ADVERTISEMENT

‘ಮಕ್ಕಳನ್ನೇ ಸಮಾಜದ ಆಸ್ತಿಯನ್ನಾಗಿಸಿ’

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2017, 6:05 IST
Last Updated 10 ಏಪ್ರಿಲ್ 2017, 6:05 IST

ಆನೇಕಲ್‌: ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕೆ ಬದಲಾಗಿ ಮಕ್ಕಳನ್ನೇ ದೇಶದ ಸಮಾಜದ ಆಸ್ತಿಯನ್ನಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗೆ ಸಂಸ್ಕಾರ ನೀಡಿ ಬೆಳೆಸಬೇಕು ಎಂದು ಮಂಗಳೂರು ಸನಾತನ ನಾಟ್ಯಾಲಯ ಸಂಸ್ಥೆಯ ಆದರ್ಶ ಗೋಖಲೆ ತಿಳಿಸಿದರು.

ಅವರು ಪಟ್ಟಣದ ಶ್ರೀರಾಮ ಕುಟೀರದಲ್ಲಿ ಶ್ರೀರಾಮ ಸೇವಾ ಸಮಿತಿ ಟ್ರಸ್‌್್ಟ ವತಿಯಿಂದ ಆಯೋಜಿಸಿದ್ದ ಶ್ರೀರಾಮ ನವಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಭಾರತೀಯ ಪರಂಪರೆಯಲ್ಲಿ ಮೌಲ್ಯಗಳಿಗೆ ಅತಿ ಹೆಚ್ಚಿನ ಒತ್ತು ನೀಡಲಾಗಿದೆ. ಮಕ್ಕಳಲ್ಲಿ ಸಮಾಜದ ಬಗ್ಗೆ ಕಳಕಳಿ, ಕಾಳಜಿ, ದೇಶದ ಬಗ್ಗೆ ಗೌರವ, ದೇಶಪ್ರೇಮದಂತಹ ಗುಣಗಳನ್ನು ಚಿಕ್ಕ ವಯಸ್ಸಿನಿಂದಲೂ ಬೆಳೆಸಬೇಕು. ಶಾಲೆಗಳಲ್ಲಿ ಕೇವಲ ಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡದೇ ಮೌಲ್ಯಗಳಿಗೂ ಆದ್ಯತೆ ನೀಡಬೇಕು. ಇದರಿಂದ ಭವ್ಯ ಭಾರತದ ನಿರ್ಮಾಣಕ್ಕೆ ಕೊಡುಗೆ ಸಲ್ಲಿಸಿದಂತಾಗುತ್ತದೆ ಎಂದರು.

ದೇಶಭಕ್ತರು, ಪುರಾಣ ಪುಣ್ಯ ಕಥೆಗಳ ಬಗ್ಗೆ ಹಾಗೂ ದೇಶಕ್ಕಾಗಿ ಬಲಿದಾನ ಮಾಡಿದ ಸೈನಿಕರು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಶಾಲೆಗಳಲ್ಲಿ, ಮನೆಗಳಲ್ಲಿ ಮಕ್ಕಳಿಗೆ ಮಾಹಿತಿ ನೀಡಬೇಕು. ಪೋಷಕರು ತಮ್ಮ ಮಕ್ಕಳು ಸಮಾಜಕ್ಕೆ ಉಪಯುಕ್ತ ವ್ಯಕ್ತಿಗಳಾಗಲಿ ಎಂದೂ ಚಿಂತಿಸಬೇಕು ಎಂದರು.

ಮಂಗಳೂರಿನ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳು ನಡೆಸಿಕೊಟ್ಟ ನಾಟ್ಯ ವೈಭವ ಸಾಂಸ್ಕೃತಿಕ ಕಾರ್ಯಕ್ರಮವು ನೆರೆದಿದ್ದ ಪ್ರೇಕ್ಷಕರಲ್ಲಿ ರೋಮಾಂಚನ ಉಂಟುಮಾಡಿತು. ದೇಶಭಕ್ತಿ ಗೀತೆಗಳು, ಭಾರತೀಯ ಪರಂಪರೆಬಿಂಬಿಸುವ ಶಾಸ್ತ್ರೀಯ ಹಾಗೂ ಜಾನಪದ ಶೈಲಿಯ ವಿನೂತನ ನೃತ್ಯ ಕಾರ್ಯಕ್ರಮ ಕಣ್ಮನ ಸೆಳೆಯಿತು.

ಶ್ರೀರಾಮ ಸೇವಾ ಸಮಿತಿ ಟ್ರಸ್‌್ಟನ ಅಧ್ಯಕ್ಷ ಆರ್.ಪ್ರಕಾಶ್, ಕಾರ್ಯದರ್ಶಿ ಜಿ.ಪೃಥ್ವಿರಾಜ್, ಖಜಾಂಚಿ  ಸುರೇಶ್, ಪದಾಧಿಕಾರಿಗಳಾದ ವಸಂತ್, ಆನಂದ್‌ಕುಮಾರ್, ವಕೀಲ ಎಚ್.ಶ್ರೀನಿವಾಸ್ ಹಾಜರಿದ್ದರು.

ಪಾತ್ರ ನಾದ ವೈಭವ:  ಆನೇಕಲ್ ಶ್ರೀರಾಮ ಕುಟೀರದಲ್ಲಿ ನಡೆಯುತ್ತಿರುವ ಶ್ರೀರಾಮ ನವಮಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಏ.10ರಂದು ರಾತ್ರಿ 7.30ಕ್ಕೆ ಪಾತ್ರ ನಾದವೈಭವ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಷ್ಟ್ರೀಯ ಖ್ಯಾತಿಯ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮಾ ನೇತೃತ್ವದಲ್ಲಿ ವಿವಿಧ ವಾಧ್ಯ ಪರಿಕರಗಳೊಂದಿಗೆ ಲಯ ಲಾವಣ್ಯ ಪಾತ್ರ ನಾದ ಕಾರ್ಯಕ್ರಮ ಏರ್ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.