, ಅಧಿಕಾರಿಗಳು ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ಸಮಸ್ಯೆ ಬಗೆಹರಿದಿಲ್ಲ. ಸಮಸ್ಯೆ ಹೀಗೆ ಮುಂದುವರಿದಲ್ಲಿ ಮತ್ತೊಮ್ಮೆ  ವಾರ್ಡ್‌ನ ಎಲ್ಲಾ ಮಹಿಳೆಯರು ಮಕ್ಕಳು ಸೇರಿ ಪುರಸಭೆ ಕಾರ್ಯಾಲಯದ ಮುಂದೆ ಧರಣಿ ಮಾಡುವುದಾಗಿ ಸ್ಥಳೀಯರು ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ಮಾರುತಿಶಂಕರ್ ಮಾತನಾಡಿ, ‘ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿದ್ದು, ಖಾಸಗಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಯಾವುದೇ ವಾರ್ಡ್‌ಗೆ ನೀರಿನ ಸರಬರಾಜಿನಲ್ಲಿ ಕೊರತೆ ಕಂಡು ಬಂದಲ್ಲಿ ಅಂತಹ ವಾರ್ಡ್‌ಗೆ ಹೆಚ್ಚಿನ ಟ್ಯಾಂಕರ್ ಕಳುಹಿಸಿಕೊಡಲಾಗುವುದು’ ಎಂದರು.

ಅಸ್ಪೃಶ್ಯತೆ: ಕೊಳಾಯಿಗಳಲ್ಲಿ ನೀರು ಬರುವಾಗ ಬಿಂದಿಗೆಗಳನ್ನು ಇಟ್ಟು ನಾವು ನೀರು ಹಿಡಿಯುವಂತಿಲ್ಲ. ಸ್ಥಳೀಯ ಕೆಲವು ಮನೆಗಳವರು ನಮ್ಮನ್ನು ದೂರ ನಿಲ್ಲುವಂತೆ ಹೇಳಿ ಅವರೆ ನಮ್ಮ ಬಿಂದಿಗೆಗಳಿಗೆ ನೀರು ಸುರಿಯುತ್ತಾರೆ. ನಮ್ಮನ್ನು ಕೊಳಾಯಿ ಮುಟ್ಟಲೂ ಬಿಡುವುದಿಲ್ಲ. ಕೊಳಾಯಿಗಳ ಬಳಿ ನಮ್ಮ ಬಿಂದಿಗೆಗಳನ್ನು ಇಟ್ಟಲ್ಲಿ ಕಾಲಿನಿಂದ ಒದ್ದು, ಬಿಂದಿಗೆ ಇಟ್ಟಿದ್ದ ಸ್ಥಳವನ್ನು ತೊಳೆದು ಸ್ವಚ್ಛಗೊಳಿಸುತ್ತಾರೆ. ಈ ರೀತಿಯ ಹೇಯ ಘಟನೆಗಳು ಸಾಕಷ್ಟು ಇಲ್ಲಿ ನಡೆಯುತ್ತಿರುತ್ತವೆ ಎಂದು ಹೆಸರು ಹೇಳಲಿಚ್ಛಿಸದ ದಲಿತ ಮಹಿಳೆಯೊಬ್ಬರು ತಿಳಿಸಿದರು.

ಪಟ್ಟಣಗಳಲ್ಲಿಯೂ ದಲಿತರನ್ನು ಪಶುಗಳಂತೆ ಕಾಣುತ್ತಿರುವ ಈ ಪದ್ಧತಿಯ ಬಗ್ಗೆ ತೀವ್ರ ಬೇಸರವನ್ನು ಮಹಿಳೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.