ADVERTISEMENT

ಬಿಗಿಭದ್ರತೆಯಲ್ಲಿ 3 ಅಕ್ರಮ ಮನೆ ತೆರವು

ಉಪವಿಭಾಗಾಧಿಕಾರಿ ಜಗದೀಶ್ ನೇತೃತ್ವದಲ್ಲಿ ಭಾರಿ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 6 ಮೇ 2017, 8:34 IST
Last Updated 6 ಮೇ 2017, 8:34 IST
ದೇವನಹಳ್ಳಿಯ ಡಾ. ಬಿ.ಆರ್.ಅಂಬೇಡ್ಕರ್ ಭವನದ ಹಿಂಭಾಗದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಲಾಗಿದ್ದ ಮೂರು ಮನೆಗಳನ್ನು ಜೆಸಿಬಿ ಯಂತ್ರದ ಮೂಲಕ   ತೆರವುಗೊಳಿಸಲಾಯಿತು
ದೇವನಹಳ್ಳಿಯ ಡಾ. ಬಿ.ಆರ್.ಅಂಬೇಡ್ಕರ್ ಭವನದ ಹಿಂಭಾಗದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಲಾಗಿದ್ದ ಮೂರು ಮನೆಗಳನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಲಾಯಿತು   

ದೇವನಹಳ್ಳಿ: ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಭವನ ಹಿಂಭಾಗದಲ್ಲಿ ಆಕ್ರಮವಾಗಿ ನಿರ್ಮಾಣ ಮಾಡಲಾಗಿದ್ದ ಮೂರು ಮನೆಗಳನ್ನು ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಭಾರಿ ಭದ್ರತೆಯೊಂದಿಗೆ  ತೆರವುಗೊಳಿಸಲಾಯಿತು.

ಈ ಕುರಿತು ಮಾತನಾಡಿದ ಉಪವಿಭಾಗಾಧಿಕಾರಿ ಜಗದೀಶ್, ಕಳೆದ ಐದಾರು ವರ್ಷಗಳಿಂದ ಪ್ರಸ್ತುತ ನೂತನವಾಗಿ ನಿರ್ಮಾಣ ಮಾಡಿರುವ ಡಾ.ಅಂಬೇಡ್ಕರ್ ಭವನ ನಿವೇಶನದ ಸ. ನಂ.323ರ ಪೈಕಿ ಒಂದು ಎಕರೆ ಜಾಗ ಸರ್ಕಾರದಿಂದ ಮಂಜೂರು ಆಗಿದೆ.

ಈ ಭವನದ ಹಿಂಭಾಗದಲ್ಲಿ ಲಕ್ಷ್ಮಮ್ಮ ಮತ್ತು ಮಕ್ಕಳಾದ ಕೃಷ್ಣಪ್ಪ, ಸರಸಮ್ಮ ಮತ್ತು ಪ್ರಕಾಶ್ ಎಂಬುವರು ಮೂರು ಹೆಂಚು ಮತ್ತು ಶೀಟ್ ಮನೆ ನಿರ್ಮಾಣ ಮಾಡಿಕೊಂಡು ಅನೇಕ ವರ್ಷಗಳಿಂದ ವಾಸವಾಗಿದ್ದಾರೆ. ಕಂದಾಯ ಇಲಾಖೆ ಅಥವಾ ಪುರಸಭೆ ವತಿಯಿಂದ ಯಾವುದೇ ಅಧಿಕೃತ ದಾಖಲೆ ಪಡೆದಿಲ್ಲ ಎಂದರು.

ಸಮರ್ಪಕ ದಾಖಲಾತಿ ನ್ಯಾಯಾಲಯಕ್ಕೆ ಒದಗಿಸಿದ್ದರಿಂದ ನ್ಯಾಯಾಲಯ ತಹಶೀಲ್ದಾರ್ ನೇತೃತ್ವದಲ್ಲಿ ಸಮಿತಿ ರಚಿಸಿ ಎಲ್ಲಿಯಾದರು ಮಾನವಿಯತೆ ದೃಷ್ಟಿಯಿಂದ ಬದಲಿ ಪರ್ಯಾಯ ವ್ಯವಸ್ಥೆ ಮಾಡಬಹುದೇ ಎಂದು  ಕೇಳಿತ್ತು ಎಂದರು.

ತಹಶೀಲ್ದಾರ್ ಜಿ.ವಿ. ನಾರಾಯಣಸ್ವಾಮಿ ಮಾತನಾಡಿ, ಸಮಿತಿಯ ನಡಾವಳಿಯೊಂದಿಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಲಾಗಿದೆ. ವಿನಾಯಕ ನಗರ ಬಡಾವಣೆಯಲ್ಲಿ 50 ಮತ್ತು 26ಅಡಿ ಅಳತೆ ಜಾಗ ಮತ್ತು ಸೌತೆಗೊಂಡನಹಳ್ಳಿ ಬಡಾವಣೆ ಎರಡು ಕಡೆ ಜಾಗ ತೋರಿಸಲಾಗಿದ್ದರೂ ಅದನ್ನು ತಿರಸ್ಕರಿಸಿದ್ದಾರೆ ಎಂದು ವಿವರಿಸಿದರು.

ಇದನ್ನು ನ್ಯಾಯಾಲಯಕ್ಕೆ ತಿಳಿಸಲಾಗಿದೆ. ಮೂರು ದಿನಗಳ ಗಡುವು ನೀಡಿ ಮುಂದಿನ ಆದೇಶವರೆಗೂ  ಬೇರೆಡೆ ವಾಸವಿರಲು ವ್ಯವಸ್ಥೆ ಮಾಡಿಕೊಳ್ಳುವಂತೆ ಅನುಮತಿ ನೀಡಿದೆ ಎಂದರು.

ಪುರಸಭೆ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಕಟ್ಟಿದ ಮನೆ ನೆಲಸಮ ಮಾಡುವುದು ಬೇಸರದ ವಿಷಯ, ವಾಸ್ತು ಪ್ರಕಾರ ನಿವೇಶನ ನೀಡಬೇಕೆಂದರೆ ಹೇಗೆ? ಶತ ಪ್ರಯತ್ನ ಮಾಡಿದರೂ  ಪಟ್ಟು ಸಡಿಲಿಸಲಿಲ್ಲ, ನ್ಯಾಯಾಲಯದ ಆದೇಶಕ್ಕೆ ತಲೆಬಾಗಲೇಬೇಕು ಎಂದರು.

ನೊಂದ ಮಹಿಳೆ ಲಕ್ಷ್ಮಿ ಮಾತನಾಡಿ ಕೋರ್ಟ್ ಈರೀತಿ ಮಾಡುತ್ತೆ ಎಂದು ಗೊತ್ತಿರಲಿಲ್ಲ, ಅಧಿಕಾರಿಗಳು ಬೀದಿಗೆ ತಳ್ಳುವ ಕೆಲಸ ಮಾಡಿದ್ದಾರೆ. ಅವರಿಗೆ ಪುಣ್ಯ ಬರಲಿ ಎಂದು ಬೇಸರ ಸೂಚಿಸಿದರು.

ತೆರವು ಕಾರ್ಯಚರಣೆ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚೆನ್ನಬಸಪ್ಪ, ಎ.ಸಿ.ಪಿ. ಪ್ರಸಾದ್, ಪೊಲೀಸ್ ಇನ್‌ಸ್ಪೆಕ್ಟರ್ ಪಿ.ಶಿವಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ಅಂಭಿಕಾ ಉಪಸ್ಥಿತರಿದ್ದರು.

*
ತೆರವುಗೊಳಿಸಿ ಬೇರೆಡೆ ನಿವೇಶನದ ವ್ಯವಸ್ಥೆ ಮಾಡುತ್ತೇವೆ ಎಂದು ಎರಡು ವರ್ಷಗಳಿಂದ ಮನವಿ ಮಾಡಿ ದರೂ ಸೊಪ್ಪು ಹಾಕಲಿಲ್ಲ, ಅಕ್ರಮವಾಗಿ ವಾಸಿಸುತ್ತಿದ್ದವರೇ ಹೈಕೋರ್ಟ್ ಗೆ ಪ್ರಕರಣ ದಾಖಲಿಸಿದ್ದರು.
-ಜಗದೀಶ್, ಉಪವಿಭಾಗಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT