ADVERTISEMENT

ಬೇಸಿಗೆಗೂ ಮುನ್ನ ನೀರು, ಮೇವಿಗೂ ಹಾಹಾಕಾರ

ದೇವನಹಳ್ಳಿ ತಾಲ್ಲೂಕಿನಲ್ಲಿ ಇಂದು ಬಿಎಸ್‌ವೈ ತಂಡದಿಂದ ಬರ ಅಧ್ಯಯನ

​ಪ್ರಜಾವಾಣಿ ವಾರ್ತೆ
Published 2 ಜನವರಿ 2017, 11:45 IST
Last Updated 2 ಜನವರಿ 2017, 11:45 IST

ದೇವನಹಳ್ಳಿ : ಇದೇ 2  ರಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ತಂಡ ಬರ ಅಧ್ಯಯನಕ್ಕಾಗಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿ ಪರಿಶೀಲನೆ ನಡೆಸಲಿದ್ದಾರೆ ಎಂದು ಮಾಜಿ ಶಾಸಕ ಜಿ.ಚಂದ್ರಣ್ಣ ತಿಳಿಸಿದರು.

ದೇವನಹಳ್ಳಿ ಪ್ರವಾಸಿ ಮಂದಿರದಲ್ಲಿ ನಡೆದ ಬಿಜೆಪಿ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಡುಗುವ ದೈನಂದಿನ ಚಳಿಯಲ್ಲೂ ಕುಡಿಯಲು ನೀರು, ಪಶು ಮೇವಿನ ಕೊರತೆ ತೀವ್ರವಾಗಿ ಇದೆ. ಬೇಸಿಗೆಯಲ್ಲಿ ಯಾವ ಪರಿಸ್ಥಿತಿ ಇರಲಿದೆ ಎನ್ನುವುದು ಈಗಲೇ ಹೇಳಲಿಕ್ಕಾಗದು, ಬರ ಘೋಷಣೆ ಮಾಡಿರುವ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ದೂರಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ನಾಗೇಶ್‌ ಮಾತನಾಡಿ, ರಾಜ್ಯ ಸರ್ಕಾರ ಕೃಷಿ ಬೆಳೆ ನಷ್ಟ ಪರಿಹಾರಕ್ಕಾಗಿ ಪ್ರತಿ ಒಂದು ಗುಂಟೆಗೆ ₹ 65 ನಿಗದಿಪಡಿಸಿದೆ. ಇದು ಯಾವುದಕ್ಕೆ ಸಾಲುತ್ತೆ, ಜಿಲ್ಲೆಯಲ್ಲಿ 11 ಸಾವಿರ ಬೆಳೆ ನಷ್ಟ ರೈತ ಫಲಾನುಭವಿಗಳೆಂದು ಕೃಷಿ ಇಲಾಖೆ ಸರ್ಕಾರಕ್ಕೆ ಮನವಿ ಮಾಡಿ ₹ 4 ಕೋಟಿ ಪರಿಹಾರಕ್ಕೆ ಶಿಫಾರಸು ಮಾಡಿದೆ.

ಈವರೆಗೂ ರೈತರಿಗೆ ಬಿಡಿಗಾಸು  ತಲುಪಿಲ್ಲ ಎಂದರು.ಬರ ನಿರ್ವಹಣೆಗಾಗಿ ತಾಲ್ಲೂಕಿನ ಪೂಜನಹಳ್ಳಿ ಬಳಿ ಮೂರು ತಿಂಗಳ ಹಿಂದೆ ₹ 8.60 ಲಕ್ಷ ವೆಚ್ಚದಲ್ಲಿ ಖರೀದಿಸಲಾಗಿದ್ದ ಪಶು ಮೇವು ಕಳಪೆಯಾಗಿದೆ. ಕೇಂದ್ರ ಬರ ಅಧ್ಯಯನ ತಂಡ ಬಂದಿದ್ದು ಹೊರತು ಪಡಿಸಿದರೆ ರಾಜ್ಯ ಸರ್ಕಾರ ಇತ್ತ ತಿರುಗಿ ನೋಡಿಲ್ಲ ಎಂದು ದೂರಿದರು.

ಬಿಜೆಪಿ ರಾಷ್ಟ್ರೀಯ ಪರಿಷತ್‌ ಸದಸ್ಯ ಎ.ಸಿ.ಗುರುಸ್ವಾಮಿ, ರಾಜ್ಯ ಮುಖಂಡ ನಾರಾಯಣಗೌಡ, ಜಿ.ಪಂ. ಮಾಜಿ ಅಧ್ಯಕ್ಷ ಬಿ.ರಾಜಣ್ಣ, ಉಪಾಧ್ಯಕ್ಷ ಎಚ್‌.ಎಂ.ರವಿಕುಮಾರ್‌, ತಾಲ್ಲೂಕು ಬಿಜೆಪಿ ಅಧ್ಯಕ್ಷ ನಾಗರಾಜ್‌ಗೌಡ, ಪ್ರಧಾನ ಕಾರ್ಯದರ್ಶಿ ಸುನಿಲ್‌, ಟೌನ್‌ ಅಧ್ಯಕ್ಷ ರಮೇಶ್‌ ಕುಮಾರ್‌, ಕೇಶವ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT