ADVERTISEMENT

ರೆಡ್ಡಿ ಸಮುದಾಯಕ್ಕೆ ಮೀಸಲಾತಿ ಕೊಡಿ

29ಕ್ಕೆ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ: ಸಚಿವ ರಾಮಲಿಂಗಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 6:55 IST
Last Updated 16 ಜನವರಿ 2017, 6:55 IST
ರೆಡ್ಡಿ ಸಮುದಾಯಕ್ಕೆ ಮೀಸಲಾತಿ ಕೊಡಿ
ರೆಡ್ಡಿ ಸಮುದಾಯಕ್ಕೆ ಮೀಸಲಾತಿ ಕೊಡಿ   

ದೊಡ್ಡಬಳ್ಳಾಪುರ: ರೆಡ್ಡಿ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿ ಕಲ್ಪಿಸುವ ಕುರಿತು ಹಾಗೂ ಸಮುದಾಯಕ್ಕೆ ಸಿಗಬೇಕಾದ ಸೂಕ್ತ ಸ್ಥಾನಮಾನಗಳ ಬಗ್ಗೆ ಇದೇ 29ರಂದು ಬೆಂಗಳೂರಿನಲ್ಲಿ ನಡೆಯಲಿರುವ ರೆಡ್ಡಿ ಜನಾಂಗದ ಸಮಾವೇಶದಲ್ಲಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ನಗರದ ರಾಮಾಂಜನೇಯ ಕಲ್ಯಾಣ ಮಂದಿರದಲ್ಲಿ ವೇಮನರೆಡ್ಡಿ ಜನಸಂಘದಿಂದ ಅಖಿಲ ಕರ್ನಾಟಕ ರೆಡ್ಡಿ ಜನಾಂಗದ ಮಹಾ ಸಮಾವೇಶದ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

‘ಇನ್ನೊಂದು ಜನಾಂಗದ ಹಕ್ಕನ್ನು ಕಿತ್ತು ನಮಗೆ ಕೊಡಬೇಡಿ. ನಮಗೆ ನ್ಯಾಯಯುತವಾಗಿ ಸಿಗುವುದನ್ನು ಕೊಡಿ ಎಂದು ಕೇಳುತ್ತಿದ್ದೇವೆ’ ಎಂದ ಸಚಿವರು ರೆಡ್ಡಿ ಸಮುದಾಯ ಮನವಿ ಮಾಡಿರುವ ಮೀಸಲಾತಿ ಹಾಗೂ ಇತರೆ ಸೌಲಭ್ಯಗಳ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.

ಕೆಲವು ವಿಚಾರಗಳು ಕೇಂದ್ರ ಸರ್ಕಾರದ ಮಟ್ಟದಲ್ಲಿ ಆಗ ಬೇಕಾಗಿರುವುದನ್ನು ಪ್ರಸ್ತಾಪಿಸಲಾಗುವುದು ಎಂದರು. ಮಾಜಿ ಕೇಂದ್ರ ಸಚಿವ ಬಸವರಾಜ್ ಪಾಟೀಲ್ ಅನ್ಸಾರಿ ಮಾತನಾಡಿ, ಪ್ರಾದೇಶಿಕವಾಗಿ ವಿಭಿನ್ನ ನೆಲೆಗಟ್ಟಿನಲ್ಲಿ ಬೇರೂರಿರುವ ರೆಡ್ಡಿ ಸಮುದಾಯ ಎಲ್ಲರೂ ಒಂದಾಗಬೇಕಿದೆ. ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಗೂ ವೇಮನ ರೆಡ್ಡಿ ಜನಾಂಗದ ಮಹಾನ್ ವ್ಯಕ್ತಿಗಳಾಗಿದ್ದು, ಇನ್ನು ಮುಂದೆ ‘ಹೇಮ ವೇಮ’ ಹೆಸರಿನಲ್ಲಿ ಜನಾಂಗದ ಮುನ್ನಡೆಯಾಗಬೇಕಿದೆ ಎಂದರು.

ವಿಧಾನ ಪರಿಷತ್ ಅಧೀನ ಕಾರ್ಯದರ್ಶಿ ಸ್ಮಿತಾರೆಡ್ಡಿ ಮಾತನಾಡಿ, ರೆಡ್ಡಿ ಜನಾಂಗದವರು ಅಪ್ಪಟ ಕನ್ನಡಿಗರಾಗಿದ್ದು, ಇವರು ವಲಸೆ ಬಂದವರಲ್ಲ. 2300 ವರ್ಷಗಳ ಹಿಂದೆ ನಮ್ಮ ಜನಾಂಗದ ಉಲ್ಲೇಖ ಶಾಸನಗಳಲ್ಲಿ ಕಂಡುಬರುತ್ತದೆ. ರೆಡ್ಡಿ ಜನಾಂಗದ ಮಹತ್ವವನ್ನು ನಾವು ಮುಂದಿನ ಜನಾಂಗಕ್ಕೆ ತಿಳಿಸಬೇಕಿದೆ ಎಂದರು.

30 ಬಸ್: ಅಧ್ಯಕ್ಷತೆ ವಹಿಸಿ ಮಾತನಾಡಿದ ವೇಮನರೆಡ್ಡಿ, ಜನಸಂಘದ ತಾಲ್ಲೂಕು ಅಧ್ಯಕ್ಷ ಎಂ.ಜಗದೀಶ ರೆಡ್ಡಿ, ಅರಮನೆ ಮೈದಾನದಲ್ಲಿ  ನಡೆಯಲಿರುವ ರೆಡ್ಡಿ ಜನಾಂಗದ ಸಮಾವೇಶಕ್ಕೆ ತಾಲ್ಲೂಕಿನಿಂದ 30 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಸಮಾವೇಶಕ್ಕೆ ಜನಾಂಗದ ಮುಖಂಡರು ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಪಿಎಂಸಿ ಚುನಾವಣೆಯಲ್ಲಿ ಜಯಗಳಿಸಿದ ವಿಶ್ವನಾಥರೆಡ್ಡಿ ಅವರನ್ನು ಅಭಿನಂದಿಸಲಾಯಿತು.

ರಾಜ್ಯಸಭಾ ಸದಸ್ಯ ಕೆ.ಸಿ. ರಾಮಮೂರ್ತಿ, ಬೆಂಗಳೂರು ರೆಡ್ಡಿ ಜನಸಂಘದ ಅಧ್ಯಕ್ಷ ವಿಜಯ ರಾಘವರೆಡ್ಡಿ, ರಾಜ್ಯ ಕಾರ್ಯದರ್ಶಿ ಚಂದ್ರಾರೆಡ್ಡಿ, ರೆಡ್ಡಿ ಜನಾಂಗದ ರಾಜ್ಯ ಮುಖಂಡರಾದ ಮುನಿನಾಗಪ್ಪರೆಡ್ಡಿ, ಮುನಿವೆಂಕಟರೆಡ್ಡಿ, ಬೈರತಿಬಾಬುರೆಡ್ಡಿ, ಎನ್.ಮಾದಾರೆಡ್ಡಿ, ಸಿ.ತಿಮ್ಮಾರೆಡ್ಡಿ, ಲಕ್ಷ್ಮೀನಾರಾಯಣರೆಡ್ಡಿ, ಡಾ.ಶ್ರೀನಿವಾಸರೆಡ್ಡಿ, ಅಖಿಲೇಶ್, ಆನಂದ ರೆಡ್ಡಿ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.