ADVERTISEMENT

ಪ್ರತಿ ಬೆಳೆಗೂ ವಿಮೆ ಮಾಡಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2017, 10:35 IST
Last Updated 3 ಜುಲೈ 2017, 10:35 IST

ದೇವನಹಳ್ಳಿ: ‘ಸತತ ನಾಲ್ಕನೇ ವರ್ಷದಲ್ಲಿಯೂ ಮುಂಗಾರು ಹಂಗಾಮ ಕ್ಷೀಣಿಸುವ ಲಕ್ಷಣ ಕಾಣಿಸುತ್ತಿದ್ದು ಜಿಲ್ಲೆಯಾದ್ಯಂತ ರೈತರು ತಮ್ಮ ಕೃಷಿ ಉತ್ಪನ್ನ ಬೆಳೆಗೆ  ವಿಮೆಗೆ ನೋಂದಾಯಿಸಿಕೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಬಸವರಾಜ್‌ ತಿಳಿಸಿದರು.

ದೇವನಹಳ್ಳಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಮಟ್ಟದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಇಲಾಖೆವಾರು ಪ್ರಗತಿ ಪರಿಶೀಲನೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ರೈತರಿಗೆ ಮೊದಲು ಯಾವ ಬೆಳೆಗೆ ಎಷ್ಟು ವಿಮೆ ಕಂತು ಪಾವತಿಸಿದರೆ ಪರಿಹಾರ ಎಂಬುದನ್ನು ಮಾಹಿತಿ ನೀಡುವ ಮೂಲಕ ಬೆಳೆ ನಷ್ಟದಿಂದ ಪಾರು ಮಾಡಬೇಕಾದ ಗುರುತರ ಜವಾಬ್ದಾರಿ ಇದೆ ಎಂದರು.

ADVERTISEMENT

ಜಿಲ್ಲೆಯಲ್ಲಿ 934 ರೈತರು ಮಾತ್ರ ಬೆಳೆ ವಿಮೆಗೆ ನೋಂದಾಯಿಸಿದ್ದಾರೆ. ₹ 1.5 ಕೋಟಿ ಬೆಳೆ ವಿಮೆಗೆ ದೊರೆಯುವ ನಿರೀಕ್ಷೆಯಿದ್ದು ಈಗಾಗಲೇ ₹ 65 ಲಕ್ಷ ಬೆಳೆ ವಿಮೆ ಬಿಡುಗಡೆಯಾಗಿದೆ ಎಂದು ತಿಳಿಸಲಾಯಿತು.

ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ 2,040 ಕೃಷಿ ಹೊಂಡ ನಿರ್ಮಿಸುವ ಗುರಿ ನಿಗದಿಪಡಿಸಲಾಗಿದೆ. ಈಗಾಗಲೇ 958 ಪೂರ್ಣಗೊಂಡಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕನಿಷ್ಠ 1,800 ತೋಟಗಾರಿಕಾ ಬೆಳೆಗಾರರಿಗೆ  ಹವಾಮಾನ ಆಧಾರಿತ ಬೆಳೆ ವಿಮೆ ನೀಡಲು ಉದ್ದೇಶಿಸಲಾಗಿದೆ. ಈವರೆಗೆ 150 ರೈತರನ್ನು ಮಾತ್ರ ಗುರುತಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚೆ ನಡೆಸಿದ ಬಸವರಾಜ್ ಅವರು, 22 ಓವರ್‌ಹೆಡ್‌ ಟ್ಯಾಂಕ್‌ ನಿರ್ಮಾಣದ ಪೈಕಿ ಕೇವಲ ಎರಡನ್ನು ಮಾತ್ರ ಪೂರ್ಣಗೊಳಿಸಲಾಗಿದೆ. ಕುಡಿಯುವ ನೀರಿನಂತಹ ಗಂಭೀರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಎಸ್‌.ಪಾಲಯ್ಯ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿ ಪರಿಣಮಿಸಿತ್ತು. ಸದ್ಯ ಇತ್ಯರ್ಥಪಡಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ 567 ಹೆಕ್ಟೇರ್‌ನಲ್ಲಿ 1.6 ಲಕ್ಷ ಸಸಿ ನೆಡುವ ಗುರಿ ಹೊಂದಲಾಗಿದೆ. ರೈತರಿಗೆ ಸಿಲ್ವರ್‌, ತೇಗ, ನೇರಳೆ, ಹೆಬ್ಬೇವು ಸಸಿ ಬೆಳೆಸಲಾಗಿದೆ ಎಂದು ಅರಣ್ಯ ಸಿಬ್ಬಂದಿ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಂ.ಜಿ. ಶಿವಲಿಂಗಯ್ಯ ಮಾಹಿತಿ ನೀಡಿ, ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ 10.30 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿಸುವ ಗುರಿ ಇದೆ. ಈವರೆಗೂ 2.72 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿಯಾಗಿದೆ ಎಂದರು.

ಪ್ರಸ್ತುತ ವರ್ಷದಲ್ಲಿ 7,100 ಮನೆ ನಿರ್ಮಿಸುವ ಗುರಿ ಇದೆ, ಈಗಾಗಲೇ 826 ಮನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಮುಖ್ಯ ಯೋಜನಾಧಿಕಾರಿ ವಿನುತಾ ರಾಣಿ ತಿಳಿಸಿದರು. ರೈತರಿಗೆ ಮಣ್ಣು ಆರೋಗ್ಯ ಚೀಟಿ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.