ADVERTISEMENT

‘ನೂರು ದೇಗುಲಕ್ಕಿಂತ ಒಂದು ಆಸ್ಪತ್ರೆ ನಿರ್ಮಿಸಿ’

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2017, 7:32 IST
Last Updated 13 ಏಪ್ರಿಲ್ 2017, 7:32 IST

ದೊಡ್ಡಬಳ್ಳಾಪುರ: ತಾಲ್ಲೂಕು ಕೇಂದ್ರದಲ್ಲಿ ಸುಸಜ್ಜಿತವಾದ ಡಯಾಲಿಸಿಸ್‌ ಆಸ್ಪತ್ರೆ  ಮಾನವೀಯ ಸೇವೆ ನೀಡಲು ಸಜ್ಜಾಗಿರುವುದು ತುಂಬಾ ಸ್ವಾಗತಾರ್ಹ ಕೆಲಸ ಎಂದು ನಿವೃತ್ತ ಜಿಲ್ಲಾಧಿಕಾರಿ ಸಿ.ಸೋಮಶೇಖರ್ ಹೇಳಿದರು.

ಅವರು ದೊಡ್ಡಬಳ್ಳಾಪುರ ಲಯನ್ಸ್ ಚಾರಿಟೀಸ್ ಟ್ರಸ್ಟ್  ಮತ್ತು ಲಯನ್ಸ್ ಕ್ಲಬ್ ಹಾಗೂ ಲಯನೆಸ್ ಕ್ಲಬ್ ವತಿಯಿಂದ ನಡೆದ ದೊಡ್ಡಬಳ್ಳಾಪುರ ಲಯನ್ಸ್ ಟ್ರಸ್ಟ್ ಡಯಾಲಿಸಿಸ್ ಮತ್ತು ಆರೋಗ್ಯ ಕೇಂದ್ರದ ಚಾಲನೆ ಸಮಾರಂಭದಲ್ಲಿ ಮಾತನಾಡಿದರು. ನೂರು ದೇವಾಲಯಗಳ ನಿರ್ಮಾಣಕ್ಕಿಂತ ಬಡವರ ಅನುಕೂಲಕ್ಕಾಗಿ ಒಂದು ಆಸ್ಪತ್ರೆ ನಿರ್ಮಾಣ ಮಾಡುವುದು ಉತ್ತಮ ಕೆಲಸ ಎಂದರು.

ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ. ಹನುಮಂತರಾಯಪ್ಪ ಮಾತ ನಾಡಿ, ಲಯನ್ಸ್ ಕ್ಲಬ್ 1971 ರಿಂದಲೂ ಪ್ರತಿ ತಿಂಗಳು  ಕಣ್ಣಿನ ಉಚಿತ ಶಸ್ತ್ರಚಿಕಿತ್ಸೆ ನಡೆಸಿಕೊಂಡು ಬರುತ್ತಿದ್ದು 52 ಲಯನ್ಸ್ ಕ್ಲಬ್ ಜೋನ್‌ನಲ್ಲಿ ನಮ್ಮದು ಉನ್ನತ ಸ್ಥಾನದಲ್ಲಿದೆ ಎಂದರು.

ಲಯನ್ಸ್ ಅಧ್ಯಕ್ಷ ಹುಲಿಕಲ್ ನಟರಾಜ್ ಮಾತನಾಡಿ, ಆಸ್ಪತ್ರೆ ಅತಿ ಎತ್ತರಕ್ಕೆ ಬೆಳೆಯಲು ಇನ್ನೂ ಅನೇಕ ದಾನಿಗಳ ಸಹಾಯ ಅಗತ್ಯವಿದೆ ಎಂದರು. ಒಂದು ವರ್ಷ ಕಾಲ ಈ ಆಸ್ಪತ್ರೆಯಲ್ಲಿ  ಉಚಿತವಾಗಿ ಸೇವೆ ಮಾಡಲು ಬಂದಿರುವ ದೊಡ್ಡಬಳ್ಳಾಪುರ ಮೂಲದ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯ ವೈದ್ಯ ಡಾ.ಸುದರ್ಶನ್‌ ಭಟ್ ಅವರನ್ನು ಅಭಿನಂದಿಸಲಾಯಿತು.

ನಗರಸಭೆ ಅಧ್ಯಕ್ಷ ಕೆ.ಬಿ.ಮುದ್ದಪ್ಪ, ಲಯನ್ ಎಲ್.ಕೃಷ್ಣಮೂರ್ತಿ, ಜೆ.ರಾಜೇಂದ್ರ, ಆರ್.ವಿ. ಶಿವಣ್ಣ, ಪಿ.ಸಿ. ಪುಟ್ಟರುದ್ರಪ್ಪ ಎ.ವೆಂಕಟೇಶ್, ಎಲ್. ಕೃಷ್ಣಮೂರ್ತಿ,  ಬಿ.ಬಸವರಾಜು, ಎಸ್. ಪ್ರಕಾಶ್‌, ಎಸ್.ನಟರಾಜು, ಪಿ.ಸಿ. ವೆಂಕಟೇಶ್ ಮತ್ತಿತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.