ADVERTISEMENT

‘ಯುವಕರು ಸಾಹಿತ್ಯ ಪರಂಪರೆ ಉಳಿಸಲಿ’

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2016, 11:21 IST
Last Updated 25 ಅಕ್ಟೋಬರ್ 2016, 11:21 IST

ಆನೇಕಲ್: ಸಾಹಿತ್ಯದ ಪ್ರಮುಖ ಪ್ರಕಾರವಾದ ಭಾವಗೀತೆಗಳಿಗೆ ಶತಮಾನಕ್ಕೂ ಹೆಚ್ಚಿನ ಇತಿಹಾಸವಿದೆ. ಯುವಕರು ಸಾಹಿತ್ಯದ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಳ್ಳುವ ಮೂಲಕ ಸಾಹಿತ್ಯದ ಪರಂಪರೆಯನ್ನು ಉಳಿಸಬೇಕು ಎಂದು ಖ್ಯಾತ ಕವಿ ಡಾ.ಎಚ್.ಎಸ್.ವೆಂಕಟೇಶ್‌ಮೂರ್ತಿ ತಿಳಿಸಿದರು.

ಅವರು ತಾಲ್ಲೂಕಿನ ಅತ್ತಿಬೆಲೆಯಲ್ಲಿ ಗಾಯತ್ರಿ ವಿಪ್ರ ವೃಂದದ ವತಿಯಿಂದ ಆಯೋಜಿಸಿದ್ದ ಭಾವಸಂಗಮ ಗೀತಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶ್ರೇಷ್ಠ ಕವಿಗಳ ಗೀತೆಗಳನ್ನು ಖ್ಯಾತ ಗಾಯಕರು ತಮ್ಮ ಗಾಯನದ ಮೂಲಕ ನಾಡಿಗೆ ಪರಿಚಯಿಸಿದರು. ಈ ಮೂಲಕ ಕವಿಗಳಿಗೂ ಸಹ ಹೆಸರು ತಂದರು. ಸಹೃದಯರು ಪ್ರೋತ್ಸಾಹ ನೀಡುವ ಮೂಲಕ ಗೀತಗಾಯನ ಪರಂಪರೆಯನ್ನು ಉಳಿಸಬೇಕು ಎಂದರು.

ಗರ್ತಿಗೆರೆ ರಾಘಣ್ಣ ಮಾತನಾಡಿ ಗೀತಾಗಾಯನ ಸದಭಿರುಚಿಯ ಸಂಸ್ಕೃತಿ ಪ್ರತೀಕವಾಗಿದೆ. ಸಾಹಿತ್ಯ ಪ್ರೇಮವನ್ನು ಬೆಳೆಸಲು ಉಪಯುಕ್ತ ಸಾಧನವಾಗಿದೆ ಎಂದರು.

ಖ್ಯಾತ ಗಾಯಕರಾದ ಎಂ.ಡಿ.ಪಲ್ಲವಿ, ಸುಪ್ರಿಯ ಆಚಾರ್ಯ, ವಿನಯ್‌ ನಾಡಿಗ್, ಶ್ರೀನಗರ ಉಡುಪ, ನಗರ ಕೃಷ್ಣ, ರಮೇಶ್ ಭಾವಗೀತೆಗಳ ಗಾಯನವನ್ನು ಪ್ರಸ್ತುತ ಪಡಿಸಿದರು.

ಗಾಯತ್ರಿ ವಿಪ್ರ ವೃಂದದ ಗೌರವ ಅಧ್ಯಕ್ಷ ಸೋಮಶೇಖರ್‌ರಾವ್, ಅಧ್ಯಕ್ಷ ಕೃಷ್ಣಮೂರ್ತಿ, ಕಾರ್ಯದರ್ಶಿ ಗುರುರಾಜ್ ಕಳ್ಳಿಹಾಳ್, ಮುಖಂಡರಾದ ಎನ್.ಬಸವರಾಜು, ಪಟಾಪಟ್‌ ರವಿ, ಶ್ರೀನಿವಾಸ್ ಪಟಾಪಟ್, ಮಾಜಿ ರವಿ, ಗೋಪಾಲ್, ಸೂರ್ಯನಾರಾಯಣ್ ಶಾಸ್ತ್ರೀ, ನೆರಳೂರು ಪ್ರಭು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.