ADVERTISEMENT

ರಸ್ತೆಯಲ್ಲೇ ಸಂತೆ: ಸಂಚಾರಕ್ಕೆ ಅಡಚಣೆ

ಮತ್ತೆ ರಸ್ತೆಯಲ್ಲಿ ಅಂಗಡಿ ಹಾಕುವ ವ್ಯಾಪಾರಸ್ಥರು

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 10:05 IST
Last Updated 9 ಜನವರಿ 2017, 10:05 IST
ವಿಜಯಪುರ: ಪಟ್ಟಣದಲ್ಲಿ ನಡೆಯುವ ವಾರದ ಸಂತೆಯಂದು ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಸ್ಥರನ್ನು ಸಂತೆ ಮೈದಾನದ ಒಳಗೆ ಸ್ಥಳಾಂತರ ಮಾಡಲಾಗಿದ್ದು ಈಗ ಮತ್ತೆ ಸಮಸ್ಯೆಯಾಗಿದೆ.
 
ಪಟ್ಟಣದಲ್ಲಿ ಪ್ರತಿ ಶುಕ್ರವಾರ ವಾರದ ಸಂತೆ ನಡೆಯುತ್ತದೆ. ಅಂದು ಕೆಲವು ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ರಸ್ತೆಯ ಬದಿಯಲ್ಲೇ  ಇಟ್ಟುಕೊಂಡು ದಿನಪೂರ್ತಿ ವ್ಯಾಪಾರ ಮಾಡುತ್ತಾರೆ. ಗ್ರಾಹಕರು ರಸ್ತೆಯಲ್ಲೇ ನಿಂತುಕೊಂಡು ವ್ಯಾಪಾರ ಮಾಡಬೇಕಾಗುತ್ತದೆ. ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟದ ಕಡೆಗೆ ಸಂಚಾರ ಮಾಡುವ ಮುಖ್ಯರಸ್ತೆಯು ಇದಾಗಿರುವುದರಿಂದ ವಾಹನಗಳ ದಟ್ಟಣೆ ಹೆಚ್ಚಾಗಿರುತ್ತದೆ ಎನ್ನಲಾಗಿದೆ.
 
ಸಂಜೆಯ ಹೊತ್ತಿಗೆ ಸುತ್ತಮುತ್ತಲಿನ ಹಳ್ಳಿಗಳಿಂದ ಸಾವಿರಾರು ಮಂದಿ ಸಂತೆಗೆ ಬರುತ್ತಾರೆ. ಈ ವೇಳೆಯಲ್ಲಿ ಜನಸಂದಣಿ ಹೆಚ್ಚಾಗುವುದರಿಂದ ವಾಹನ ಸವಾರರು ಪರದಾಡಬೇಕಾಗುತ್ತದೆ. ವೃದ್ಧರು, ಮಹಿಳೆಯರು, ಮಕ್ಕಳೂ ತಮ್ಮ ಪೋಷಕರ ಜೊತೆ ಸಂತೆಗೆ ಬರುತ್ತಾರೆ. ವೇಗವಾಗಿ ಬರುವ ವಾಹನಗಳಿಂದ ಏನಾದರೂ ಅನಾಹುತಗಳಾದರೆ ಯಾರು ಹೊಣೆಯಾಗುತ್ತಾರೆ ಎಂದು ಜನ ಪ್ರಶ್ನಿಸಿದ್ದಾರೆ.
 
ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ತಿಳಿಸಿದರೆ ‘ಒಂದು ದಿನ ಮಾತ್ರ, ಎಲ್ಲಿಯಾದರೂ ವ್ಯಾಪಾರ ಮಾಡಿಕೊಂಡು ಹೋಗಲಿ, ಸ್ವಲ್ಪ ಅಡ್ಜೆಸ್ಟ್ ಮಾಡಿಕೊಳ್ಳಿ’ ಎಂದು ಸಲಹೆ ನೀಡುತ್ತಾರೆ. 
 
ಪುರಸಭಾ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು  ಈ ಬಗ್ಗೆ ಗಮನಹರಿಸಬೇಕು. ವಾರದ ಸಂತೆ ದಿನದಂದು ರಸ್ತೆಯ ಬದಿಯಲ್ಲಿ ಅಂಗಡಿಗಳನ್ನು ಇಟ್ಟುಕೊಳ್ಳುವ ವ್ಯಾಪಾರಸ್ಥರನ್ನು ಸಂತೆ ಮೈದಾನದ ಒಳಗೆ ಕಳುಹಿಸಬೇಕು. ಇಲ್ಲದಿದ್ದರೆ ಸಂಚಾರದ ಅಡಚಣೆ ಜತೆಗೆ ಜನರ ಪ್ರಾಣಾಪಾಯವು ಆಗಬಹುದು. ಇಂತಹ ಅನಾಹುತಗಳನ್ನು ಸಂಬಂಧಿಸಿದವರು ತಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
 
***
ಪುನಃ ರಸ್ತೆಯ ಬದಿಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ವ್ಯಾಪಾರಿಗಳನ್ನು ಪೊಲೀಸರು ಸಂತೆ ಮೈದಾನದೊಳಗೆ ಸ್ಥಳಾಂತರ ಮಾಡಬೇಕು
-ಕುಮಾರ್, ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.