ADVERTISEMENT

ಬೆಸ್ಕಾಂ ಧೋರಣೆ ವಿರುದ್ಧ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2017, 10:03 IST
Last Updated 6 ಜುಲೈ 2017, 10:03 IST

ದೊಡ್ಡಬಳ್ಳಾಪುರ: ‘ಪ್ರತಿ ಬುಧವಾರ ಗ್ರಾಮಾಂತರ ಪ್ರದೇಶಕ್ಕೆ ವಿದ್ಯುತ್ ಕಡಿತ ಮಾಡಿ ಕೃಷಿ ವಲಯಕ್ಕೆ ಅಘೋಷಿತ ರಜೆ ಘೋಷಣೆ ಮಾಡಿರುವ ಬೆಸ್ಕಾಂ ನಿರ್ಧಾರ ಅವ್ಶೆಜ್ಞಾನಿಕವಾಗಿದೆ’ ಎಂದು  ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ  ರೈತರು ಬೆಸ್ಕಾಂ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಪ್ರಸನ್ನ, ಮುಖಂಡರಾದ ರವಿಕುಮಾರ್, ಪ್ರತಿ ಬುಧವಾರ ಗ್ರಾಮಾಂತರ ಪ್ರದೇಶಕ್ಕೆ ವಿದ್ಯುತ್ ಕಡಿತ ಮಾಡಿ ಕೃಷಿ ವಲಯಕ್ಕೆ ಅಘೋಷಿತ ರಜೆ ಘೋಷಣೆ ಮಾಡಿರುವ ಬೆಸ್ಕಾಂ ನಿರ್ಧಾರ ಅವ್ಶೆಜ್ಞಾನಿಕವಾಗಿದೆ ಎಂದರು.

‘ಕೃಷಿ ವಲಯಕ್ಕೆ ಬೆಸ್ಕಾಂ ರಜೆ ನೀಡಲು ಹೊರಟಿರುವುದು ತಲೆ ತಗ್ಗಿ ಸುವ ಕೆಲಸ ಎನಿಸಿದೆ. ಪ್ರತಿದಿನ ನೀಡುವ  5 ರಿಂದ 6 ಗಂಟೆಗಳಲ್ಲಿ ಗಾಳಿ ಮಳೆಗೆ ಅಲ್ಲಿ ಇಲ್ಲಿ ಸಮಸ್ಯೆ ಎಂದೇ ಬಹುತೇಕ ವಿದ್ಯುತ್ ಕಡಿತ ಮಾಡುವ ಇವರು ಅದರಲ್ಲಿ 1ರಿಂದ 2 ಗಂಟೆಗಳ ಕಾಲ ವಿದ್ಯುತ್ ಕಡಿತ ಮಾಡುತ್ತಾರೆ’ ಎಂದು ಹೇಳಿದರು.

ADVERTISEMENT

ತಾಲ್ಲೂಕಿನಲ್ಲಿ ಒಂದು ಪ್ರದೇಶದಲ್ಲಿ ಇದ್ದಂತೆ ಇನ್ನೊಂದು ಕಡೆ ಇರದೇ ತಾರತಮ್ಯ ಮಾಡಲಾಗುತ್ತಿದೆ. ಆದರೆ ಕೈಗಾರಿಕಾ ಪ್ರದೇಶಗಳಿಗೆ ಮಾತ್ರ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ನಮಗೂ ಹಗಲು ವೇಳೆ ವಿದ್ಯುತ್ ನೀಡಬೇಕು. ಇದಲ್ಲದೇ ಸಾಸಲು ಹೋಬಳಿಯಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ ಎಂದರು.

ಟ್ರಾನ್ಸ್‌ಫಾರ್ಮರ್‌ಗಳು ರಿಪೇರಿಯಾ ದರೆ ವಾರಗಳಾದರೂ ಸರಿಪಡಿಸುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮಾಡಿದರೆ ಸ್ಪಂಧಿಸುತ್ತಿಲ್ಲ. ರೈತರು ಎಂದರೆ ಇಲಾಖೆಗೆ ಅಸಡ್ಡೆ ಯಾಗಿದೆ ಎಂದು ನೆರೆದಿದ್ದ ರೈತ ಮುಖಂಡರು ದೂರಿದರು.

ಬೆಸ್ಕಾಂ ಸಹಾಯಕ ಎಂಜಿನಿಯರ್  ಆರ್. ಸುಂದರೇಶ್‌ ನಾಯಕ್ ಈ ಕುರಿತು ಪ್ರತಿಕ್ರಿಯಿಸಿ, ಬೇಸಿಗೆ ಕಾಲದಲ್ಲಿ ಲೋಡ್ ಶೆಡ್ಡಿಂಗ್ ಅನಿವಾರ್ಯವಾಗಿದ್ದರಿಂದ, 7 ವೃತ್ತಗಳ ವಿದ್ಯುತ್ ಸರಬರಾಜು ಕೇಂದ್ರಗಳಲ್ಲಿ ಸರದಿಯಂತೆ ಒಂದು ದಿನ ರಜೆ ಘೋಷಣೆ ಮಾಡಲಾಗಿತ್ತು. ಈಗ ವಿದ್ಯುತ್ ಸರಬರಾಜು ಆಗುತ್ತಿರುವುದರಿಂದ ಇನ್ನು ಮುಂದೆ ವಾರದ ರಜೆ ನೀಡುವುದನ್ನು ಕೈಬಿಡಲಾಗಿದೆ ಎಂದರು.

ಸಾಸಲು ಹೋಬಳಿಯಲ್ಲಿ ವಿದ್ಯುತ್ ಸರಬರಾಜು ಕೇಂದ್ರ ನಿರ್ಮಾಣಕ್ಕೆ ಅಗತ್ಯ ಸಿದ್ದತೆಗಳು ನಡೆದಿದ್ದು, ಇದು ಪೂರ್ತಿಯಾದರೆ ಇಲ್ಲಿನ ಸಮಸ್ಯೆಗಳು ಬಹುತೇಕ ಬಗೆಹರಿಯುತ್ತವೆ ಎಂದರು. ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಆರ್.ಸತೀಶ್, ಮುಖಂಡರಾದ ವಾಸು, ವಸಂತ್‌ಕುಮಾರ್, ನಾರಾಯಣಸ್ವಾಮಿ ಹಾಜರಿದ್ದರು.

* * 

ವಿದ್ಯುತ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ತಿಂಗಳ 3ನೇ ಶನಿವಾರ ಕಚೇರಿಯಲ್ಲಿ ಸಾರ್ವಜನಿಕ ಕುಂದು ಕೊರತೆಗಳ ಸಭೆ ನಡೆಯಲಿದೆ. ಸಾರ್ವಜನಿಕರು ಪರಿಹರಿಸಿಕೊಳ್ಳಬೇಕು
ಸುಂದರೇಶ್ ನಾಯಕ್‌,
ಬೆಸ್ಕಾಂ ಸಹಾಯಕ ಎಂಜಿನಿಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.