ADVERTISEMENT

ಬಗರ್‌ಹುಕುಂ: ಹಕ್ಕುಪತ್ರಕ್ಕೆ ಒತ್ತಾಯ

ರೈತ ಸಂಘದ ಆಗ್ರಹ: ಉಪವಿಭಾಗಾಧಿಕಾರಿಯಿಂದ ತೂಬಗೆರೆ ಹೋಬಳಿಯಲ್ಲಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2015, 10:22 IST
Last Updated 4 ಜುಲೈ 2015, 10:22 IST

ದೊಡ್ಡಬಳ್ಳಾಪುರ: ತೂಬಗೆರೆ ಹೋಬಳಿಯ ಭೂಮೇನಹಳ್ಳಿ, ಕಾವನಹಳ್ಳಿ, ಹಿರೇಮುದ್ದೇನಹಳ್ಳಿ  ಗ್ರಾಮದ ಸುತ್ತ ಬಗರ್‌ಹುಕುಂ ಸಾಗುವಳಿ ಮಾಡಿರುವ ಪ್ರದೇಶಕ್ಕೆ ಉಪವಿಭಾಗಾಧಿಕಾರಿ ಸಿ. ಮಂಜುನಾಥ್‌ ಶುಕ್ರವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ (ಪ್ರೊ.ಎಂ.ಡಿ.ನಂಜುಂಡಸ್ವಾಮಿ ಬಣ) ರಾಜ್ಯ ಸಂಚಾಲಕ ಕೆಂಪೇಗೌಡ, 1970ಕ್ಕೂ ಹಿಂದಿನಿಂದಲೂ ಸಾಗುವಳಿ ಮಾಡುತ್ತಿದ್ದ ಶೇಕಡ 30ರಷ್ಟು ಜನರಿಗೆ ಹಕ್ಕು ಪತ್ರಗಳನ್ನು ನೀಡಲಾಗಿದೆ.

ಸಹಕಾರ ಸಂಘಗಳಿಂದ ಇದೇ ಭೂಮಿಯನ್ನು ಆಧಾರ ಮಾಡಿ ರೈತರು ಸಾಲವನ್ನು ಪಡೆದಿದ್ದಾರೆ. ಇನ್ನು ನೂರಾರು ಜನ ಉಳುಮೆ ಮಾಡುತ್ತಿರುವ ರೈತರಿಗೆ ಹಕ್ಕು ಪತ್ರಗಳನ್ನು ನೀಡಿಲ್ಲ. ತೂಬಗೆರೆ ಹೋಬಳಿಯ ಎಸ್‌.ಎಸ್‌.ಘಾಟಿ ಸುತ್ತಲಿನ ನೂರಾರು ಎಕರೆ ಭೂಮಿಯನ್ನು ರೆಸಾರ್ಟ್‌ಗಳ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದಾರೆ. ನಂದಿ ಬೆಟ್ಟದ ತಪ್ಪಲಿನ ಅರಣ್ಯ ಭೂಮಿಯಲ್ಲಿಯೇ  ಫ್ಲಾಟ್‌ಗಳು, ಮಹಲ್‌ಗಳನ್ನು ನಿರ್ಮಿಸಿಕೊಂಡು ಕಾಲುಭಾಗ ಬೆಟ್ಟಕ್ಕೆ ಗೋಡೆಗಳನ್ನು ನಿರ್ಮಿಸಿಕೊಂಡಿದ್ದಾರೆ.

ಇಂತಹ ದೊಡ್ಡ ಶ್ರೀಮಂತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಾಣುತ್ತಲೇ ಇಲ್ಲ. ಅರ್ಧ ಎಕರೆ ಭೂಮಿ ಉಳುಮೆ ಮಾಡಿಕೊಂಡು ಜೀವನ ಮಾಡುತ್ತಿರುವ ರೈತರನ್ನು ಮಾತ್ರ ಅರಣ್ಯ ಇಲಾಖೆ ಅಧಿಕಾರಿಗಳು ಒಕ್ಕಲೆಬ್ಬಿಸಲು ಮುಂದಾಗಿರುವುದು ಅವೈಜ್ಞಾನಿಕ ನಿರ್ಧಾರ. ಜಿಲ್ಲಾಧಿಕಾರಿಗಳು ಸೂಕ್ತ ನಿರ್ಧಾರ ಕೈಗೊಂಡು ಹಕ್ಕು ಪತ್ರಗಳನ್ನು ನೀಡಬೇಕು ಇಲ್ಲವಾದರೆ ಬುಧವಾರದಿಂದ ತಾಲ್ಲೂಕು ಕಚೇರಿ ಮುಂದೆ ದನಕರುಗಳೊಂದಿಗೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ (ಪ್ರೊ.ಎಂ.ಡಿ.ನಂಜುಂಡಸ್ವಾಮಿ ಬಣ)ಸಂಚಾಲಕರಾದ ಅಧ್ಯಕ್ಷ ಡಾ.ಸಿ.ಎಸ್‌. ಶ್ರೀನಿವಾಸ್‌, ಬ್ಯಾಡರಹಳ್ಳಿ ನಟರಾಜ್, ಕೆಂಪೇಗೌಡ, ಲೋಕೇಶ್, ವಿಶ್ವಾರಾಧ್ಯ, ಮಂಜಣ್ಣ  ಹಾಜರಿದ್ದರು.

ಸೋಮವಾರದಿಂದ ಅರಣ್ಯ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೇ ನಡೆಸಲಾಗುವುದು. ಇದರಲ್ಲಿ ಅರಣ್ಯ  ಭೂಮಿ ಒತ್ತುವರಿ ಆಗಿದೆಯೇ ಇಲ್ಲವೇ ಎನ್ನುವುದು ತಿಳಿಯಲಿದೆ
ಸಿ. ಮಂಜುನಾಥ್‌,
 ಉಪವಿಭಾಗಾಧಿಕಾರಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.