ADVERTISEMENT

ಬನ್ನೇರುಘಟ್ಟ: ಬಿಳಿ ಹುಲಿ ಸಾವು

ಜೈವಿಕ ಉದ್ಯಾನದಲ್ಲಿ ಹುಲಿಗಳ ದಾಳಿಯಿಂದ ಗಾಯ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 5:20 IST
Last Updated 22 ಸೆಪ್ಟೆಂಬರ್ 2017, 5:20 IST
ರಾಯಲ್ ಬೆಂಗಾಲ್ ಹುಲಿಗಳ ದಾಳಿಯಿಂದ ಮೃತಪಟ್ಟ ಬಿಳಿ ಹುಲಿ ಶ್ರೇಯಸ್
ರಾಯಲ್ ಬೆಂಗಾಲ್ ಹುಲಿಗಳ ದಾಳಿಯಿಂದ ಮೃತಪಟ್ಟ ಬಿಳಿ ಹುಲಿ ಶ್ರೇಯಸ್   

ಆನೇಕಲ್‌: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ರಾಯಲ್ ಬೆಂಗಾಲ್ ಹುಲಿಗಳ ದಾಳಿಯಿಂದ ಗಾಯಗೊಂಡಿದ್ದ 9 ವರ್ಷದ ‘ಶ್ರೇಯಸ್’ ಎಂಬ ಬಿಳಿ ಹುಲಿ ಬುಧವಾರ ರಾತ್ರಿ ಮೃತಪಟ್ಟಿದೆ.

2008ರ ಜನವರಿ 24ರಂದು ಇದೇ ಉದ್ಯಾನದಲ್ಲಿ ಜನಿಸಿದ್ದ ಬಿಳಿಹುಲಿಯ ಮೇಲೆ ಇದೇ 17 ರಂದು ಮೂರು ರಾಯಲ್ ಬೆಂಗಾಲ್ ಹುಲಿಗಳು ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿದ್ದವು.

ಕಾವಲು ಸಿಬ್ಬಂದಿಯ ನಿರ್ಲಕ್ಷ್ಯದಿಂದ ಬಿಳಿಹುಲಿ ತಾನು ವಿಹರಿಸುತ್ತಿದ್ದ ಆವರಣದಿಂದ ರಾಯಲ್ ಬೆಂಗಾಲ್ ಹುಲಿಗಳಿದ್ದ ಆವರಣದತ್ತ ಅಕಸ್ಮಿಕವಾಗಿ ಬಂದಿತ್ತು. ಈ ವೇಳೆ ರೋಷಗೊಂಡ ಮೂರು ಹುಲಿಗಳು ತೀವ್ರವಾಗಿ ದಾಳಿ ನಡೆಸಿದ್ದವು. ಇದರಿಂದ ದೇಹದ ಮೇಲೆ ಹಾಗೂ ಬೆನ್ನು ಹುರಿಗೆ ಆಗಿದ್ದ ತೀವ್ರ ಸ್ವರೂಪದ ಗಾಯಗಳಿಂದ ಬಿಳಿ ಹುಲಿ ಅಸ್ವಸ್ಥಗೊಂಡಿತ್ತು.

ADVERTISEMENT

ಉದ್ಯಾನದ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ್ದರು. ನಂತರ ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನಿಂದ ತಜ್ಞ ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆರಂಭದಲ್ಲಿ ಚೇತರಿಸಿದಂತೆ ಕಂಡು ಬಂದ ಅದು ಆಹಾರ ಸೇವಿಸಲು ಆರಂಭಿಸಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸಂತೋಷ್‌ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.